ರಾಯಪುರ : ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಇಂದು ಶನಿವಾರ ಬೆಳಗ್ಗೆ ನಡೆಸಿರುವ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಕಾರ್ಯಪಡೆ ಇಂದು ಬೆಳಗ್ಗೆ ನಕ್ಸಲ್ ನಿಗ್ರಹ ಕಾರ್ಯಾಚರಣೆ ಪ್ರಯುಕ್ತ ಖಲ್ಲಾರಿ ಮತ್ತು ಮೇಚ್‌ಕಾ
ಗ್ರಾಮದ ನಡುವಿನ ಅರಣ್ಯ ಪ್ರದೇಶಕ್ಕೆ ಹೋದಾಗ ಅಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿತು.
ಗುಂಡಿನ ಚಕಮಕಿ ಸ್ವಲ್ಪ ಹೊತಿನ ಬಳಿಕ ನಿಂತಾಗ ಮೂವರು ಮಹಿಳೆಯರ ಸಹಿತ ನಾಲ್ಕು ನಕ್ಸಲರ ಶವಗಳು ಬಿದ್ದಿರುವುದು ಕಂಡು ಬಂತು; ಅಂತೆಯೇ ಅವುಗಳನ್ನು ವಶಪಡಿಸಿಕೊಳ್ಳಲಾಯಿತು.
ಜತೆಗೆ ಭದ್ರತಾ ಪಡೆಗಳಿಗೆ ಎನ್‌ಕೌಂಟರ್ ತಾಣದಲ್ಲಿ ಏಳು ರೈಫಲ್‌ಗಳು ದೊರಕಿದವು ಎಂದು ರಾಜ್ಯದ ಉಪ ಇನ್ಸ್‌ಪೆಕ್ಟರ್ ಜನರ್ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಸುಂದರ್ ರಾಜ್ ಪಿ. ತಿಳಿಸಿದರು.
ಎನ್‌ಕೌಂಟರ್ ತಾಣದ ಆಸುಪಾಸಿನಲ್ಲಿ ಇನ್ನೂ ಅಡಗಿಕೊಂಡಿರಬಹುದಾದ ನಕ್ಸಲರಿಗೆ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಸುಂದರ್ ರಾಜ್ ತಿಳಿಸಿದರು.