Advertisement

12 ವರ್ಷದ ಬಳಿಕ ಮೂವರು ಮನೆ ಕಳ್ಳರ ಸೆರೆ

11:37 AM Jan 15, 2022 | Team Udayavani |

ಬೆಂಗಳೂರು: ಶಾಲಾ ಮಕ್ಕಳ ಫೋಷಕರ ಮನೆಗಳನ್ನೇ ಗುರಿಯಾಗಿಸಿಕೊಂಡು ನಕಲಿ ಕೀ ಬಳಸಿ ಮನೆಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು 12 ವರ್ಷಗಳ ಬಳಿಕ ದೇವರ ಜೀವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಕಾವಲ್‌ ಭೈರಸಂದ್ರ ನಿವಾಸಿ ಮುರುಳಿ (42), ಶಿವರಾಮು (39), ಸಿರಾಜ್‌ (31) ಬಂಧಿತರು. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ ಹಾಗೂ ಏಳು ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಕಾವಲ್‌ ಭೈರಸಂದ್ರ ನಿವಾಸಿ ಮುರುಳಿ ಅಲಿಯಾಸ್‌ ಪ್ರಾಜೆಕ್ಟ್, 7ನೇ ತರಗತಿ ವ್ಯಾಸಂಗ ಮಾಡಿದ್ದು, ತಾನೊಬ್ಬ ಸಾಪ್ಟ್ವೇರ್‌ ಎಂಜಿನಿಯರ್‌ ಎಂದು ಹೇಳಿಕೊಂಡು ಓಡಾಡುತ್ತಿದ್ದ. 2011ರಿಂದ ನಗರದ ವಿವಿಧ ಠಾಣೆಗಳಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಲ್ಲಿ ಮಾಸ್ಟರ್‌ ಮೈಂಡ್‌ ಆಗಿದ್ದಾನೆ. ನಂತರ ತನ್ನ ಸಹಚರರಾದ ಶಿವರಾಮು ಮತ್ತು ಸಿರಾಜ್‌ ಜತೆ ಸೇರಿಕೊಂಡು ಶಾಲಾ ಮಕ್ಕಳ ಪೋಷಕರ ಮನೆಗಳನ್ನೇ ಗುರಿ ಯಾಗಿಸಿಕೊಂಡು ಮನೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕೃತ್ಯ ಹೇಗೆ?

ಆರೋಪಿಗಳು ಬೆಳಗ್ಗೆ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಮತ್ತು ಸಂಜೆ ಶಾಲೆಯಿಂದ ಮಕ್ಕಳನ್ನು ಕರೆತರುವ ಅವಧಿಯಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ಅಲ್ಲದೆ, ಮನೆ ಮಾಲೀಕರು ಬೀಗ ಹಾಕುವಾಗ ಅಥವಾ ಕೈಯಲ್ಲಿ ಹಿಡಿದುಕೊಂಡಿರುವಾಗ ದೂರದಿಂದಲೇ ಬೀಗದ ಕೀ ಗಾತ್ರವನ್ನು ಅಂದಾಜಿಸಿ ಕಣ್ಣಲ್ಲೇ ಅಳತೆ ಮಾಡುತ್ತಿದ್ದರು. ಮರು ದಿನ ಆ ಮನೆಗಳ ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು. ಕೀ ತಯಾರಿಸುತ್ತಿದ್ದ ಬಗೆ ರೋಚಕ: ನಕಲಿ ಕೀ ಮಾಡುವವರ ಬಳಿ ಹೇಗೆ ಕೀ ತಯಾರಿಸಬಹುದು ಎಂಬುದನ್ನು ಕರಗತ ಮಾಡಿಕೊಂಡಿದ್ದ ಆರೋಪಿ ಗಳು, ಅದನ್ನೇ ಬಳಸಿಕೊಂಡು ಕಳ್ಳತನ ಮಾಡುವ ಮನೆಯ ಕೀಯನ್ನು ನಾಲ್ಕೈದು ಮಾದರಿಯಲ್ಲಿ ನಕಲಿಯಾಗಿ ತಯಾರಿಸುತ್ತಿದ್ದರು. ನಂತರ ಗುರು ತಿಸಿರುವ ಮನೆಗಳಿಗೆ ಹೋಗಿ ನಕಲಿ ಕೀ ಬಳಸಿ ಬಾಗಿಲು ತೆರೆದು ಕಳ್ಳತನ ಮಾಡುತ್ತಿದ್ದರು. 12 ವರ್ಷಗಳಿಂದಲೂ ಕೃತ್ಯ ಮಾಡುತ್ತಿದ್ದರೂ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next