ವಿಜಯಪುರ: ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮೂರು ಮಕ್ಕಳ ಮೇಲೆ ದಾಳಿ ನಡೆಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ನಗರದ ವಿವಿಧ ಕಡೆಗಳಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಮಂಗಳವಾರ ಕೂಡ ಮೂವರು ಮಕ್ಕಳ ಮೇಲೆ ದಾಳಿ ಮಾಡಿದ್ದು, ಬೀದಿನಾಯಿಗಳನ್ನು ನಿಯಂತ್ರಿಸದ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಗರದ ಬಡೀಕಮಾನ್, ಬಾಗಾಯತ್ ಗಲ್ಲಿ ಹಾಗೂ ದೌಲತ್ ಕೋಟೆ ಬಳಿ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿವೆ. ಗಾಯಗಳು ಮಕ್ಕಳನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿಕಿತ್ಸೆಗೆ ದಾಖಲಾದ ಬೀದಿನಾಯಿ ಕಡಿತದ ಗಾಯಾಳು ಮಕ್ಕಳಿಗೆ ವೈದ್ಯರು ರೇಬಿಸ್ ಲಸಿಕೆ ಹಾಕಿ, ಚಿಕಿತ್ಸೆ ನೀಡಿದ್ದಾರೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಮೇಲೆ ದಾಳಿ ನಡೆಸುವ ಮೂಲಕ ನಗರದ ಜನರಲ್ಲಿ ಆತಂಕ ಸೃಷ್ಟಿಸಿವೆ. ಈ ಕುರಿತು ಮಹಾನಗರ ಪಾಲಿಕೆಗೆ ಕೆಲವರು ಲಿಖಿತ ದೂರು ನೀಡಿದರೂ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಾಯಾಳು ಮಕ್ಕಳ ಪಾಲಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿರುವ ಬೀದಿ ನಾಯಿಗಳ ಉಪಟಳಕ್ಕೆ ಪಾಲಿಕೆ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಕೂಡಲೇ ಬೀದಿ ನಾಯಿಗಳು ಹಾಗೂ ಹೆಚ್ಚಿರುವ ರೋಗಕಾರಕ ಹಂದಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.