Advertisement

ಕೋವಿಡ್‌-19 ನಿಯಂತ್ರಣಕ್ಕೆ ಮೂರು ವಿಭಾಗ

09:11 AM Apr 14, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌-19 ಸೋಂಕು ನಿರಂತರ ಹೆಚ್ಚಾಗುತ್ತಿರುವುದರಿಂದ ಅದರ ನಿಯಂತ್ರಣಕ್ಕಾಗಿ ಸರಕಾರವು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲು ನಿರ್ಧರಿಸಿದೆ.

Advertisement

ಪ್ರತಿ ಹಳ್ಳಿ, ಜಿಲ್ಲೆ, ನಗರ ಮತ್ತು ವಾರ್ಡ್‌ ಮಟ್ಟದಲ್ಲಿ ಕೋವಿಡ್‌-19 ಸೋಂಕುಪೀಡಿತರ ಸಂಖ್ಯೆಯನ್ನು ಆಧರಿಸಿ ಹಾಟ್‌ಸ್ಪಾಟ್‌, ಕ್ಲಸ್ಟರ್‌ ಮತ್ತು ಝೋನ್ ಎಂದು 3 ಭಾಗಗಳಾಗಿ ವಿಂಗಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ಲ ಇಲಾಖೆಗಳ ಮುಖ್ಯಸ್ಥರು, ಡಿಜಿಪಿ, ಜಿಲ್ಲಾಧಿಕಾರಿಗಳು, ನಗರ ಸ್ಥಳೀಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಹಾಟ್‌ಸ್ಪಾಟ್‌
ಕಳೆದ 28 ದಿನಗಳಲ್ಲಿ ಕೋವಿಡ್‌-19 ಸೋಂಕುಪೀಡಿತ ಒಂದು ಪ್ರಕರಣ ಪತ್ತೆಯಾಗಿರುವ ಗ್ರಾಮ ಅಥವಾ ನಗರ ಪ್ರದೇಶದ ಒಂದು ವಾರ್ಡ್‌ ಅನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗುತ್ತದೆ. ಕೋವಿಡ್‌-19 ಸೋಂಕುಪೀಡಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಕನಿಷ್ಠ 50 ಜನರಿದ್ದರೆ ಆ ಪ್ರದೇಶವನ್ನೂ ಹಾಟ್‌ ಸ್ಪಾಟ್‌ ಎಂದು ಪರಿಗಣಿಸಲಾಗುತ್ತದೆ.

ಕ್ಲಸ್ಟರ್‌
ಒಂದು ಪ್ರದೇಶದಲ್ಲಿ, ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರದೇಶದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ ಅಥವಾ ನಿರೀಕ್ಷಿತ ಸಂಖ್ಯೆಯ ಸೋಂಕುಪೀಡಿತರು ಪತ್ತೆಯಾಗುವ ಪ್ರದೇಶವನ್ನು ಕ್ಲಸ್ಟರ್‌ ಎಂದು ಪರಿಗಣಿಸ ಲಾಗುತ್ತದೆ.

ಝೋನ್
ಕೋವಿಡ್‌-19 ಪೀಡಿತ ವ್ಯಕ್ತಿ ವಾಸವಿರುವ ಪ್ರದೇಶದ ಸುತ್ತ 3 ಕಿ.ಮೀ. ವ್ಯಾಪ್ತಿಯನ್ನು ಝೋನ್ ಎಂದು ಪರಿಗಣಿಸಲಾಗುತ್ತದೆ. ಝೋನ್
ವ್ಯಾಪ್ತಿ ಯಲ್ಲಿ ಕನಿಷ್ಠ ಒಂದು ಹಾಟ್‌ಸ್ಪಾಟ್‌ ಇರಲೇ ಬೇಕು. ಈ ರೀತಿ ಗುರುತಿಸಿರುವ ಝೋನ್ ಗಳಲ್ಲಿ ಮನೆ ಮನೆಗೆ ತೆರಳಿ ಕೋವಿಡ್‌-19 ಸೋಂಕುಪೀಡಿತರ ಪತ್ತೆ, ಆರೋಗ್ಯ ತಪಾಸಣೆ ನಡೆಸಬೇಕು ಮತ್ತು ಕೋವಿಡ್‌-19 ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.

Advertisement

ರಸ್ತೆಗಿಳಿದ ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಾದ ಬಳಿಕ ಜನಸಾಮಾನ್ಯರ ಸ್ಥಿತಿಗತಿ ತಿಳಿದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ರವಿವಾರ ಸ್ವತಃ ರಸ್ತೆಗಿಳಿದರು. ಬೀದಿಬದಿ ವ್ಯಾಪಾರಿಗಳು, ವರ್ತಕರು, ವಾಹನ ಸವಾರರು, ಆಟೊ ಚಾಲಕರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಮಾತಿ ಗಿಳಿದ ಸಿಎಂ, ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂಬ ಭರವಸೆ ನೀಡಿದರು.

