ತುಮಕೂರು: ಎತ್ತಿನಹೊಳೆ ಕಾಮಗಾರಿಯ ಬ್ಲಾಸ್ಟಿಂಗ್ ಶಬ್ಧದಿಂದ ಮೂರು ತಿಂಗಳ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೊರಟಗೆರೆ ಪಟ್ಟಣದ ಸಮೀಪದ ಜಂಪೇನಹಳ್ಳಿಯಲ್ಲಿ ನಡೆದಿದೆ. ಅಂತ್ಯಕ್ರಿಯೆ ಮಾಡಿದ ಮಗುವಿನ ಮೃತದೇಹವನ್ನು ಗುಂಡಿಯಿಂದ ತೆಗೆಸಿದ ಅಮಾನವೀಯ ಘಟನೆಯೂ ನಡೆದಿದೆ.
ಜಂಪೇನಹಳ್ಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆ ಬ್ರಿಡ್ಜ್ ಕಾಮಗಾರಿ ಕಳೆದ ತಿಂಗಳಿಂದ ನಡೆಯುತ್ತಿದೆ. ಪೈಪ್ ಲೈನ್ ಅಳವಡಿಸಲು ಕಲ್ಲುಬಂಡೆ ಅಡ್ಡವಾದ ಹಿನ್ನಲೆ, ಸ್ಥಳೀಯರಿಗೆ ಮಾಹಿತಿ ನೀಡದೆ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ. ಈ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲಿಯೇ ಕುಟುಂಬ ವಾಸವಾಗಿತ್ತು. ಸ್ಪೋಟದ ಸದ್ದಿಗೆ 3 ತಿಂಗಳ ಹಸುಗೂಸು ಬೆಳಕು ಇಲ್ಲದಿರುವ ಗುಡಿಸಲು ಮನೆಯಲ್ಲಿಯೇ ಮೃತಪಟ್ಟಿದೆ.
ಇದನ್ನೂ ಓದಿ:ಜವನಗೊಂಡನಹಳ್ಳಿ ಜವರಾಯನ ಅಟ್ಟಹಾಸ: ಸರಣಿ ಅಪಘಾತದಲ್ಲಿ ಮೂವರು ಸಾವು!
ಸುವರ್ಣ ಮುಖಿ ನದಿಗೆ ಹೊಂದಿಕೊಂಡ ಸ್ಮಶಾನದ ಜಾಗದಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಸಲು ಕುಟುಂಬಕ್ಕೆ ಮುಂದಾಗಿದೆ. ಆದರೆ ಅಂತ್ಯಕ್ರಿಯೆ ಮಾಡದಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ ಆ ಜಾಗದ ಸೆಕ್ಯೂರಿಟಿ ಗಾರ್ಡ್, ಮೂರು ತಿಂಗಳ ಹಸುಗೂಸಿನ ಮೃತ ಮಗುವಿನ ದೇಹವನ್ನು ಗುಂಡಿಯಿಂದ ಹೊರಗಡೆ ತೆಗೆಸಿದ್ದಾರೆ.
ಜಮೀನು-ಮನೆಯೇ ಇಲ್ಲದಿರುವ ದಲಿತ ಕುಟುಂಬ ಮಗುವಿನ ಅಂತ್ಯಕ್ರಿಯೆ ನಡೆಸುತ್ತಿರುವ ವೇಳೆ ಸೆಕ್ಯೂರಿಟಿ ತನ್ನ ಮನುಷ್ಯತ್ವದ ಗುಣವನ್ನೇ ಮರೆತು ತೋರಿಸಿರುವ ದುರ್ವರ್ತನೆಯ ವಿರುದ್ದ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನುಷ್ಯತ್ವ ಮರೆತು ಮಾನವಹಕ್ಕು ಉಲ್ಲಂಘನೆ ಮಾಡಿರುವ ಸೆಕ್ಯೂರಿಟಿ ಯ ಜತೆ ಗಾರ್ಮೆಂಟ್ಸ್ ಮಾಲೀಕನ ವಿರುದ್ದ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ಗೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು, ಶಾಹಿ ಗಾರ್ಮೆಂಟ್ಸ್ ಸೆಕ್ಯೂರಿಟಿ ಗಾರ್ಡ್ ನಿಂದ ಅಮಾನವೀಯ ದುರ್ಘಟನೆ ನಡೆದಿದೆ. ಬ್ಲಾಸ್ಟಿಂಗ್ ನಿಂದ ಮಗು ಮೃತ ಪಟ್ಟಿದೆ ಎಂಬುದರ ಬಗ್ಗೆ ಪೋಷಕರಿಂದ ಮಾಹಿತಿ ಪಡೆಯಲಾಗಿದೆ. ಸುವರ್ಣಮುಖಿ ನದಿ ಮತ್ತು ರಾಜಕಾಲುವೆ ಒತ್ತುವರಿಯ ಬಗ್ಗೆ ತಕ್ಷಣ ಸರ್ವೆಗೆ ಸೂಚಿಸಿದ್ದೇನೆ. ಸ್ಮಶಾನ ಜಾಗ ಗುರುತಿಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಇದನ್ನೂ ಓದಿ: ತನ್ನ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಸಾವು!
ಈ ಬಗ್ಗೆ ನೊಂದು ನುಡಿಯುವ ಮೃತ ಮಗುವಿನ ತಾಯಿ ನೇತ್ರಾವತಿ, ಜಂಪೇನಹಳ್ಳಿಯಲ್ಲಿ ನಮಗೆ ಸ್ವಂತ ಮನೆಯೇ ಇಲ್ಲ ಕತ್ತಲಿನ ಗುಡಿಸಲೇ ನಮ್ಮ ಮನೆ. ಬ್ಲಾಸ್ಟಿಂಗ್ ಶಬ್ದದಿಂದ ನನ್ನ ಮಗು ಬೆಚ್ಚಿ ಬಿದ್ದು ಮೃತಪಟ್ಟಿದೆ. ಅಂತ್ಯಕ್ರಿಯೆ ವೇಳೆ ಗುಂಡಿಯಿಂದ ಮಗುವನ್ನು ಬಲವಂತವಾಗಿ ಶಾಹಿ ಗಾರ್ಮೆಂಟ್ಸ್ ಸೆಕ್ಯೂರಿಟಿ ಗಾರ್ಡ್ ಹೊರಗಡೆ ತೆಗೆಸಿದಿದ್ದಾರೆ. ನಮಗೆ ಓದು ಬರಹ ಗೊತ್ತಿಲ್ಲ ನಮ್ಮ ನೋವು ಕೇಳೋರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.