ಬೆಂಗಳೂರು: ಆನ್‌ಲೈನ್ ಮಾರಾಟ ತಾಣಗಳಲ್ಲಿ ವಸ್ತುಗಳನ್ನು ಕೊಳ್ಳಲು ಇಚ್ಛಿಸಿ ಕರೆಸಿಕೊಳ್ಳುವವರ ಬಗ್ಗೆ ಎಚ್ಚರವಿರಲಿ. ವಸ್ತುಗಳನ್ನು ಕೊಳ್ಳುವ ನೆಪದಲ್ಲಿ ಕರೆಸಿಕೊಂಡು ಹಲ್ಲೆ ನಡೆಸಿ ಸುಲಿಗೆ ಮಾಡುವ ದುಷ್ಕರ್ಮಿಗಳು ಸಕ್ರಿಯರಾಗಿದ್ದಾರೆ.ಇಂತಹದ್ದೊಂದು ಪ್ರಕರಣ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
“ಓಎಲ್‌ಎಕ್ಸ್’ ತಾಣದಲ್ಲಿ ಮಾರಕ್ಕಿಟ್ಟಿದ್ದ ಮೊಬೈಲ್ ಖರೀದಿಸುವುದಾಗಿ ನಂಬಿಸಿ ವಿದ್ಯಾರ್ಥಿಯೊಬ್ಬರನ್ನು ತಮ್ಮ ರೂಂಗೆ ಕರೆಸಿಕೊಂಡ ದುಷ್ಕರ್ಮಿಗಳು ಆತನಿಗೆ ಮಚ್ಚು ತೋರಿಸಿ ಬೆದರಿಸಿ, ಮೊಬೈಲ್, 20 ಸಾವಿರ ರೂ. ಕಿತ್ತುಕೊಂಡಿದ್ದ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಹುಸೇನ್ ಷರೀಫ್, ಆಫ್ರಿದ್ ಖಾನ್, ಅಡ್ನಾನ್ ಪಾಷಾ ಬಂಧಿತರು. ಆರೋಪಿಗಳಿಂದ 10 ಸಾವಿರ ರೂ. ನಗದು ಹಾಗೂ ಸುಲಿಗೆ ಮಾಡಿದ್ದ ಒಂದು ಮೊಬೈಲ್ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.ಆರೋಪಿಗಳು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದು ಈ ಹಿಂದೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆಯಿಲ್ಲ. ಹಣಕ್ಕಾಗಿ ಆರೋಪಿಗಳು ಸುಲಿಗೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಕೃತ್ಯದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿದ್ದು ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಮಂಗಲದ ಅನುರಾಗ್ ಕೆಲದಿನಗಳ ಹಿಂದೆ ಇನ್‌ಸ್ಟಾ ಗ್ರಾಂನಲ್ಲಿ ಐ ಫೋನ್ ಖರೀದಿಸಿದ್ದರು. ಖರೀದಿ ಮಾಡಿದ್ದ ಮೊಬೈಲ್ ಇಷ್ಟವಾಗದಿದ್ದಕ್ಕೆ ಅದನ್ನು ಮಾರಾಟ ಮಾಡಲು ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ದೂರವಾಣಿ ನಂಬರ್ ಹಾಕಿದ್ದರು. ಜ.23ರಂದು ಅವರಿಗೆ ಕರೆ ಮಾಡಿದ್ದ ಒಬ್ಟಾತ ಐಫೋನ್ ಖರೀದಿಸುವುದಾಗಿ ತಿಳಿಸಿ ಚಿಕ್ಕಪೇಟೆ ಮೆಟ್ರೋನಿಲ್ದಾಣದ ಬಳಿ ರಾತ್ರಿ ಎಂಟು ಗಂಟೆಗೆ ಬರುವಂತೆ ತಿಳಿಸಿದ್ದಾನೆ.
ಹೀಗಾಗಿ ಅಲ್ಲಿಗೆ ಹೋಗಿದ್ದ ಅನುರಾಗ್‌ನನ್ನು ಭೇಟಿ ಮಾಡಿದ್ದ ಇಬ್ಬರು ಆರೋಪಿಗಳು, ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ಬೈಕ್ ಹತ್ತಿಸಿಕೊಂಡಿದ್ದರು. ಮಾರ್ಗಮಧ್ಯೆ ಮೋತಿನಗರದಲ್ಲಿ ಮನೆಯಲ್ಲಿ ತಮ್ಮ ತಾಯಿಯ ಹತ್ತಿರ ನಗದು ಕೊಡಿಸುತ್ತೇನೆ ಎಂದ ಆರೋಪಿ ಮೋತಿನಗರದಲ್ಲಿ ಕೊಠಡಿಯೊಂದಕ್ಕೆ ಕರೆದೊಯ್ದಿದ್ದರು.
ಕೊಠಡಿ ಒಳಗೆ ಹೋಗುತ್ತಿದ್ದಂತೆ ಡೋರ್‌ಲಾಕ್ ಮಾಡಿದ ಆರೋಪಿಗಳು ಮಚ್ಚುತೋರಿಸಿ ಬೆದರಿಸಿದರು. ಜತೆಗೆ, ಕೈಗಳಿಂದ ಹಲ್ಲೆ ನಡೆಸಿ ಮೊಬೈಲ್ ಹಾಗೂ 20 ಸಾವಿರ ರೂ. ನಗದು ಕಿತ್ತುಕೊಂಡಿದ್ದರು. ಬಳಿಕ ಬೇರೆ ಕಡೆ ಅನುರಾಗ್‌ನನ್ನು ಕರೆದೊಯ್ಯಲು ಕೆಳಗಡೆ ಕರೆತರುತ್ತಿದ್ದಂತೆ ತಪ್ಪಿಸಿಕೊಂಡಿದ್ದ ಆತ ಬಾರ್‌ವೊಂದಕ್ಕೆ ತೆರಳಿ ಅಲ್ಲಿನ ಸಿಬ್ಬಂದಿ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.