Advertisement

ಅಪಘಾತದಲ್ಲಿ ನಟ ದರ್ಶನ್‌ ಸೇರಿ ಮೂವರಿಗೆ ಗಾಯ​​​​​​​

06:00 AM Sep 25, 2018 | |

ಮೈಸೂರು: ನಗರದ ಹೆಬ್ಟಾಳು ರಿಂಗ್‌ರಸ್ತೆಯಲ್ಲಿ ಸೋಮವಾರ ಮುಂಜಾನೆ 3.30ರ ವೇಳೆ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಡೈನಾಮಿಕ್‌ ಹೀರೋ ದೇವರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಅವರು ಗಾಯಗೊಂಡಿದ್ದಾರೆ.

Advertisement

ಅಪಘಾತದಲ್ಲಿ ದರ್ಶನ್‌ ಅವರ ಬಲಗೈನ ಮೂಳೆ ಮುರಿದಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ
ನಡೆಸಲಾಗಿದೆ. ದೇವರಾಜ್‌ ಮತ್ತು ಪ್ರಜ್ವಲ್‌ ದೇವರಾಜ್‌ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್‌ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ವಿಭಜಕಕ್ಕೆ ಡಿಕ್ಕಿ: “ಒಡೆಯ’ ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ನಟ ದರ್ಶನ್‌ ಅವರು ಭಾನುವಾರ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ, ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿ,ಪ್ರಾಣಿಗಳನ್ನು ದತ್ತು ಪಡೆದಿದ್ದರು. ಅಲ್ಲದೆ, ಅರಮನೆಯಲ್ಲಿ ವಾಸ್ತವ್ಯ ಹೂಡಿರುವ ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬದವರಿಗಾಗಿ ತಾವೇ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ದರ್ಶನ್‌ ಅವರೊಂದಿಗೆ ನಟ ಪ್ರಜ್ವಲ್‌ ದೇವರಾಜ್‌ ಸೇರಿ ಚಿತ್ರರಂಗದ ಇನ್ನಿತರ ನಟರು ಭಾಗವಹಿಸಿದ್ದರು.

ಇದಾದ ನಂತರ ರಾತ್ರಿ ಮೈಸೂರಿನಲ್ಲಿರುವ ಪರಿಚಿತರೊಬ್ಬರ ಮನೆಯಲ್ಲಿ ಊಟ ಮುಗಿಸಿದ ದರ್ಶನ್‌, ದೇವರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಒಂದೇ ಕಾರಿನಲ್ಲಿ ರಿಂಗ್‌ರಸ್ತೆಯಲ್ಲಿ ಹಿನಕಲ್‌ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಹೆಬ್ಟಾಳು ಸಮೀಪದ ರಿಂಗ್‌ರಸ್ತೆಯ ಜೆಎಸ್‌ಎಸ್‌ ಅರ್ಬನ್‌ಹಾತ್‌ ಸಮೀಪದ ಜಂಕ್ಷನ್ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು (ಜೆಎ-51,ಜೆಡ್‌ -7999-ಆರ್‌ಡಿ ಕ್ಯೂ 7) ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು.

ಕಾರಿನ ಮುಂಭಾಗದಲ್ಲಿ ಕುಳಿತಿದ್ದ ದರ್ಶನ್‌ ಅವರ ಬಲಗೈನ ಮೂಳೆ ಮುರಿದಿದೆ. ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ದೇವರಾಜ್‌ ಮತ್ತು ಪ್ರಜ್ವಲ್‌ ದೇವರಾಜ್‌ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಹೀಗಾಗಿ, ಮೂವರನ್ನು ಕೂಡಲೇ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.

Advertisement

ಘಟನೆಗೆ ಸಂಬಂಧಿಸಿದಂತೆ ದರ್ಶನ್‌ ಹಾಗೂ ಗನ್‌ಮ್ಯಾನ್‌ ಲಕ್ಷ್ಮಣ್‌ ದೂರು ನೀಡಿದ್ದಾರೆ.ಪ್ರಕರಣ ಕುರಿತು ವಿವಿ ಪುರಂ ಸಂಚಾರಿ ಠಾಣೆ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದು, ಬೇರೆಡೆಗೆ ಸಾಗಿಸಿರುವ ಕಾರನ್ನು ಕೂಡಲೇ ವಾಪಸ್‌ ಮೈಸೂರಿಗೆ ತರುವಂತೆ ಸೂಚಿಸಿದ್ದಾರೆ.

