Advertisement

ಸ್ಟ್ರಾಂಗ್‌ ರೂಂಗೆ ಮೂರು ಹಂತದ ಭದ್ರತೆ

12:27 AM May 05, 2019 | Lakshmi GovindaRaj |

ಬೆಂಗಳೂರು: ನಗರ ವ್ಯಾಪ್ತಿಯ ಮೂರು ಲೋಕಸಭೆ ಕ್ಷೇತ್ರಗಳ ಮತಗಳು ಮೂರು ಹಂತದ ಭದ್ರತೆಯೊಂದಿಗೆ ಪ್ರತ್ಯೇಕ ಸ್ಟ್ರಾಂಗ್‌ ರೂಂಗಳಲ್ಲಿ ಸುರಕ್ಷಿತವಾಗಿವೆ.

Advertisement

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಮತಯಂತ್ರಗಳು ವಸಂತ ನಗರದ ಮೌಂಟ್‌ಕಾರ್ಮಲ್‌ ಕಾಲೇಜು, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಮತಯಂತ್ರಗಳು ಮಲ್ಯ ರಸ್ತೆಯ ಸೇಂಟ್‌ ಜೋಸೆಫ್ ಕಾಲೇಜು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾಕ್ಷೇತ್ರದ ಮತಯಂತ್ರಗಳು ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿದ್ದು, ಇವುಗಳಿಗೆ ಮೊದಲ ಹಂತದಲ್ಲಿ ಕೇಂದ್ರ ಮೀಸಲು ಪಡೆ (ಪ್ಯಾರಾ ಮಿಲಿಟರಿ ಸಿಬ್ಬಂದಿ), ಎರಡನೇ ಹಂತದಲ್ಲಿ ಕರ್ನಾಟಕ ರಾಜ್ಯ ಮೀಸಲು ಪಡೆ ಹಾಗೂ ಮೂರನೇ ಹಂತದಲ್ಲಿ ರಾಜ್ಯ ಪೊಲೀಸ್‌ ಸಿಬ್ಬಂದಿ ಭದ್ರತೆ ಒದಗಿಸಿದ್ದಾರೆ.

ಇನ್ನು ಸ್ಟ್ರಾಂಗ್‌ ರೂಂನ ಕಿಟಿಕಿಗಳನ್ನು ಸಂಪೂರ್ಣ ಸಿಮೆಂಟ್‌ನಿಂದ ಮುಚ್ಚಲಾಗಿದ್ದು, ಬಾಗಿಲುಗಳಿಗೆ ಚುನಾವಣಾ ಆಯೋಗ ಸೀಲ್‌ಗ‌ಳನ್ನು ಹಾಕಿದೆ. ಕೊಠಡಿಗೆ ವಿದ್ಯತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಇವುಗಳ ಜತೆಗೆ ನೂರಾರು ಸಿಸಿ ಕ್ಯಾಮೆರಾಗಳ ಕಣ್ಗಾವಲಿದ್ದು, ಕಾಲೇಜುಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದೆ.

ಮೂರು ಕಾಲೇಜುಗಳಲ್ಲಿ ಮಹಡಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇಡಲಾಗಿದೆ. ಇನ್ನು ಮೇ 23ರಂದು ಸ್ಟ್ರಾಂಗ್‌ ರೂಂ ಪಕ್ಕದಲ್ಲಿಯೇ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಸ್ಟ್ರಾಂಗ್‌ರೂಂಗಳ ಭದ್ರತೆ ವೀಕ್ಷಣೆಗೆ ಬರುವ ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಜಿಲ್ಲಾ ಚುನಾವಣಾಧಿಕಾರಿಗಳ ಒಪ್ಪಿಗೆ ಪತ್ರ ತಂದರೆ ಮಾತ್ರ ಭದ್ರತೆ ಕುರಿತು ಮಾಹಿತಿ ನೀಡಲಾಗುತ್ತಿದೆ.

ಎಲ್ಲಿಲ್ಲಿ ಎಷ್ಟೆಷ್ಟು ಸಿಬ್ಬಂದಿ ನಿಯೋಜನೆ?
* ಮೌಂಟ್‌ ಕಾರ್ಮಲ್‌ ಕಾಲೇಜಿನ ಬಳಿ 24 ಕೇಂದ್ರ ಮೀಸಲು ಪಡೆ ಸಿಬ್ಬಂದಿ, 24 ರಾಜ್ಯ ಮೀಸಲು ಪಡೆ ಸಿಬ್ಬಂದಿ, 46 ಸಿವಿಲ್‌ ಪೊಲೀಸ್‌ ಸಿಬ್ಬಂದಿ, 35 ಸಿಸಿ ಕ್ಯಾಮೆರಾ

Advertisement

* ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ 24 ಕೇಂದ್ರ ಮೀಸಲು ಪಡೆ ಸಿಬ್ಬಂದಿ, 24 ರಾಜ್ಯ ಮೀಸಲು ಪಡೆ ಸಿಬ್ಬಂದಿ, 42 ಸಿವಿಲ್‌ ಪೊಲೀಸ್‌ ಸಿಬ್ಬಂದಿ, 16 ಸಿಸಿ ಕ್ಯಾಮೆರಾ

* ಸೇಂಟ್‌ ಜೋಸೆಫ್ ಕಾಲೇಜಿನಲ್ಲಿ 25 ಕೇಂದ್ರ ಮೀಸಲು ಪಡೆ ಸಿಬ್ಬಂದಿ, 28 ರಾಜ್ಯ ಮೀಸಲು ಪಡೆಯ ಸಿಬ್ಬಂದಿ, 32 ಸಿವಿಲ್‌ ಪೊಲೀಸ್‌ ಸಿಬ್ಬಂದಿ, 62 ಸಿಸಿ ಕ್ಯಾಮೆರಾ

* ಮತಯಂತ್ರಗಳಿರುವ ಪ್ರತಿ ಕಾಲೇಜಿನಲ್ಲಿ ಒಬ್ಬ ಎಸಿಪಿ, 3 ಸಬ್‌ಇಸ್ಪೆಕ್ಟರ್‌, 9 ಎಸ್‌ಐಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ಭದ್ರತಾ ಸಿಬ್ಬಂದಿಗಳು 24*7, ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next