Advertisement

ಮೂರು ಗುಂಡುಗಳಿಗೆ ಕಮರಿತು ನೂರು ಕನಸು

03:33 PM May 19, 2022 | Team Udayavani |

ಶಿಗ್ಗಾವಿ: ಗುಂಡು ಬಿದ್ದದ್ದು ನನ್ನ ದೇಹಕ್ಕಲ್ಲ, ನನ್ನ ಕನಸುಗಳಿಗೆ. ಜೀವನ ಪ್ರೀತಿ ಉಳಿಸಿಕೊಂಡಿದ್ದ ನನಗೀಗ ಭವಿಷ್ಯ ಮಂಕಾಗಿ ಕಾಣುತ್ತಿದೆ. ಅಂದು ರಾತ್ರಿ ನಡೆದ ಘಟನೆ ಬಳಿಕ ಹಗಲು ಸಹಿತ ಕತ್ತಲು ರೂಪದಲ್ಲಿ ಗೋಚರಿಸುತ್ತಿದೆ. ದುಡಿಯುವ ನನ್ನ ಕೈಗಳಿಗೆ ಬಿದ್ದ ಒಂದು ಗುಂಡು ಮತ್ತು ಹೊಟ್ಟೆ ಸೀಳಿದ ಎರಡು ಗುಂಡುಗಳು ನನ್ನ ಬದುಕನ್ನು ಮೂರಾಬಟ್ಟೆ ಮಾಡಿವೆ.

Advertisement

ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಏಪ್ರಿಲ್‌ 19ರಂದು ನಡೆದ ಗುಂಡೇಟು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು, ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿರುವ ಮುಗಳಿ ಗ್ರಾಮದ ವಸಂತಕುಮಾರ ಶಿವಪುರ ಅವರ ಮನದಾಳದ ಮಾತುಗಳಿವು.

ಮೈ ಮುರಿದು ದುಡಿಯಬೇಕು. ಬಳಿಕ ದಣಿವು ಆರಿಸಿಕೊಳ್ಳಬೇಕೆಂಬ ಹಿರಿಯರ ಮಾತು ನನ್ನ ಬೆನ್ನಿಗಿತ್ತು. ಅಂದು ನಮ್ಮ ಹೊಲದಲ್ಲಿ ಕೃಷಿ ಕಾರ್ಯ ಮುಗಿಸಿಕೊಂಡು ಗೆಳೆಯರ ಜೊತೆಗೆ ನನ್ನ ಅಭಿಮಾನದ ಹಿರೋ ಯಶ್‌ ಅಭಿನಯಿಸಿದ್ದ ಕೆಜಿಎಫ್‌-2 ಸಿನೆಮಾ ನೋಡಲು ರಾಜಶ್ರೀ ಟಾಕೀಸ್‌ಗೆ ಹೋಗಿದ್ದೆ. ಸಿನಿಮಾದಲ್ಲಿನ ಬಂದೂಕಿನ ಸದ್ದುಗಳನ್ನು ಅನುಭವಿಸುವಷ್ಟರಲ್ಲೇ ನಿಜ ಬದುಕಿನಲ್ಲೂ ಬಂದೂಕು ನನ್ನನ್ನು ನೋವು ಅನುಭವಿಸುವಂತೆ ಮಾಡಿದ್ದು ದುರಂತ ಎಂದು ಭಾವುಕನಾದ.

