Advertisement
ಪಿ. ಲಂಕೇಶ್ ರಚನೆಯಾದ ಸಂಕ್ರಾಂತಿ ನಾಟಕಕ್ಕೆ ನಿರ್ದೇಶನ ನೀಡಿದವರು ವಸಂತ ಬನ್ನಾಡಿ, ರಂಗ ಪ್ರಸ್ತುತಿ ಲಾವಣ್ಯ ತಂಡ ಬೈಂದೂರು. ಶರಣರಾಗಿ ಪರಿವರ್ತಿತರಾದ ಹರಳಯ್ಯ ಮತ್ತು ಮಧುವಯ್ಯರ ಮಕ್ಕಳ ಮದುವೆಯನ್ನು ಏರ್ಪಡಿಸಿ ಶರಣರಲ್ಲಿ ಭೇದವಿಲ್ಲವೆಂದು ಸಾರಿದ ಐತಿಹಾಸಿಕ ಘಟನೆ ನಾಟಕದ ಕೇಂದ್ರವಾಗಿ ತೆರೆದುಕೊಳ್ಳುತ್ತದೆ. ಇದಕ್ಕೆ ಶರಣರಾಗಿ ಪರಿವರ್ತಿತಗೊಳ್ಳುತ್ತಿರುವ ರುದ್ರನ ಕುಟುಂಬ ಮತ್ತು ತಾಂಡ ಸ್ಪಂದಿಸುವ ರೀತಿ ಒಂದು ಮುಖವಾದರೆ ಮಗಳನ್ನು ಮತ್ತು ಮಡಿವಂತಿಕೆಯನ್ನು ಉಳಿಸಿಕೊಳ್ಳಲು ಬ್ರಾಹ್ಮಣ ಸಮುದಾಯ ನಡೆಸುವ ಹೋರಾಟ ಇನ್ನೊಂದು ಮುಖ. ಇದು ಒಂದು ಸಂಘರ್ಷವಾಗಿ ರೂಪುಗೊಳ್ಳುತ್ತದೆ. ಉಜ್ಜ (ಗಣೇಶ ಕಾರಂತ) ತಾಂಡದ ದಲಿತರ ಮುಖಂಡನಾಗಿ ನೀಡಿದ ನಟನೆ ಮಾರ್ಮಿಕವಾಗಿ ಬಂದಿದೆ. ಅದೇ ರೀತಿ ಎರಡೂ ಸಮುದಾಯದವರ ಗುಂಪಿನ ಚಲನೆಯ ದೃಶ್ಯ ಸಂಯೋಜಿತವಾಗಿ ರೂಪುಗೊಂಡು ರಂಗ ಸಮತೋಲನ ಕಾಯ್ದುಕೊಂಡಿದೆ. ರುದ್ರ (ಸುಬ್ರಮಣ್ಯ) ಉಷಾ (ಚೈತ್ರಾ) ಸಮರ್ಪಕವಾಗಿ ಪಾತ್ರ ಪೋಷಣೆಯನ್ನು ಮಾಡಿದ್ದಾರೆ.
Related Articles
Advertisement
ಕೊನೆಯ ದಿನ ಶಶಿರಾಜ ಕಾವೂರು ರಚಿಸಿದ ಸಂಪಿಗೆ ನಗರ ಪೊಲೀಸ್ ಸ್ಟೇಶನ್ ರಂಗಕೃತಿಯನ್ನು ಅಭಿನಯಿಸಿದವರು ರಂಗ ಸಂಗಾತಿ (ರಿ.) ಮಂಗಳೂರು, ನಿರ್ದೇಶನ ಮೋಹನ್ ಚಂದ್ರ ಯು. ಸಂಪಿಗೆ ನಗರ ಪೊಲೀಸ್ ಸ್ಟೇಶನ್ ನಾಟಕ ಪ್ರಸ್ತುತ ಭಾರತದ ಪೊಲೀಸ್ ವ್ಯವಸ್ಥೆ ಮತ್ತು ಅದರೊಂದಿಗೆ ತಳುಕು ಹಾಕಿಕೊಂಡಿರುವ ಭ್ರಷ್ಟ ರಾಜಕೀಯ ದುರುಳರ ಕಾಣದ ಕೈಗಳನ್ನು ಬಯಲಿಗೆಳೆಯುತ್ತದೆ.
