Advertisement
ಗಂಡಸರು ಮನೆಯಲ್ಲಿ ಉಂಡು, ತಿಂದು ಹಾಯಾಗಿರುತ್ತಾರೆ ಎಂಬುದು ಎಲ್ಲರ ಮಾತು. ಆದರೆ ಸಂಪ್ರದಾಯಸ್ಥರ ಮನೆಗಳಲ್ಲಿ ಗಂಡಸರಿಗೂ ತಿಂಗಳಿನಲ್ಲಿ ಮೂರು ದಿನ ಅಡುಗೆ ಮನೆ ಡ್ನೂಟಿ ಕಡ್ಡಾಯ. ತಡರಾತ್ರಿ ಕಚೇರಿ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯೊಡತಿ, “ರೀ, ನಾನು ರಜಾ’ ಅಂದುಬಿಟ್ಟರೆ ಮುಗಿಯಿತು. ಕಾಲಡಿಯ ನೆಲ ಕಂಪಿಸಿದ ಅನುಭವ.
Related Articles
Advertisement
ಮಕ್ಕಳು ಸ್ಕೂಲಿಗೆ ತೆರಳಿದ ನಂತರ ಸ್ನಾನ ಮಾಡಿ, ಹೊಟ್ಟೆಗೊಂದಿಷ್ಟು ತಿಂಡಿ ಕಾಣಿಸಿದರೆ ಸ್ವಲ್ಪ ವಿರಾಮ ಸಿಕ್ಕಂತೆ. ಜಾಸ್ತಿ ಹೊತ್ತು ಆರಾಮಾಗಿ ಕೂರುವಂತಿಲ್ಲ. ಸಿಂಕ್‌ನಲ್ಲಿ ಬಿದ್ದಿರುವ ಪಾತ್ರೆ ರಾಶಿ ಕೈ ಬೀಸಿ ಕರೆಯುತ್ತದೆ. ಪ್ರತಿದಿನ ಮೂರು ಹೊತ್ತು, ಮೂರು ಬಗೆಯ ಅಡುಗೆ ಬೇಕಾದರೂ ಮಾಡಬಹುದು. ಆದರೆ, ಪಾತ್ರೆ ತೊಳೆಯುವುದೇ ದೊಡ್ಡ ಗೋಳು. ಹಾಗಂತ ಪಾತ್ರೆ ತೊಳೆಯದೇ ಇರಲಾದೀತೆ? ಪಾತ್ರೆ ತೊಳೆಯುತ್ತಲೇ ಮಧ್ಯಾಹ್ನ ಹಾಗೂ ರಾತ್ರಿಯ ಅಡುಗೆಯ ಬಗ್ಗೆ ಮಾನಸಿಕವಾಗಿ ರೆಡಿ ಆಗುತ್ತೇನೆ. ಅನ್ನ- ಸಾಂಬಾರ್ ಮಾಡಿ ಮುಗಿಸುವಾಗ ಗಂಟೆ 1. ಊಟ ಮಾಡಿ, ಬುತ್ತಿ ಕಟ್ಟಿಕೊಂಡು ಆಫೀಸಿಗೆ ಹೊರಟರೆ ಬರುವುದು ರಾತ್ರಿ 12 ಗಂಟೆಗೆ.
