Advertisement

ಭಾರಿ ಮಳೆಗೆ ಕುಟುಂಬದ ಮೂವರು ಬಲಿ

11:57 AM Aug 29, 2017 | |

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಧಾರಾಕಾರ ಮಳೆ ಹಿನ್ನೆಲೆ ಯಲ್ಲಿ ಕೊಡಗಿನ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

Advertisement

ಮಲೆನಾಡು, ಕರಾವಳಿ ಭಾಗದಲ್ಲಿಯೂ ಮಳೆ ಆರ್ಭಟ ಜೋರಾಗಿದೆ. ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳಲ್ಲಿ ಮಡಿಕೇರಿ ಮತ್ತು ಆಗುಂಬೆಯಲ್ಲಿ ರಾಜ್ಯದಲ್ಲಿಯೇ ಅಧಿಕ, 9 ಸೆಂ.ಮೀ.ಮಳೆಯಾಗಿದೆ. ಮಳೆಯಿಂದಾಗಿ ವಿಜಯಪುರದ ಮಠಪತಿ ಗಲ್ಲಿಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಅಶೋಕ ಗೌಡನ್ನವರ (40), ಪತ್ನಿ ಶಾಂತಾ (37) ಹಾಗೂ ಪುತ್ರ ಚಂದ್ರಶೇಖರ (3) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯ
ಹೊರಗೆ ಮಲಗಿದ್ದ ಈ ದಂಪತಿಯ ಇನ್ನಿಬ್ಬರು ಮಕ್ಕಳಾದ ಅಜಿತ (7) ಮತ್ತು ರಣಜಿತ (12) ಅಪಾಯದಿಂದ ಪಾರಾಗಿದ್ದಾರೆ.  ಬೀದಿ ಬದಿ ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದ ಅಶೋಕ, ಮನೆ ಸಣ್ಣದು ಎಂಬ ಕಾರಣಕ್ಕೆ ತಮ್ಮ ಮೂವರು ಮಕ್ಕಳೊಂದಿಗೆ ಮನೆಯ ಹೊರಗೆ
ಮಲಗಿದ್ದರು. ಸೋಮವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇಬ್ಬರು ಪುತ್ರರನ್ನು ಹೊರಗೆ ಬಿಟ್ಟು, ಪುತ್ರ ಚಂದ್ರಶೇಖರ ಹಾಗೂ ಪತ್ನಿ ಜೊತೆ ಮನೆಯೊಳಗೆ ಹೋಗಿ ಮಲಗಿದ್ದರು.  ಮಲಗಿದ ಕೆಲವೇ ಕ್ಷಣದಲ್ಲಿ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದು ಬಿತ್ತು. ಸದ್ದು ಕೇಳಿ ನೆರೆಹೊರೆಯವರು ನೆರವಿಗೆ ಧಾವಿಸಿದರಾದರೂ ಇವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಕೊಡಗಿನಲ್ಲಿ ಧಾರಾಕಾರ ಮಳೆ: ಕೊಡಗಿನಾದ್ಯಂತ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು ನದಿ, ತೊರೆ, ಜಲಪಾತಗಳು ತುಂಬಿ ಹರಿಯುತ್ತಿವೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಹರಿವು ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಜಿಲ್ಲೆಯ ಎಲ್ಲ ಶಾಲೆ,
ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ತಿಳಿಸಿದ್ದಾರೆ.

ಮಂಜಿನಿಂದ ಮುಚ್ಚಿ ಹೋಗಿರುವ ರಾಜಾಸೀಟು ಉದ್ಯಾನವನ ಹಾಗೂ ಧುಮ್ಮಿಕ್ಕಿ ಹರಿಯುತ್ತಿರುವ ಅಬ್ಬಿ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ನಿರಂತರ ಮಳೆ ಕಾಫಿ ಬೆಳೆಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ.

ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದ ಹೊಸ್ಮಠ, ಬಿಳಿನೆಲೆ ಮುಳುಗೆ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿದೆ. ಮಲೆನಾಡಿನಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ತುಂಗಾ
ಜಲಾಶಯದ ಗರಿಷ್ಠ ಮಟ್ಟ (588.24 ಅಡಿ) ತಲುಪಿದೆ. ಕೇರಳದ ವೈನಾಡು ಸೇರಿದಂತೆ ಹಿನ್ನಿರು ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಮೈಸೂರು ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಿದೆ. ಈ ಮಧ್ಯೆ,
ಮುಂದಿನ 24 ತಾಸುಗಳಲ್ಲಿ ಕರಾವಳಿ ಸೇರಿದಂತೆ ರಾಜ್ಯದ ಎಲ್ಲೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next