ಹಾಗೋ ಹೀಗೋ ಮೊದಲ ವರ್ಷ ಮುಗಿದದ್ದೇ ಗೊತ್ತಾಗಲಿಲ್ಲ. ಗುರು, ಫಸ್ಟ್ ಇಯರ್‌ನಲ್ಲಿ ಏನೂ ಮಾಡ್ಲೆ ಇಲ್ಲವಲ್ಲೋ ಅಂತ ಒಬ್ಬ. ಏಯ…! ಯಾಕ್ ತಲೆ ಕೆಡಿಸಿಕೊಳ್ತಿಯಾ ಮಚ್ಚಾ, ಇನ್ನೂ ಎರಡು ವರ್ಷ ಬಾಕಿ ಇದೆಯಲ್ಲಾ ಅಂತ ಇನ್ನೊಬ್ಬ!
ಆಗ ತಾನೆ ಸೆಕೆಂಡ್ ಪಿಯುಸಿ ಮುಗಿದಿತ್ತು. ಯಾವ ಕಾಲೇಜ್‌ಗೆ ಸೇರೋದು ಅಂತ ಯೋಚನೆಗೆ ಬಿದ್ದಿದ್ದೆ. ಮಾರ್ಕ್ಸ್ ಕಾರ್ಡ್ ಹಿಡಿದುಕೊಂಡು ಓಡಾಡಿದ ದಾರಿಯಲ್ಲಿ ಕೇಳಿದ್ದು ಹೇಳಿದ್ದು ಒಂದೇ, ಅದು ಡಿಗ್ರಿ. ಪಿಯುಸಿ ನಂತ್ರ ಏನಾದ್ರೂ ಕೋರ್ಸ್ ಮಾಡಿದ್ರೆ ಉಪಯೋಗ ಇಲ್ಲ. ಡಿಗ್ರಿ ಮಾಡಿದ್ರಷ್ಟೇ ಬೆಲೆ ಅಂದ್ರು ಜನ. ನಾನೂ ಕೂಡ, ಮಾಡಿದ್ರೆ ಡಿಗ್ರಿನೇ ಮಾಡೋದು ಅಂತ ಕೊನೇ ತೀರ್ಮಾನ ಮಾಡ್ಕೊಂಡು ಅಂತೂ ಎಸ್‌ಡಿಎಮ್ ಕಾಲೇಜ್ ಸೇರಿಕೊಂಡೆ.
ಆಗ ತಾನೇ ಲೈಟ್ ಆಗಿ ಮಳೆಗಾಲ ಶುರುವಾಗಿತ್ತು. ಮಿನಿ ವಿಧಾನಸೌಧದಂಥ ಕಾಲೇಜು. ಅತ್ತ ಇತ್ತ ಡಾಂಬರ್ ದಾರಿಗಳು. ಮೊದಲ ದಿನದ ಮೊದಲ ತರಗತಿ ಹೇಗೋ ಕಳೆಯಿತು. ಆಗ ಎಲ್ಲರೂ ನಮ್ಮವರಲ್ಲ, ಆದರೂ ನಮ್ಮವರೇ ಎಂಬ ಭಾವನೆ ಮನಸಲ್ಲಿ. ಬೆಸ್ಟ್ ಫ್ರೆಂಡ್ಸ್ ಗಳು, ಮನಸ್ಸಿಗೆ ಹತ್ತಿರ ಆಗೋರು, ಹೊಸ ಕ್ರಶ್‌ಗಳು, ಹೃದಯದ ಬಡಿತ ಏರಿಸೋರು, ಇಷ್ಟ ಆಗೋ ಮೇಷ್ಟ್ರು, ಇಷ್ಟ ಆಗ್ದೆ ಇರೊ ಕ್ಲಾಸ್‌ಗಳು… ಹೀಗೆ ದಿನಗಳಂತೂ ಲಂಗು ಲಗಾಮು ಇಲ್ದೇ ಇರೋ ಕುದುರೆಯ ಹಾಗೆ ಓಡುತ್ತಿದ್ದವು. ಹಾಗೋ ಹೀಗೋ ಮೊದಲ ವರ್ಷ ಮುಗಿದದ್ದೇ ಗೊತ್ತಾಗಲಿಲ್ಲ. ಗುರು, ಫಸ್ಟ್ ಇಯರ್‌ನಲ್ಲಿ ಏನೂ ಮಾಡ್ಲೆ ಇಲ್ಲವಲ್ಲೋ ಅಂತ ಒಬ್ಬ. ಏಯ…! ಯಾಕ್ ತಲೆ ಕೆಡಿಸಿಕೊಳ್ತಿಯಾ ಮಚ್ಚಾ, ಇನ್ನೂ ಎರಡು ವರ್ಷ ಬಾಕಿ ಇದೆಯಲ್ಲ; ಆಗ ಎಲ್ಲಾ ಆಟಾನೂ ಆಡಿದ್ರಾಯ್ತು ಬಿಡೋ ಅಂತ ಇನ್ನೊಬ್ಬ!