ನಾನು ಸೋತಿರಬಹುದು, ಸತ್ತಿಲ್ಲ. ಮತ್ತೆ ಎದ್ದು ನಿಲ್ಲಬೇಕು. ಮೊದಲಿನಂತೆ ಲವಲವಿಕೆಯಿಂದ ಇರಬೇಕೆಂದು ಮನಸ್ಸು ಹೇಳುತ್ತದೆ. ಆದರೆ, ದೇಹ ಸ್ಪಂದಿಸಲು ಸಮಯ ಬೇಕು. ನನ್ನ ಮತ್ತು ನನ್ನ ಕುಟುಂಬದ ಸಂಕಷ್ಟದ ದಿನಗಳ ಜೊತೆಗೆ ಬೆನ್ನಿಗಿದ್ದ ನಮ್ಮೂರಿನ ಹಿರಿಯರ ಮತ್ತು ಹಿತೈಷಿಗಳ ಸಹಕಾರ ಮರೆಯಲಾರೆ. ಜೊತೆಗೆ ನನ್ನ ಹೆತ್ತವರಿಗೆ ಆತ್ಮಸ್ಥೈರ್ಯ ತುಂಬಿರುವ ಪೊಲೀಸ್‌ ಇಲಾಖೆಗೂ ಧನ್ಯವಾದ ತಿಳಿಸುವೆ. ನನಗೆ ಗುಂಡು ಹಾರಿಸಿ ಪರಾರಿಯಾಗಿರುವ ಆರೋಪಿಯ ಬಹುರೂಪವನ್ನು ಪೊಲೀಸರು ಬಯಲು ಮಾಡಲಿ ಎಂದು ಬಯಸುವೆ ಎಂದು ಇಂಗಿತ ವ್ಯಕ್ತಪಡಿಸಿದರು.

ತನಿಖೆ: ಈಗಾಗಲೇ ಘಟನೆ ನಡೆದು ಇಂದಿಗೆ ತಿಂಗಳಾಯಿತು. ಪೊಲೀಸ್‌ ಇಲಾಖೆ ಘಟನೆ ನಡೆದ ದಿನದಿಂದ ಊರಿಂದಲೇ ಪರಾರಿಯಾದ ಆರೋಪಿಯನ್ನು ಗುರುತು ಪತ್ತೆ ಮಾಡಿ ಹುಡುಕಿ ತರುವ ಪ್ರಯತ್ನ ಇನ್ನೂ ಮುಂದುವರೆಸಿದೆ. ಇದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಶಿಗ್ಗಾವಿ ಪೊಲೀಸ್‌ ಠಾಣೆಗೆ ಆರು ತಿಂಗಳಾದರೂ ಕರ್ತವ್ಯ ನಿಯೋಜಿತ ಪಿಎಸ್‌ಐ ಹುದ್ದೆ ಅಧಿಕಾರಿಯಿಲ್ಲ. ಠಾಣೆಯಲ್ಲಿ ಹಲವಾರು ಪ್ರಕರಣಗಳ ತನಿಖೆ ವೇಗ ಚುರುಕು ಪಡೆದುಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಸಿಎಂ ಮತಕ್ಷೇತ್ರದಲ್ಲಿ ನಾಗರಿಕರ ರಕ್ಷಣೆ ವ್ಯವಸ್ಥೆಗೆ ಸೂಕ್ತ ಕ್ರಮವಿಲ್ಲ ಎಂಬ ಆರೋಪಗಳು ಜನರಿಂದ ಕೇಳಿ ಬರುತ್ತಿವೆ ಎಂದರು.

Advertisement

ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದ ಗುಂಡೇಟು ಪ್ರಕರಣದ ಆರೋಪಿ ಬಂಧನಕ್ಕೆ ನಮ್ಮೂರಿನವರು ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಘಟನೆ ಸಂಭವಿಸಿ ಇಂದಿಗೆ ಒಂದು ತಿಂಗಳು ಗತಿಸಿದೆ. ಆರೋಪಿ ಸಿಕ್ಕಿಲ್ಲ. ಪೊಲೀಸ್‌ ಇಲಾಖೆ ಮೇಲೆ ಇನ್ನೂ ವಿಶ್ವಾಸವಿದೆ. -ಉಳವನಗೌಡ ಪಾಟೀಲ, ಮುಗಳಿ ಗ್ರಾಮದ ಹಿರಿಯರು

Advertisement

Udayavani is now on Telegram. Click here to join our channel and stay updated with the latest news.

Next