Advertisement

Yadagiri: ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ರಾಜಿಯಾಗದ ದಲಿತರಿಗೆ ಬಹಿಷ್ಕಾರ!

06:05 PM Sep 13, 2024 | Team Udayavani |

ಯಾದಗಿರಿ: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿಯಾಗದ ದಲಿತರ ವಿರುದ್ಧ ಸವರ್ಣೀಯರು ಬಹಿಷ್ಠಾರ ಹಾಕಿರುವ ಅಮಾನುಷ ಘಟನೆ ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ (Bapparaga Village) ನಡೆದಿದೆ.

Advertisement

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕನ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣವನ್ನು (POCSO Case) ರಾಜಿ ಸಂಧಾನದ ಮೂಲಕ ಬಗೆಹರಿಸಲು ಒಪ್ಪದೆ ಇರುವ ದಲಿತರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಹುಣಸಗಿಯ ಬಪ್ಪರಗಾ ಗ್ರಾಮದಲ್ಲಿ ದಲಿತರಿಗೆ ಅಂಗಡಿಯಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಬಹಿಷ್ಕರಿಸಿ, ಯಾವುದೇ ಸಾಮಗ್ರಿ ಕೊಡದಂತೆ ಅಂಗಡಿ ಮಾಲೀಕರಿಗೆ ಸವರ್ಣೀಯರು ಹೇಳಿದೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಇಡೀ ಮಾನವ ಕುಲವೇ ತಲೆತಗ್ಗಿಸುವ ಘಟನೆ ಇದಾಗಿದೆ ಎಂದು ಯಾದಗಿರಿ ನಾಗರಿಕರು ಹೇಳಿದ್ದಾರೆ.

ಬಾಲಕಿ ಮೇಲೆ ಮೇಲ್ವರ್ಗದ ಚಂದ್ರಶೇಖರ ಎಂಬವನು ಒಂದು ವರ್ಷದಿಂದಲೂ ಲೈಂಗಿಕ ಅತ್ಯಾಚಾರ ನಡೆಸಿ, ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ಬಾಲಕಿ ಗರ್ಭಿಣಿಯಾದ ವಿಷಯ ಮನೆಯವರಿಗೆ ಗೊತ್ತಾಗಿದೆ. ಬಾಲಕಿ ತಾಯಿ ಚಂದ್ರಮ್ಮ ಅವರು ಅಗಸ್ಟ್ 12 ರಂದು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಹಿಂಪಡೆಯುವಂತೆ ಸವರ್ಣೀಯರ ಒತ್ತಾಯಕ್ಕೆ ಮಣಿಯದ ದಲಿತ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರ ಮಾಡಲಾಗಿದೆ.

Advertisement

ಗ್ರಾಮದಲ್ಲಿ ದಲಿತರಿಗೆ ಈ ಪ್ರಕರಣದಿಂದ ಬೆಲೆ ಇಲ್ಲಂತಾಗಿದೆ ಎಂದು ದಲಿತ ಯುವಕನೊಬ್ಬ ಉದಯವಾಣಿಗೆ ತಿಳಿಸಿದ್ದಾನೆ.

ಆರೋಪಿ ಬಂಧನ

ಪೋಕ್ಸೋ ಪ್ರಕರಣಕ್ಕೆ ಒಳಗಾದ ಆರೋಪಿ ಚಂದ್ರಶೇಖರನನ್ನು ಈಗಾಗಲೇ ಬಂಧಿಸಲಾಗಿದ್ದು, ಶುಕ್ರವಾರದಂದು ಬಪ್ಪರಗಾ ಗ್ರಾಮಕ್ಕೆ ಭೇಟಿ ನೀಡಿ ಎರಡು ಸಮುದಾಯದೊಡನೆ ಮಾತುಕತೆ ನಡೆಸಲಾಗಿದೆ ಎಂದು ನಾರಾಯಣಪುರ ಪೊಲೀಸ್ ಠಾಣೆ ಪಿಎಸ್‌ಐ ರಾಜಶೇಖರ ರಾಠೋಡ ತಿಳಿಸಿದ್ದಾರೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಚಂದ್ರಶೇಖರನನ್ನು ಬಂಧಿಸಲಾಗಿದೆ. ಆದರೆ ಸವರ್ಣೀಯರು ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಮಾಡಲಾಗಿದೆ ಎಂಬ ಯಾವ ದೂರು ಇಲ್ಲಿರವರೆಗೂ ಬಂದಿಲ್ಲ, ಆದರೆ ಅಂತಹ ಘಟನೆ ನಡೆದಾಗ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ.ಜಿ ಅವರು ಉದಯವಾಣಿಗೆ ದೂರವಾಣಿ ಮೂಲಕ ತಿಳಿಸಿದರು.

ಸೆ.17ರಂದು ಬಪ್ಪರಗಾ ಗ್ರಾಮಕ್ಕೆ ಛಲವಾದಿ ಟಿ.ನಾರಾಯಣಸ್ವಾಮಿ ಭೇಟಿ

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ. ಸೆ.17ರಂದು ಖುದ್ದು ಗ್ರಾಮಕ್ಕೆ ಭೇಟಿ, ನೊಂದ ದಲಿತರ ಕುಟುಂಬಕ್ಕೆ ಸಾಂತ್ವನ ಹಾಗೂ ನ್ಯಾಯ ಒದಗಿಸುವುದಾಗಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅವರು ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next