ಕುಷ್ಟಗಿ: ಪ್ರೀತಿಸಿ ರಜಿಸ್ಟರ್ ಮದುವೆಯಾಗಿ, ಬರ್ಬರವಾಗಿ ಹತ್ಯ ಮಾಡಿ ಮತ್ತೂಬ್ಬಳ್ಳನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದವನನ್ನು ಮೂರು ವರ್ಷಗಳ ಬಳಿಕ ಬಂಧಿಸಲಾಗಿದೆ.
ಏಪ್ರಿಲ್ 5, 2019ರಂದು ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಿಟ್ನಳ್ಳಿ ಗ್ರಾಮದ ಬಳಿ ಅಪರಚಿತ ಯುವತಿಯ ಶವ ಪತ್ತೆಯಾಗಿತ್ತು. ತಲೆ ಮೇಲೆ ಸೈಜುಗಲ್ಲು ಹಾಕಿ ಕೊಲೆ ಮಾಡಿದ್ದರಿಂದ ಯುವತಿಯ ಮುಖ ಗುರುತು ಸಿಗದಂತಾಗಿತ್ತು. ಈ ಕುರಿತು ತನಿಖೆ ಮುಂದುವರಿದಿತ್ತು. ಕಳೆದ ಆ. 4ರಂದು ನೆರೆಬೆಂಚಿಯ ಹನುಮಂತಪ್ಪ ಬಂಡಿಹಾಳ ತನ್ನ ಮಗಳು ಮಂಜವ್ವ ಕಾಣೆಯಾಗಿದ್ದಾಳೆಂದು ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಕುಷ್ಟಗಿಯಲ್ಲಿದ್ದ ರವಿಕುಮಾರ ಹಿರೇಮನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಪತ್ನಿ ಮಂಜವ್ವಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆಗಿದ್ದೇನು?: ವಿಜಯಪುರ ವಿಂಡ್ ಪವರ್ ಕಂಪನಿಯಲ್ಲಿ ಕೆಲಸದಲ್ಲಿದ್ದ ಕುಷ್ಟಗಿಯ ರವಿಕುಮಾರ ಹಿರೇಮನಿಗೆ 2016ರಲ್ಲಿ ಹುಬ್ಬಳ್ಳಿ ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆಯಲ್ಲಿದ್ದ ನೆರೆಬೆಂಚಿಯ ಮಂಜವ್ವ ಅಲಿಯಾಸ್ ಮಂಜುಳಾ ಪರಿಚಯವಾಗಿದೆ. ಮಂಜವ್ವ ಕುಷ್ಟಗಿ ತಾಲೂಕಿನವಳು ಎಂದು ಗೊತ್ತಾಗಿ ಸಲುಗೆ ಪ್ರೀತಿಗೆ ತಿರುಗಿದೆ. 11-12-2018ರಂದು ಕುಷ್ಟಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅನ್ಯಜಾತಿ ಆಗಿದ್ದರೂ, ಪರಸ್ಪರ ಸಮ್ಮತಿಯೊಂದಿಗೆ ಮದುವೆಯಾಗಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಮಂಜವ್ವಳನ್ನು ರವಿಕುಮಾರ ಪುಸಲಾಯಿಸಿ ವಿಜಯಪುರಕ್ಕೆ ಬೈಕ್‌ನಲ್ಲಿ ಕರೆದೊಯ್ದು, ವಿಜಯಪುರ ಜಿಲ್ಲೆಯ ಹಿಟ್ನಳ್ಳಿ ಗ್ರಾಮದ ಬಳಿ ಹೆದ್ದಾರಿ ಬಳಿ ಸೈಜುಗಲ್ಲು ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದ.
ಇದಾದ ಬಳಿಕ ಮತ್ತೂಬ್ಬಳನ್ನು ಮದುವೆಯಾಗಿ ಜೀವನ ಸಾಗಿಸುತ್ತಿದ್ದ. ಮರು ಮದುವೆಯಾಗಿರುವ ವಿಚಾರ ಮಂಜವ್ವಳ ತಂದೆಗೆ ಗೊತ್ತಾಗುತ್ತಿದ್ದಂತೆ ನನ್ನ ಮಗಳು ಎಲ್ಲಿ? ಎಂದು ರವಿಕುಮಾರ ಹಿರೇಮನಿಯನ್ನು ವಿಚಾರಿಸಿದ್ದ. ಪ್ರಕರಣದಿಂದ ಪಾರಾಗಲು ಕುಷ್ಟಗಿ ಪಟ್ಟಣದ ಮೂವರು ಪ್ರಮುಖರ ಸಮಕ್ಷಮದಲ್ಲಿ ಬಾಂಡ್ ಪತ್ರ ಬರೆಯಿಸಿ, ಮಗಳು ಬೇರೊಂದು ಕಡೆ ಜೀವನ ನಡೆಸುತ್ತಿದ್ದಾಳೆ. ರವಿಕುಮಾರ ಹಿರೇಮನಿ ಇನ್ನೊಂದು ಮದುವೆಗೆ ಅಭ್ಯಂತರವೇನು ಇಲ್ಲ ಎಂದು ತಂದೆಯಿಂದ ಬಾಂಡ್ ಬರೆಯಿಸಿಕೊಂಡಿದ್ದು, ಮಂಜವ್ವಳನ್ನು ಕೊಲೆ ಮಾಡಿದ ವಿಷಯ ಬಾಯಿ ಬಿಟ್ಟಿರಲಿಲ್ಲ ಎಂದು ಆರೋಪಿ ರವಿಕುಮಾರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.