Advertisement
ಈ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತಾದರೂ ಇದೀಗ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೊಂದು ತಂಡ ರಚಿಸಲಾಗಿದೆ.
Related Articles
Advertisement
ಸರ್ಕಾರದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸುವುದು, ಕಳೆದ ಬಾರಿಯ ಲೋಪಗಳನ್ನು ಸರಿಪಡಿಸಿಕೊಳ್ಳುವುದು ಸೇರಿದಂತೆ ಹಲವು ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಈ ಸಂದರ್ಭದಲ್ಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವಿಧಾನಸಭೆ ಚುನಾವಣೆ ಹೇಗೆ ಎದುರಿಸಬೇಕು. ಯಾವೆಲ್ಲಾ ವಿಚಾರಗಳನ್ನು ಮುಂದಿಟ್ಟು ಹೋಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಹೇಗೆ ಬಿಂಬಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಯಿತು.ಯಡಿಯೂರಪ್ಪ ಅವರು ಕೆಲವೊಂದು ಸಲಹೆ ನೀಡಿದರು ಎಂದು ಹೇಳಲಾಗಿದೆ.
ಪ್ರವಾಸದ ರೂಪು-ರೇಷೆ ಹೇಗಿರಬೇಕು, ಯಾರಿಗೆಲ್ಲಾ ಜವಾಬ್ದಾರಿ ನೀಡಬೇಕು ಮತ್ತಿತರ ವಿಚಾರಗಳ ಬಗ್ಗೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮತ್ತೂಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು ಎಂದು ಹೇಳಲಾಗಿದೆ.
ರಾಜ್ಯ ಪ್ರವಾಸ ಹಾಗೂ ಜನೋತ್ಸವ ಕಾರ್ಯಕ್ರಮಗಳು ಒಂದು ರೀತಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಚಾರ ಸಭೆಗಳಂತೆಯೇ. ಹೀಗಾಗಿ, ಜನೋತ್ಸವ ಹಾಗೂ ರಾಜ್ಯ ಪ್ರವಾಸ ಯಶಸ್ವಿಯಾಗಬೇಕು. ರಾಜ್ಯ, ಜಿಲ್ಲೆ, ತಾಲೂಕು, ಬೂತ್ ಮಟ್ಟದಲ್ಲಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು ಎಂದು ತಿಳಿದು ಬಂದಿದೆ.
ಒಟ್ಟಾರೆ ಯಡಿಯೂರಪ್ಪ ಆವರು ಸಂಸದೀಯ ಮಂಡಳಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗಳೂ ಆರಂಭಗೊಂಡಂತಾಗಿದೆ.
ಸಚಿವರ ವಿರುದ್ಧ ನಾಯಕರ ದೂರು“ನಮ್ಮ ಸಚಿವರು ನಮ್ಮ ವಿರೋಧಿಗಳ ಮನೆಯಲ್ಲೇ ಊಟ ಮಾಡಿಕೊಂಡು ಹೋಗ್ತಾರೆ. ಹೀಗಾದರೆ, ನಾವು ಏನು ಮಾಡಬೇಕು ನೀವೇ ಹೇಳಿ…’! – ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮುಂದೆ ಪರಾಜಿತ ಅಭ್ಯರ್ಥಿಗಳು ಇಟ್ಟ ದೂರು ಇದು. ಪರಾಜಿತ ಅಭ್ಯರ್ಥಿಗಳೊಂದಿಗೆ ನಡೆದ ಸಭೆಯಲ್ಲಿ, “ಸಚಿವರು ನಮ್ಮನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಯಾವುದೇ ಸಮಸ್ಯೆ ತೆಗೆದುಕೊಂಡು ಹೋದರೂ ಸ್ಪಂದಿಸುವುದಿಲ್ಲ. ಕಾರ್ಯಕರ್ತರೂ ತಮ್ಮ ಬಳಿ ಬಂದು ಇದೇ ಸಮಸ್ಯೆ ಹೇಳುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ವಿರೋಧಿಗಳ ಮನೆಯಲ್ಲೇ ಊಟ ಮಾಡಿಕೊಂಡು ಹೋಗುತ್ತಾರೆ. ಹೀಗಾದರೆ, ನಾವು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ ಒಳಜಗಳವನ್ನು ನಾವು ಎನ್‌ಕ್ಯಾಶ್ ಮಾಡಿಕೊಳ್ಳಬೇಕು. ಅದುಬಿಟ್ಟು ನಮ್ಮ ವಿರೋಧಿಗಳ ಮನೆಯಲ್ಲೇ ಊಟ ಮಾಡಿಕೊಂಡು ಹೋಗುವುದು ಎಷ್ಟು ಸರಿ. ಸ್ಥಳೀಯವಾಗಿ ಕಾರ್ಯಕರ್ತರಿಗೆ ನಾವು ಏನು ಅಂತ ಸಮಜಾಯಿಷಿ ನೀಡಬೇಕು’ ಎಂದು ಕೇಳಿದರು ಎಂದು ಹೇಳಲಾಗಿದೆ. ಕೆಲವು ಸಚಿವರು ಅಡ್ಜಸ್ಟ್‌ಮೆಂಟ್ ರಾಜಕೀಯ ಮಾಡುತ್ತಿದ್ದಾರೆ. ನಾವು ಪ್ರತಿಪಕ್ಷದ ವಿರುದ್ಧ ಹೋರಾಟ ಮಾಡುತ್ತಿದ್ದರೆ ನಮ್ಮವರೇ ಅವರೊಂದಿಗೆ ಇದ್ದರೆ ಯಾವ ಸಂದೇಶ ರವಾನೆಯಾಗುತ್ತದೆ ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಇದೆಲ್ಲವೂ ಕಾಂಗ್ರೆಸ್‌ನವರ ಕಟ್ಟು ಕಥೆ. ಅವರಿಗೆ ಬೇರೆ ವಿಷಯಗಳು ಸಿಗದ ಕಾರಣ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹಬ್ಬಿಸಿದ್ದರು. ಇದೀಗ ಅವರಿಗೆ ತಕ್ಕ ಉತ್ತರ ಸಿಕ್ಕಿದೆ.
– ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