ಎಸ್.ಐ. ಚೆಲುವಸ್ವಾಮಿ ಗೋಸುಂಬೆಯ ವ್ಯಕ್ತಿತ್ವದ ಮನುಷ್ಯ. ಕ್ಷಣ ಪಿತ್ತ ಕ್ಷಣ ಚಿತ್ತೆ ಅನ್ನುವ ಸ್ವಭಾವದವ. ಕಾನೂನಾತ್ಮಕವಾಗಿ ದತ್ತ ಅಧಿಕಾರವನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಾನೆ. ಗಾಂಧೀವಾದಿ , ಹೋರಾಟಗಾರ ಪ್ರೊಫೆಸರ್ ಶ್ಯಾಮಸುಂದರ್ ಅವರನ್ನು ಅರಿಯದೆ ಮಾಡಿದ ಅಚಾತುರ್ಯಕ್ಕೆ ಸೈಬರ್ ಅಪರಾಧ ಕುಣಿಕೆಗೆ ಸಿಲುಕಿಸುವ ಹುನ್ನಾರ ನಡೆಯುತ್ತದೆ. ಪೊಲೀಸರ ಅತಿಥಿಯಾಗಿ, ಸ್ಟೇಶನ್ನಿನಲ್ಲಿ ಆರಕ್ಷಕರ ಭ್ರಷ್ಟತೆ ಮತ್ತು ಅಮಾನವೀಯತೆಯ ದರ್ಶನವಾಗುತ್ತದೆ. ಅರಿತು ಯಾವ ಅಪರಾಧವನ್ನೂ ಮಾಡದ ಅವರನ್ನು ಎರಡಯ ದಿನಗಳ ಕಾಲ ನಿರಂತರವಾಗಿ ಸತಾಯಿಸಲಾಗುತ್ತದೆ. ರಾಜಕೀಯ ಕಾರಣಕ್ಕಾಗಿ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡ ಮಗನನ್ನು ಖೆಡ್ಡಕ್ಕೆ ಸಿಲುಕಿಸುವ ಸಲುವಾಗಿ ಶ್ಯಾಮಸುಂದರರನ್ನು ಬಳಸಿಕೊಳ್ಳುತ್ತಾರೆ. ಸತ್ಯ, ಅಹಿಂಸೆ, ಮಾನವಿಯತೆ, ಸಮಾನತೆಗಳು ಗಾಂಧೀಜಿಯ ಛಾಯಾಚಿತ್ರದ ಅಡಿಯಲ್ಲೇ ನಲುಗಿ ಹೋಗುತ್ತವೆ. ಚಿತ್ರ ನಟ, ಹಣವಂತ ಮಾಡಿದ ಆ್ಯಕ್ಸಿಡೆಂಟ್ ಡೀಲಿನಲ್ಲಿ ಮುಚ್ಚಿ ಹೋಗುತ್ತದೆ. ಗಾಯಾಳುವಿಗೆ ಸಿಗುವುದು ಮೂರು ಕಾಸು, ಎಸ್.ಐ.ಗೆ. ಸಿಂಹಪಾಲು. ನೌಕರಶಾಹಿಯ ಸಮೂಹದಲ್ಲೂ ಎ.ಎಸ್.