Advertisement

ಮುಕ್ಕಾಲು ಪಾಲು ಬಿಲ್ಲವ ಯುವಕರು ಕಾರಾಗೃಹದಲ್ಲಿ

12:28 PM Jan 29, 2018 | Team Udayavani |

ಬೆಂಗಳೂರು: “ಶೇ.75ರಷ್ಟು ಬಿಲ್ಲವ ಯುವಕರು ಇಂದು ಜೈಲಿನಲ್ಲಿದ್ದು, ಸಮುದಾಯದ ಯುವಕರು ದಾರಿ ತಪ್ಪುತ್ತಿದ್ದಾರೆ,’ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಕವಿತಾ ಸನಿಲ್‌ ಬೇಸರ ವ್ಯಕ್ತಪಡಿಸಿದರು.

Advertisement

ಬಿಲ್ಲವ ಅಸೋಸಿಯೇಷನ್‌, ಬೆಂಗಳೂರು ವತಿಯಿಂದ ಭಾನುವಾರ “ಬಿಲ್ಲವ ಭವನ’ದ ದೇವಕಿ ಆನಂದ ಸುವರ್ಣ ಹಾಲ್‌ನಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಮಹಿಳಾ ದಿನಾಚರಣೆ-2018′ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಬಿಲ್ಲವ ಸಮಾಜ ಸಂಘಟಿತವಾಗಿದೆ. ಆದರೆ, ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು ಜನಸಂಖ್ಯೆ ಇರುವ ಬಿಲ್ಲವ ಸಮಾಜ, ರಾಜಕೀಯ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಇಂದು ಅವಕಾಶವಂಚಿತವಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮಾಜ ಒಗ್ಗಟ್ಟಾದರೆ, ನಮ್ಮನ್ನು ಎದುರಿಸುವ ಶಕ್ತಿ ಯಾರಿಗೂ ಇರುವುದಿಲ್ಲ ಎಂದರು.

ಕೊಲೆ ಮಾಡಬೇಡಿ: ಬಿಲ್ಲವ ಅಸೋಸಿಯೇಷನ್‌, ಬೆಂಗಳೂರು ಅಧ್ಯಕ್ಷ ಎಂ. ವೇದಕುಮಾರ್‌ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮಾಜದ ಯುವಕರು ಯಾರದೋ ಮಾತು ಕೇಳಿ ದಾರಿ ತಪ್ಪುತ್ತಿದ್ದಾರೆ. ಅವರಿಗೆ ಬುದ್ಧಿವಾದ ಹೇಳಿ, ಸರಿ ದಾರಿಗೆ ತರಬೇಕಿದೆ.

ಅದಕ್ಕಾಗಿ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಲ್ಲವ ಸಮಾಜದ 600ಕ್ಕೂ ಹೆಚ್ಚು ಯುವ ವೃತ್ತಿಪರರನ್ನು ಒಟ್ಟಿಗೆ ಸೇರಿಸಿ ಸಭೆ ಮಾಡಲಾಯಿತು. “ಕೊಲೆಯಾಗಬೇಡಿ, ಕೊಲೆ ಮಾಡಬೇಡಿ’ ಇದರಿಂದ ಕುಟುಂಬ ಮತ್ತು ಸಮಾಜ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಆ ಸಭೆಯಲ್ಲಿ ಹೇಳಲಾಯಿತು ಎಂದರು.

Advertisement

ಸಾಧಕರಿಗೆ ಸನ್ಮಾನ: ಇದೇ ವೇಳೆ ಮಂಗಳೂರು ಮೇಯರ್‌ ಕವಿತಾ ಸನಿಲ್‌, ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ, ಸಮಾಜದ ಸಾಧಕರಾದ ಸುಶೀಲಾ ಆನಂದ್‌ ಬಿಜೈ, ಶಶಿ ಗಣೇಶ್‌, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿಲ್ಲವ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ವಿ. ಗುತ್ತೇದಾರ್‌, ಬಿಬಿಎಂಪಿ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ, ಕರ್ನಾಟಕ ಆರ್ಯ ಈಡೀಗ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ಅಸೋಸಿಯೇಷನ್‌ನ ಎಂ.ರಮೇಶ್‌ ಬಂಗೇರ, ಕೇಶವ ಪೂಜಾರಿ, ಭಾಸ್ಕರ ಪೂಜಾರಿ, ರಾಜೇಶ್‌ ಕುಮಾರ್‌, ಬಿ.ಎಂ.ಉದಯಕುಮಾರ್‌, ರತ್ನಾ ಜಯರಾಮ್‌, ಜಲಜಾ ಶೇಖರ್‌, ಎಸ್‌.ಶಾರದಾ ಮತ್ತಿತರರು ಇದ್ದರು. 

ಕಾಗೋಡು ಸೋತಿದ್ರೆ ನಾನೇ ಮಂತ್ರಿಯಾಗ್ತಿದ್ದೆ!…: “ಕಾಗೋಡು ತಿಮ್ಮಪ್ಪ ಸೋತಿದ್ದರೆ, ನಾನೇ ಕಂದಾಯ ಮಂತ್ರಿ ಆಗುತ್ತಿದ್ದೆ. ಕಾಗೋಡು ಅವರು 6 ಬಾರಿ ಗೆದ್ದರೆ, ನಾನು 5 ಬಾರಿ ಗೆದ್ದಿದ್ದೇನೆ. ನನಗಿಂತ ಸಿನೀಯರ್‌ ಎಂದು ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.

ನಾನು ಕಂದಾಯ ಮಂತ್ರಿ ಆಗಿದ್ದರೆ, ನಿಂತ ಜಾಗದಲ್ಲೇ ಬಿಲ್ಲವ ಸಂಘಕ್ಕೆ ಜಾಗ ಮಂಜೂರು ಮಾಡುತ್ತಿದ್ದೆ,’ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌ ಹೇಳಿದರು. ಹಾಗೇ ಬೆಂಗಳೂರಿನಲ್ಲಿ ಬಿಲ್ಲವ ಅಸೋಸಿಯೇಷನ್‌ನ ಶಿಕ್ಷಣ ಸಂಸ್ಥೆ ರಂಭಿಸಲು ಸರ್ಕಾರದಿಂದ ಐದು ಎಕರೆ ಜಾಗ ಕೊಡಿಸಲು ಸಿಎಂ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next