ಆಸ್ಪತ್ರೆಗೆ ತಾಯಿ, ಪತ್ನಿ ಭೇಟಿ: ವಿಷಯ ತಿಳಿದು ದರ್ಶನ್‌ ಅವರ ತಾಯಿ ಮೀನಾ ತೂಗುದೀಪ್‌,ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ಆಸ್ಪತ್ರೆಗೆ ಆಗಮಿಸಿದರು. ಇವರೊಂದಿಗೆ ನಿರ್ಮಾಪಕ ಸಂದೇಶ್‌ ನಾಗರಾಜು ಪುತ್ರ ಸಂದೇಶ್‌, ನಟ ದೇವರಾಜ್‌ ಅವರ ಕಿರಿಯ ಪುತ್ರ ಪ್ರಣಮ್‌ ದೇವರಾಜ್‌ ಆಸ್ಪತ್ರೆ ದೌಡಾಯಿಸಿದರು. ನಟ ಸೃಜನ್‌ ಲೋಕೇಶ್‌, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಸಹ ಆಸ್ಪತ್ರೆಗೆ ಆಗಮಿಸಿ ಮೂವರು ನಟರ ಯೋಗಕ್ಷೇಮ ವಿಚಾರಿಸಿದರು. ವಿಷಯ ತಿಳಿಯುತ್ತಿದ್ದಂತೆ ದರ್ಶನ್‌ ಅವರ ಆಪ್ತರು, ಅಭಿಮಾನಿಗಳು ಆಸ್ಪತ್ರೆಯತ್ತ ಆಗಮಿಸಲಾರಂಭಿಸಿದರು. ಹೀಗಾಗಿ, ಆಸ್ಪತ್ರೆಗೆ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಪ್ರಾಣಕ್ಕೆ ಅಪಾಯವಿಲ್ಲ: ದರ್ಶನ್‌ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಅವರ ಕೈಗೆ ಫ್ರಾಕ್ಚರ್‌ ಆಗಿರುವುದರಿಂದ ಶಸ್ತ್ರಉಚಿಕಿತ್ಸೆ ನಡೆಸಿ, ಕೈಗೆ ಪ್ಲೇಟ್‌ಅಳವಡಿಸಲಾಗಿದೆ. ಕೈಗೆ 25 ಹೊಲಿಗೆ ಹಾಕಲಾಗಿದ್ದು, 24-48 ಗಂಟೆ ಪರಿಶೀಲನೆಯಲ್ಲಿ
ಇಡಲಾಗುವುದು. ನಟ ದೇವರಾಜ್‌ ಅವರ ಕೈಗೆ ಗಾಯಗಳಾಗಿದ್ದು, ಕೈ ಬೆರಳು ನಜ್ಜುಗುಜ್ಜಾಗಿದೆ. ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಉಪೇಂದ್ರ ಶೆಣೈ ತಿಳಿಸಿದ್ದಾರೆ.

ಆರಾಮಾಗಿದ್ದೇನೆ…
ಈ ಮಧ್ಯೆ, ಮಧ್ಯಾಹ್ನದ ಹೊತ್ತಿಗೆ ವಾಟ್ಸ್‌ಅಪ್‌ ಮೂಲಕ ಆಡಿಯೋ ರೆಕಾರ್ಡ್‌ ಬಿಡುಗಡೆ ಮಾಡಿದ ನಟ ದರ್ಶನ್‌, “ಎಲ್ಲರಿಗೂ ನಮಸ್ಕಾರಪ್ಪ…ನನ್ನ ಅನ್ನದಾತರು, ಅಭಿಮಾನಿಗಳಲ್ಲಿ ನನ್ನದೊಂದು ರಿಕ್ವೆಸ್ಟ್‌. ದಯವಿಟ್ಟು ನನಗೆ ಏನೂ ಆಗಿಲ್ಲ.ಆರಾಮಾಗಿರಿ, ಇನ್ನು ಒಂದು ದಿನಆಸ್ಪತ್ರೆಯಲ್ಲಿದ್ದು,ನಾಳೆ ಬರುತ್ತೇನೆ. ಆ ಬಳಿಕ ಎಲ್ಲರಿಗೂ ಸಿಗುತ್ತೇನೆ. ಹೀಗಾಗಿ ದಯವಿಟ್ಟು ಯಾರೂ ಆಸ್ಪತ್ರೆಯತ್ತ ಬರಬೇಡಿ. ಇದೊಂದು ನನ್ನ ಮನವಿ ಅಂತಾ ತಿಳಿದುಕೊಳ್ಳಿ. ಯಾಕಂದ್ರೆ ಬೇರೆ ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. ಅವರಿಗೆ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆ. ನಿಮ್ಮ ದರ್ಶನ್‌ಗೆ ಏನೂ ಆಗಿಲ್ಲ.ಧನ್ಯವಾದ’ ಅಂತ ತಿಳಿಸಿದ್ದಾರೆ.

ನನ್ನ ಪತಿ ಆರೋಗ್ಯವಾಗಿದ್ದು,ನನ್ನ ಬಳಿ ಮಾತನಾಡಿದ್ದಾರೆ. ಯಾವುದೇ ಆತಂಕ ಪಡಬೇಕಿಲ್ಲ. ಕೈಗೆ ಪೆಟ್ಟಾಗಿದೆ. ಶೀಘ್ರವೇ
ಚೇತರಿಸಿಕೊಳ್ಳಲಿದ್ದಾರೆ.
– ವಿಜಯಲಕ್ಷ್ಮಿ, ನಟ ದರ್ಶನ್‌ ಪತ್ನಿ

ಅಪಘಾತದಲ್ಲಿ ದರ್ಶನ್‌ ಬಲಗೈಯನ್ನು ಮುಂದಕ್ಕೆ ಕೊಟ್ಟ ಪರಿಣಾಮ ಅವರ ಬಲಗೈಗೆ ಬಳೆ ಹಾಕಿದ್ದರಿಂದ ಗಾಯವಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಬಳೆಯನ್ನು ಕಟ್‌ ಮಾಡಿ ತೆಗೆದು ಚಿಕಿತ್ಸೆ ನೀಡಿದ್ದಾರೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ.
– ಸಂದೇಶ್‌, ನಿರ್ಮಾಪಕ

ನೀವು ಆರೋಗ್ಯವಾಗಿದ್ದೀರಿ ಎಂಬುದನ್ನು ಕೇಳಿ ಸಂತೋಷವಾಯಿತು. ಬೇಗನೇ ಗುಣಮುಖರಾಗಿ ಬನ್ನಿ ಗೆಳೆಯ’.
– ಸುದೀಪ್‌ ನಟ

Advertisement

Udayavani is now on Telegram. Click here to join our channel and stay updated with the latest news.

Next