ಐ. ರಜಾಕ್ (ಲಕ್ಷ್ಮಣ ಕುಮಾರ್ ಮಲ್ಲೂರು) ನಂತಹ ಪ್ರಾಮಾಣಿಕರೂ ಮಾನವ ಹಕ್ಕು ಕಾಯ್ದೆಯ ಉರುಳಿಗೆ ಸಿಕ್ಕಿ ನಲುಗುವುದು ಕಾಲದ ವ್ಯಂಗ್ಯವಾಗಿದೆ. ಕೊನೆಗೂ ಶ್ಯಾಮಸುಂದರ್ ಸರಿಯಾದ ದೂರು ಇಲ್ಲದೇ ಹೋದರೂ ಪೊಲೀಸ್ ಸ್ಟೇಶನ್ ಎಂಬ ಕುಲುಮೆಯಲ್ಲಿ ಬೆಂದು ಹೈರಾಣಾಗುತ್ತಾರೆ. ನಕ್ಸಲ್ ಹಾದಿ ತುಳಿದ ಮಗ ಮನೋಹರ ಪೊಲೀಸರ ಎನ್‌ಕೌಂಟರಿಗೆ ಬಲಿಯಾಗುತ್ತಾನೆ. ಹಾಗೆ ಎರಡೂ ವಿಧದ ಕ್ರಾಂತಿ ಭ್ರಷ್ಟ ವ್ಯವಸ್ಥೆಯ ಮುಂದೆ ಮಂಡಿಯೂರುವ ದುರಂತದೊಂದಿಗೆ ವಾಸ್ತವವನ್ನು ತೆರೆದಿಡುತ್ತದೆ.
ಉತ್ತಮ ಶರೀರ – ಶಾರೀರ , ಆಂಗಿಕತೆ ವಿಕ್ಷಿಪ್ತತೆಯನ್ನು ಮೈಗೂಡಿಸಿಕೊಂಡು ಎಸ್.ಐ. ಚಲುವಸ್ವಾಮಿ (ಗೋಪಿನಾಥ ಭಟ್ಟ) ಗಮನ ಸೆಳೆಯುತ್ತಾರೆ. ಪ್ರೊ| ಶಾಂತಾರಾಮ್ (ಚಂದ್ರಹಾಸ ಉಳ್ಳಾಲ) ನೋಡುಗರಲ್ಲಿ ಕರುಣಾರಸ ಹರಿಸುತ್ತಾರೆ. ಅನೇಕರ ಅನುಭವದ ಮೊತ್ತವಾಗಿ ನಟನೆ ಗಮನ ಸೆಳೆಯುತ್ತದೆ. ಬಾಟಾಸ್ವಾಮಿ (ರಂಜನ ಬೋಳೂರು) ಹಾಸ್ಯದ ಹೊನಲನ್ನೇ ಹರಿಸಿದ್ದಾರೆ. ಅಟೋ ಮುರಳಿ ಹಾಗೂ ಪಿ.ಸಿ. ಜಾರ್ಜ್ ಆಗಿ ಮುರಳೀದರ್ ಕಾಮತ್ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಹಳೆ ವಿದ್ಯಾರ್ಥಿ (ಶಶಿರಾಜ್ ರಾವ್ ಕಾವೂರು) ಉತ್ತಮ ನಿರ್ವಹಣೆ ನೀಡಿದ್ದಾರೆ. ಐ.ಜಿ. ಸತ್ವಾಲ್ ಸಿಂಗ್ (ಸಂತೋಷ ಶೆಟ್ಟಿ) ಗಂಭೀರ ರಂಗಚಲನೆಯಿಂದ ಗಮನ ಸೆಳೆದಿದ್ದಾರೆ.ಕ್ಯಾಂಟೀನ್ ದಿನೇಶ್ (ಶ್ರೀನಿವಾಸ ಕುಪ್ಸಲ) ಜನಸಾಮಾನ್ಯನ ಪ್ರತಿನಿಧಿಯಾಗಿ ಸಹಾನುಭೂತಿಯ ಸ್ಪಂದನದೊಂದಿಗೆ ಉತ್ತಮ ನಟನೆ ಒದಗಿಸಿದ್ದಾರೆ.
ಮಂಜುನಾಥ್ ಶಿರೂರು