ಚಿತ್ರದುರ್ಗ: ಜಿಲ್ಲೆಯಲ್ಲಿ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 32 ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅರುಣ್ ರಂಗರಾಜನ್ ಈ ಬಗ್ಗೆ ಮಾಹಿತಿ ನೀಡಿದರು. ಜು. 24ರಂದು ರಾತ್ರಿ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರವಳ್ಳಿ ಸಮೀಪ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಮನೆಗಳ್ಳತನಕ್ಕೆ
ಉಪಯೋಗಿಸುವ ಆಯುಧಗಳು, ಖಾರದ ಪುಡಿಯನ್ನು ಇಟ್ಟುಕೊಂಡು ನಸ್ರುಲ್ಲಾ ಮತ್ತು ಸುಹೇಬ್ ಕನ್ನ ಹಾಕುವ ತಯಾರಿಯಲ್ಲಿದ್ದರು. ಅವರನ್ನು ಪೊಲೀಸರು ಹಿಡಿದುಕೊಳ್ಳಲು ಯತ್ನಿಸಿದಾಗ ಆರೋಪಿ ಬೆಂಗಳೂರಿನ ಸುಹೇಬ್ ತಪ್ಪಿಸಿಕೊಂಡಿದ್ದಾನೆ ಎಂದರು.
ನಸ್ರುಲ್ಲಾನನ್ನು ಬಂಧಿಸಿ ಆತನ ವಿಚಾರಣೆ ನಡೆಸಿದಾಗ ಚಿತ್ರದುರ್ಗದ ಜುಲಿ ಖಾನ್, ಹೊಳಲ್ಕೆರೆಯ ಅಫೂಜ್ ಖಾನ್ ಕಳ್ಳತನದ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದ. ಆತ ನೀಡಿದ ಮಾಹಿತಿ ಆಧರಿಸಿ ಉಳಿದಿಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಬಂಧಿತ ಆರೋಪಿಗಳಿಂದ 1 ಕೆಜಿ 162 ಗ್ರಾಂ ಬಂಗಾರ, 650 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, ಮಾರುತಿ 800 ಕಾರು
ಸೇರಿದಂತೆ 32,37,400 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 850 ಗ್ರಾಂ ತೂಕದ 22.95 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದರು.
ನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ 7 ಕನ್ನ, 1 ಸುಲಿಗೆ ಪ್ರಕರಣ, ಕೋಟೆ ಪೊಲೀಸ್ ಠಾಣೆಯಲ್ಲಿ 1 ಕನ್ನ,
ಭರಮಸಾಗರ ಠಾಣೆಯ 2 ಕನ್ನ, ಚಳ್ಳಕೆರೆ ಪೊಲೀಸ್ ಠಾಣೆಯ 2 ಕನ್ನ ಸೇರಿದಂತೆ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು. ಎಪಿಎಂಸಿ ಯಾರ್ಡ್‌ನಲ್ಲಿ ಜು. 24ರಂದು ರಾತ್ರಿ ಗಸ್ತಿನಲ್ಲಿದ್ದಾಗ ಒಬ್ಬ ಹುಡುಗ ಬೈಕ್‌ನಲ್ಲಿ ಹೋಗುತ್ತಿದ್ದ. ಅದು ಕಳುವಾದ ಬೈಕ್ ಎಂದು ಅನುಮಾನಗೊಂಡು ಆ ಹುಡುಗನನ್ನು ಬೈಕ್ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. ತೌಫಿಕ್ ಎಂಬುವವನೊಂದಿಗೆ ಸೇರಿಕೊಂಡು ಬೈಕ್ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ತೌಫಿಕ್ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ. ಆರೋಪಿಯಿಂದ ಅಂದಾಜು 1.10 ಲಕ್ಷ ರೂ. ಮೌಲ್ಯದ 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
Related Articles
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಕೆ. ಪರಶುರಾಮ್, ಉಪಾಧೀಕ್ಷಕ ಲಕ್ಷ್ಮಣ ನಿಂಬರಗಿ ಇದ್ದರು.