ವಸ್ತುಗಳ ಸಾಗಣೆಗೆ ತೀವ್ರ ತೊಂದರೆಯಾಗುತ್ತಿದ್ದು, ಪಾಸ್‌ ಒದಗಿಸಬೇಕು. ಅಗತ್ಯ ವಸ್ತುಗಳ ಪೂರೈಕೆಗಾಗಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ವ್ಯಾಪಾರಿಗಳ ಮನವಿಗೆ ತತ್‌ಕ್ಷಣ ಸ್ಪಂದಿಸಿದ ಸಿಎಂ, ತ್ವರಿತವಾಗಿ ಪಾಸ್‌ ವಿತರಿಸುವಂತೆ ಸ್ಥಳದಲ್ಲೇ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಅಹವಾಲು ಆಲಿಸಿದ ಅವರು, ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಲಾಕ್‌ಡೌನ್‌ ಜಾರಿಗೆ ಶ್ರಮಿಸುತ್ತಿರುವ ಪೊಲೀಸ್‌ ಅಧಿಕಾರಿ, ಸಿಬಂದಿಯ ಯೋಗಕ್ಷೇಮ ವಿಚಾರಿಸಿದ ಯಡಿಯೂರಪ್ಪ ಅವರು, ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಆತ್ಮಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡಿದರು. ಸುಮಾರು ಎರಡೂಕಾಲು ತಾಸು ಕಾಲ ನಗರದಲ್ಲಿ ಪರಿಶೀಲನೆ ನಡೆಸಿ ವಸ್ತುಸ್ಥಿತಿ ಅವಲೋಕಿಸಿದರು.

ಸೋಂಕುಪೀಡಿತ ವೃದ್ಧೆಯ ಪತಿ ಸಾವು
ರಾಜ್ಯದಲ್ಲಿ ಕೋವಿಡ್‌-19 ಅಬ್ಬರ ಹೆಚ್ಚಾಗುತ್ತಲೇ ಇದ್ದು, ವಿಜಯಪುರದಲ್ಲಿ ಒಂದೇ ದಿನ ಆರು ಮಂದಿಯಲ್ಲಿ ದೃಢಪಟ್ಟಿದೆ. ಈ ಸೋಂಕುಪೀಡಿತರಲ್ಲಿ ಒಬ್ಬರಾದ 60 ವರ್ಷದ ವೃದ್ಧೆಯ ಪತಿ ಸಾವನ್ನಪ್ಪಿದ್ದು, ಆತಂಕ ಸೃಷ್ಟಿಸಿದೆ. ಸಾವಿಗೀಡಾದ ವ್ಯಕ್ತಿಗೂ ಕೋವಿಡ್‌-19 ಲಕ್ಷಣಗಳು ಕಾಣಿಸಿಕೊಂಡಿದ್ದವಾದರೂ ದೃಢಪಟ್ಟಿರಲಿಲ್ಲ.ಈ ವೃದ್ಧನ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬರುವ ಮುನ್ನವೇ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಮತ್ತೆ 16 ಮಂದಿಗೆ ಸೋಂಕು
ಈ ಮಧ್ಯೆ ವಿಜಯಪುರದ ಆರು ಮಂದಿ ಸೇರಿ ರಾಜ್ಯದಲ್ಲಿ ರವಿವಾರ 16 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ವಿಜಯಪುರದಲ್ಲಿ ಮೂವರು ಮಕ್ಕಳಿಗೂ ಸೋಂಕು ಕಾಣಿಸಿಕೊಂಡಿದೆ. ಜತೆಗೆ ಬೆಳಗಾವಿ ಜಿಲ್ಲೆಯ ನಾಲ್ವರು, ಬೆಂಗಳೂರಿನ ಮೂವರು, ಕಲಬುರಗಿಯ ಇಬ್ಬರು, ಮೈಸೂರಿನ ಒಬ್ಬರಿಗೆ ಸೋಂಕು ತಗುಲಿದೆ. ವಿಜಯಪುರದ ಪೀಡಿತರು ವಿದೇಶ ಪ್ರಯಾಣವನ್ನೂ ಮಾಡಿಲ್ಲ, ವಿದೇಶದಿಂದ ಬಂದವರ ಸಂಪರ್ಕವನ್ನೂ ಮಾಡಿಲ್ಲ.

ದೇಶಾದ್ಯಂತ 9 ಸಹಸ್ರ ದಾಟಿದ ಸೋಂಕುಪೀಡಿತರು
ದೇಶಾದ್ಯಂತ ಒಟ್ಟಾರೆ ಸೋಂಕುಪೀಡಿತರ ಸಂಖ್ಯೆ 9 ಸಾವಿರ ದಾಟಿದೆ. ಕಳೆದ 24 ತಾಸುಗಳಲ್ಲಿ 900ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ ರವಿವಾರ 221 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ತಮಿಳುನಾಡಿನಲ್ಲಿ 106, ದಿಲ್ಲಿಯಲ್ಲಿ 85, ರಾಜಸ್ಥಾನದಲ್ಲಿ 96, ಗುಜರಾತ್‌ನಲ್ಲಿ 48 ಹೊಸ ಪ್ರಕರಣಗಳು ಕಂಡುಬಂದಿವೆ. ಇದೇ ಅವಧಿಯಲ್ಲಿ 85 ಮಂದಿ ಚೇತರಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ 325ಕ್ಕೆ ಏರಿದೆ.

 

Advertisement

Udayavani is now on Telegram. Click here to join our channel and stay updated with the latest news.

Next