“ಅಪ್ಪಾ, ನಿನ್ನೆ ನೀನು ಮಾಡಿದ್ದ ಈರುಳ್ಳಿ-ಆಲೂಗಡ್ಡೆ ಪಲ್ಯ ಸೂಪರ್ ಆಗಿತ್ತು’, “ಈರುಳ್ಳಿ ಟೊಮೇಟೋ ಗೊಜ್ಜನ್ನು ಫ್ರೆಂಡ್ಸೆಲ್ಲಾ ತುಂಬಾ ಇಷ್ಟಪಟ್ರಾ, ಅವರ ಅಪ್ಪಂಗೆ ಅಡುಗೆ ಮಾಡೋಕೆ ಬರಲ್ಲಂತಪ್ಪಾ’ ಎಂದು ಮಕ್ಕಳು ಮೆಚ್ಚುಗೆಯ ಮಾತುಗಳನ್ನಾಡಿದರೆ, “ಪರವಾಗಿಲ್ಲಾರೀ, ನನಗಿಂತ ಚೆನ್ನಾಗಿಯೇ ಅಡುಗೆ ಮಾಡಿದ್ದೀರ’ ಎಂದು “ಅವಳೂ’ ಹೊಗಳಿಬಿಟ್ಟರೆ ಮುಗಿಯಿತು. ನಳ ಮಹಾರಾಜನನ್ನು ಬಿಟ್ಟರೆ ನಾನೇ ಎಂದು ಕೋಡು ಮೂಡುತ್ತದೆ. ಆ ಮೆಚ್ಚುಗೆಯೇ ಮುಂದಿನ ಎರಡು ದಿನಗಳ ಕೆಲಸಕ್ಕೆ ಸ್ಫೂರ್ತಿ. ಕೆಲವೊಮ್ಮೆ ಮಕ್ಕಳು, “ಅಪ್ಪಾ, ಎಷ್ಟು ರುಚಿಯಾಗಿ ಅಡುಗೆ ಮಾಡ್ತೀಯ, ಇನ್ಮುಂದೆ ಅಮ್ಮನ ಬದಲು ನೀನೇ ತಿಂಡಿ ಮಾಡು’ ಅಂದಾಗ, ತಿಂಗಳಿಡೀ ಅಡುಗೆ ಮಾಡುವುದನ್ನು ಊಹಿಸಿಕೊಂಡೇ ಬೆವರುತ್ತೇನೆ.
ಶ್ರೀಮತಿ ರಜೆಯಿಂದ ಒಳಗೆ ಬರುವ ಹಿಂದಿನ ದಿನಕ್ಕೂ, ನಲ್ಲಿಯಲ್ಲಿ ತಡರಾತ್ರಿ ನೀರು ಬರುವುದಕ್ಕೂ ದೊಡ್ಡ ನಂಟಿದೆ. ರಾತ್ರಿ 12ಕ್ಕೆ ಕೆಲಸದಿಂದ ಬಂದು 1ರವರೆಗೂ ನೀರು ತುಂಬಿ, ಬೆಳಗ್ಗೆ 6ಕ್ಕೆ ಎದ್ದು ಶ್ರೀಮತಿಗೆ ನೀರು ಹಾಕಿ ಒಳಗೆ ಕೆರದುಕೊಂಡರೆ ನನ್ನ ಜವಾಬ್ದಾರಿ ಮುಗಿದಂತೆ. ಮತ್ತೆ ಮುಂದಿನ ತಿಂಗಳವರೆಗೆ, ಮನೆ-ಮಕ್ಕಳ ಕೆಲಸವೆಲ್ಲಾ ಅವಳ ಕೈಯಲ್ಲಿ.
“ಅವಳು ಕೆಲಸಕ್ಕೆ ಹೋಗಲ್ಲ, ಹೌಸ್‌ವೈಫ್ ಅಷ್ಟೆ’ ಅಂತ ಹೇಳುವ ಎಲ್ಲ ಗಂಡಂದಿರೂ, ಕನಿಷ್ಠ ಆ ಮೂರು ದಿನಗಳಾದರೂ ಅಡುಗೆ ಮನೆಯ ಕೆಲಸ ನಿರ್ವಹಿಸಿ ನೋಡಿ. ಆಗ, ಹೆಂಡತಿ “ಹೌಸ್‌ವೈಫ್ ಅಷ್ಟೇ’ ಅಲ್ಲ ಅಂತ ಅರ್ಥವಾಗುತ್ತೆ. ತಿಂಗಳಿಡೀ ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಬಿಡುವಿಲ್ಲದೆ ದುಡಿಯುವ ಮನೆಯೊಡತಿಗೆ, ಆ ಮೂರು ದಿನಗಳಲ್ಲಾದರೂ ನೆರವಾಗಿ. ಏನೋ ತಿಳಿದ ಅಡುಗೆ ಮಾಡಿ ಬಡಿಸಿ, ಆಕೆಯ ಪಾತ್ರವನ್ನು ನಿರ್ವಹಿಸಿ.
ಎ.ಆರ್. ಗಿರಿಧರ