Advertisement

ಗುಜರಾತ್‌: ಕೈಗೆ ಮರ್ಮಾಘಾತ; ಮತ್ತೆ ನಾಲ್ವರ ರಾಜೀನಾಮೆ

08:10 AM Jul 29, 2017 | Karthik A |

ಗಾಂಧಿನಗರ: ಪ್ರಧಾನಿ ಮೋದಿ ತವರು ರಾಜ್ಯ ಹಾಗೂ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಆಘಾತವಾಗಿದೆ. ಶುಕ್ರವಾರ ಮತ್ತೆ ನಾಲ್ವರು ಶಾಸಕರು ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನ ಒಟ್ಟಾರೆ ಬಲ ಕುಸಿದಿದೆ. ಪರಿಣಾಮ ರಾಜ್ಯಸಭೆಗೆ ಮರುಪ್ರವೇಶ ಬಯಸಿರುವ ಸೋನಿಯಾ ಗಾಂಧಿ ಆಪ್ತ ಅಹ್ಮದ್‌ ಪಟೇಲ್‌ ಅವರ ಭವಿಷ್ಯವೂ ಡೋಲಾಯಮಾನ ಸ್ಥಿತಿಗೆ ತಲುಪಿದೆ.

Advertisement

ಜು. 21ರಂದು ವಿಪಕ್ಷ ಸ್ಥಾನ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಪಕ್ಷದ ಹಿರಿಯ ನಾಯಕ ಶಂಕರ್‌ಸಿನ್ಹ ವಾಘೇಲಾ ಅವರ ಹಿಂದೆಯೇ ಅವರ ಬೆಂಬಲಿಗರು ಎನ್ನಲಾದ ಮತ್ತಷ್ಟು ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಗುರುವಾರವಷ್ಟೇ 3 ಮಂದಿ ಶಾಸಕರು ರಾಜೀನಾಮೆ ನೀಡಿ, ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತೊರೆದಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಇವರ ಸಾಲಿಗೆ ಮತ್ತೆ ನಾಲ್ವರ ಸೇರ್ಪಡೆಯಾಗಿದೆ. ಇನ್ನು, ಕಾಂಗ್ರೆಸ್‌ನ ಮತ್ತೂಬ್ಬ ಹಿರಿಯ ಶಾಸಕ ರಾಘವ್‌ ಜಿ. ಪಟೇಲ್‌ ಸಹಿತ ಇನ್ನೂ 9 ಶಾಸಕರು ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದು, ಬಿಜೆಪಿಗೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ತಮ್ಮನ್ನು ಅವಗಣಿಸಲಾಗುತ್ತಿದ್ದು, ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆ ಎಂದು ರಾಘವ್‌ ಹೇಳಿದ್ದಾರೆ.

ಅಮಿತ್‌ ಶಾ, ಸ್ಮತಿ, ರಜಪೂತ್‌ ನಾಮಪತ್ರ : ಆ.8ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ವಘೇಲಾ ಅವರ ಸಂಬಂಧಿ ರಜಪೂತ್‌ ನಾಮಪತ್ರ ಸಲ್ಲಿಸಿದ್ದಾರೆ. ಸದ್ಯ ಕಾಂಗ್ರೆಸ್‌ನ 7 ಶಾಸಕರ ರಾಜೀನಾಮೆಯಿಂದಾಗಿ 182 ಸದಸ್ಯಬಲದ ವಿಧಾನಸಭೆ ಇದೀಗ 175ಕ್ಕೆ ಇಳಿದಿದೆ.

ಈ ಮೂಲಕ ಪ್ರತಿ ಅಭ್ಯರ್ಥಿಯ ಗೆಲುವಿಗೆ 44 ಮತಗಳು ಬೇಕಾಗುತ್ತವೆ. ಆಗ 121 ಸದಸ್ಯರ ಬಲ ಹೊಂದಿರುವ ಬಿಜೆಪಿಯಲ್ಲಿ ಅಮಿತ್‌ ಶಾ ಮತ್ತು ಇರಾನಿ ಸುಲಭವಾಗಿ ಗೆಲ್ಲುತ್ತಾರೆ. ಇನ್ನು 33 ಮತಗಳು ಉಳಿಯುತ್ತವೆ. ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಜಪೂತ್‌ಗೆ ಇನ್ನು 11 ಮತಗಳಷ್ಟೇ ಬೇಕು.  ಆದರೆ, ಕಾಂಗ್ರೆಸ್‌ನಲ್ಲಿ ಇನ್ನು 49 ಶಾಸಕರಿದ್ದರೂ, ಇವರಲ್ಲಿ ಕೆಲವರು ಪಕ್ಷ ತೊರೆಯುವ ಸಾಧ್ಯತೆಯಿದೆ. ಅಲ್ಲದೆ, ಕೆಲವರು ಅಡ್ಡ ಮತದಾನ ಮಾಡುವ ಆತಂಕವೂ ಇದೆ. ಹೀಗಾಗಿ, ಕಾಂಗ್ರೆಸ್‌ನ ಅಹ್ಮದ್‌ ಪಟೇಲ್‌ ಅವರ ಗೆಲುವು ಕಷ್ಟಸಾಧ್ಯ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next