ರಜೆಯ ಮಜಾ ಮುಗಿಸಿ ಸೆಕೆಂಡ್ ಇಯರ್‌ಗೆ ಬಂದಾಯ್ತು. ಸದ್ಯ ಯಾವುದೂ ಬ್ಯಾಕ್ ಲಾಗ್ ಇರಲಿಲ್ಲ. ನಮ್ಮ ಜ್ಯೂನಿಯರ್‌ಗಳು ಕಾಲೇಜ್‌ಗೆ ಆಗ ತಾನೇ ಪಾದಾರ್ಪಣೆ ಮಾಡಿದ್ದರು. ಅದೇ ಟೈಮ್ ಅಲ್ಲಿ ತಾನೇ ತೆರೆಮರೆಯಲ್ಲಿ ಕಣಳು ಮಾತಾಡೋದು?! ಆ ಹುಡುಗಿ ಚೆನ್ನಾಗಿದಾಳಲ್ಲ ಮಚ್ಚಾ, ಈ ಹುಡುಗಿ ಚೆನ್ನಾಗಿ ಮಾತಾಡಿಸ್ತಾಳಲ್ಲ ಅಂತ… ಗೆಳೆಯರ ಗುಂಪಿನ ಜೊತೆ ಸೇರಿ ಹರಟೆ ಕೊಚ್ಚೋದೇ ಆಗ. ಈ ಹುಡುಗೀರು ಏನೂ ಕಮ್ಮಿ ಇರೋಲ್ಲ! ಕದ್ದು ನೋಡೋದು, ಕಣ್ ಮಿಟುಕಿಸೋದ್ರಲ್ಲಿ ಅವರದು ಎತ್ತಿದ ಕೈ! ಅಂತೂ ಇಂತೂ ಆಡಿ ಕಳೆದು ಸೆಕೆಂಡ್ ಇಯರ್ ಕೂಡ ಮುಗಿಯುವ ಹಂತಕ್ಕೆ ಬಂತು. ಈ ವರ್ಷ ಒಂದೆರಡು ಸಬ್ಜೆಕ್ಟ್ ಬ್ಯಾಕ್ ಆದರೂ ಪರವಾಗಿಲ್ಲ, ನೆಕ್ಸ್ಟ್ ಇಯರ್‌ನಲ್ಲಿ ನೋಡಿಕೊಳ್ಳುವಾ ಅಂತ ನಮಗೆ ನಾವೇ ಸಮಾಧಾನ ಮಾಡಿಕೊಂಡೆವು.
ಅಂತೂ ನಮ್ಮ ಡಿಗ್ರಿ ಲೈಫ್ನ ಕೊನೇ ಹಂತ ಬಂದೇಬಿಟ್ಟಿತ್ತು. ಅದೇ ಫೈನಲ್ ಇಯರ್! ಈ ವರ್ಷ ಕಳೆದೆರೆಡು ವರ್ಷಗಳ ಹಾಗಿರಲಿಲ್ಲ. ಲಾಸ್ಟ್ ಇಯರ್ ಅಂತೇನೋ ಗೆಳೆಯರು ದಿಢೀರನೆ ಸೀರಿಯಸ್ ಆಗಿºಟ್ಟಿದ್ರು. ದಿನಗಳಂತೂ ಬೆಳಕಿನ ವೇಗದಲ್ಲಿ ಚಲಿಸುತ್ತಿರುವಂತೆ ಭಾಸವಾದವು. ನೋಡ್ತಾ ಇರುವಂತೆಯೇ ಸೆಂಡ್ ಆಫ್ ದಿನ ಬಂದಿತ್ತು. ಕೊನೆಯ ಕ್ಷಣದಲ್ಲಿ ಹಿಂತಿರುಗಿ ನೋಡಿದರೆ ಎಷ್ಟೊಂದು ನೆನಪುಗಳು, ಹೆಜ್ಜೆ ಗುರುತುಗಳು…
ಮಚ್ಚಾ, ಬಾಸು, ಗುರು ಅಂತ ತರ್ಲೆ, ತಮಾಷೆ ಮಾಡಿ ಓಡಾಡಿದ ಸಿಹಿಕಹಿ ಪ್ರಸಂಗಗಳು ಮನದಲ್ಲಿ ಅಚ್ಚಳಿಯದೆ ಕುಳಿತಿದ್ದವು. ನಾವು ಕಳೆದ ಮಧುರ ಕ್ಷಣಗಳ, ಭವ್ಯ ನೆನಪುಗಳ ಗೊಂಚಲು ಹೊತ್ತು ಕನಸಿನ ಬೆನ್ನೇರಲು ಈಗ ಸಜ್ಜಾಗುತ್ತಿದ್ದೇವೆ.
ಶಾಂತಕುಮಾರ್