ಹೊಸದಿಲ್ಲಿ: ಸುಮಾರು 3 ಸಾವಿರ ಚೀನೀ ಉತ್ಪನ್ನಗಳಿಗೆ ನಿರ್ಬಂಧ ಘೋಷಿಸುವ ಮೂಲಕ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಚೀನಕ್ಕೆ ಮಹಾನ್ ಬರೆ ಎಳೆದಿದೆ.
ಕಾಸ್ಮೆಟಿಕ್ಸ್, ಬ್ಯಾಗ್, ಗೊಂಬೆ, ಪೀಠೊಪಕರಣ, ಪಾದರಕ್ಷೆ, ವಾಚ್ ಸೇರಿದಂತೆ 450 ಸಂಸ್ಥೆಗಳ 3 ಸಾವಿರ ಉತ್ಪನ್ನಗಳಿಗೆ ನಿರ್ಬಂಧ ಹೇರಿದೆ.
‘ಲಡಾಖ್‌ನ ಎಲ್‌ಎಸಿಯಲ್ಲಿ ಚೀನದ ದುರಾಕ್ರಮಣವನ್ನು ಸಿಎಐಟಿ ತೀವ್ರವಾಗಿ ಖಂಡಿಸುತ್ತದೆ. ಭಾರತೀಯ ಯೋಧರನ್ನು ಹತ್ಯೆಗೈದ ಕಾರಣಕ್ಕಾಗಿ ಚೀನ ಸರಕುಗಳ ಬಹಿಷ್ಕಾರದ ಆಂದೋಲನ ಹೆಚ್ಚಿಸಲು ನಿರ್ಧರಿಸಿದ್ದೇವೆ. ಜೂ.10 ರಿಂದಲೇ ಭಾರತೀಯ ಸಾಮಾನ್- ಹಮಾರಾ ಅಭಿಯಾನ್ ಆರಂಭಿಸಿದ್ದೇವೆ. ದೇಶೀಯ ವಸ್ತುಗಳಿಗೆ ಪ್ರೋತ್ಸಾಹ ನೀಡಲು ಕರೆನೀಡುತ್ತಿದ್ದೇವೆ’ ಎಂದು ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.
ಕೋಲ್ಕತಾದಲ್ಲೂ ಬಹಿಷ್ಕಾರ: ‘ಲಾಕ್‌ಡೌನ್ ಕಾರಣದಿಂದ ಚೀನೀ ವಸ್ತುಗಳ ಆಮದು ಶೇ.40ರಷ್ಟು ಕುಸಿದುಹೋಗಿತ್ತು. ಈಗ ಗಾಲ್ವಾನ್‌ನಲ್ಲಿನ ಚೀನದ ದುರಾಕ್ರಮಣದ ಕಾರಣಕ್ಕಾಗಿ ವ್ಯಾಪಾರಿಗಳು ಎಲ್ಲ ಚೀನೀ ಉತ್ಪನ್ನಗಳ ಆರ್ಡರ್‌ಗಳನ್ನೂ ನಿಲ್ಲಿಸಿದ್ದಾರೆ’ ಎಂದು ಕಲ್ಕತ್ತಾ ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಸಿಯೇಶನ್ (ಸಿಸಿಎಚ್‌ಎಎ) ಅಧ್ಯಕ್ಷ ಸುಜಿತ್ ಚಕ್ರವರ್ತಿ ತಿಳಿಸಿದ್ದಾರೆ.
ಚೀನ ಬೇಕಂತಲೇ ಕೆಣಕುತ್ತಿದೆ
ಭಾರತ ಹಾಗೂ ಚೀನ ಗಡಿಯಲ್ಲಿನ ಬೇಗುದಿ ಬಗೆಹರಿಸಿಕೊಂಡು ಚೀನ ಆರ್ಥಿಕ ಪ್ರಗತಿಯತ್ತ ಗಮನಹರಿಸಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿರುವಾಗಲೇ ಬೇಕಂತಲೇ ಗಡಿ ತಗಾದೆ ತೆಗೆದಿರುವ ಚೀನ, ವಿನಾಕಾರಣ ಭಾರತವನ್ನು ಕೆಣಕುತ್ತಿದೆ ಎಂದು ಅಮೆರಿಕದಲ್ಲಿನ ಏಷ್ಯಾ ಸೊಸೈಟಿ ಪಾಲಿಸಿ ಸಂಸ್ಥೆಯ ಉಪಾಧ್ಯಕ್ಷ ಡೇನಿಯಲ್ ರಸ್ಸಲ್ ಹೇಳಿದ್ದಾರೆ. ಚೀನ ಸೈನಿಕರೇ ಮೊದಲು ದಾಳಿ ಆರಂಭಿಸಿ ಭಾರತದ ಯೋಧರನ್ನು ಪ್ರಚೋದಿಸುತ್ತಿದ್ದಾರೆ. ಆದರೆ, ಕ್ಸಿ ಜಿನ್‌ಪಿಂಗ್ ಮಾತ್ರ ಏನೂ ಆಗೇ ಇಲ್ಲ ಎನ್ನುವಂತೆ ಹೇಳಿಕೆ ನೀಡುತ್ತಿದ್ದಾರೆ ಎನ್ನುತ್ತಾರೆ ಡೇನಿಯಲ್ .