Advertisement

ಬಾರ್‌ ಸಿಬ್ಬಂದಿಗೆ ಇರಿದ ಮೂವರ ಸೆರೆ

03:53 PM Aug 14, 2018 | Team Udayavani |

ಬೆಂಗಳೂರು: ಟೇಬಲ್‌ ಮೇಲೆ ಕಾಲು ಇಟ್ಟಿದ್ದನ್ನು ಪ್ರಶ್ನಿಸಿದ ಬಾರ್‌ ಸಿಬ್ಬಂದಿ ಮೇಲೆ ಐವರು ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಮೆಜೆಸ್ಟಿಕ್‌ ಬಳಿಯ ಬ್ಲೂಹೆವೆನ್‌ ಹೋಟೆಲ್‌ ಬಳಿ ಭಾನುವಾರ ತಡರಾತ್ರಿ ನಡೆದಿದೆ.

Advertisement

ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಶಂಶುದ್ದೀನ್‌(28), ಚಿಕ್ಕಮಗಳೂರಿನ ಸಲ್ಮಾನ್‌ (28) ಮತ್ತು ಇರ್ಷಾದ್‌(23) ಎಂಬುವವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ರಿಯಾಜ್‌ ಮತ್ತು ಮೊಹಮ್ಮದ್‌ ಎಂಬುವವರಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. 

ಆರೋಪಿಗಳ ಕೃತ್ಯದಿಂದ ಹೋಟೆಲ್‌ ಮಾಲೀಕ ಮೋಹನ್‌ ಶೆಟ್ಟಿ, ಸಿಬ್ಬಂದಿ ವಿಜಯ್‌ ಕುಮಾರ್‌, ಮಹೇಶ್‌, ಪ್ರೇಮೇಶ್‌, ದೀಲೀಪ್‌ ಮತ್ತು ಉಮೇಶ್‌ ಹಾಗೂ ಇತರರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಇರ್ಷಾದ್‌ ಬಿಎಂಟಿಸಿ ಬಸ್‌ ನಿಲ್ದಾಣದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಂಬೈನ ಹೋಟೆಲ್‌
ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸಲ್ಮಾನ್‌, ಕೆಲ ದಿನಗಳ ಹಿಂದಷ್ಟೇ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಶಂಶುದ್ದೀನ್‌ ಕೋರಮಂಗಲದ ಹೋಟೆಲ್‌ ಉದ್ಯೋಗಿ.
 
ಕಾರ್ಯಕ್ರಮವೊಂದರಲ್ಲಿ ಐವರು ಆರೋಪಿಗಳು ಪರಸ್ಪರ ಪರಿಚಯವಾಗಿದ್ದು, ಭಾನುವಾರ ರಜೆಯಿದ್ದ ಕಾರಣ ಎಲ್ಲರೂ
ಒಟ್ಟಿಗೆ ಸೇರಿದ್ದರು. ಹೀಗಾಗಿ ಆರೋಪಿ ಸಲ್ಮಾನ್‌ ನಾಲ್ಕು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಬ್ಲೂಹೆವೆನ್‌ ಹೋಟೆಲ್‌ಗೆ ತನ್ನ ನಾಲ್ವರು ಸ್ನೇಹಿತರನ್ನು ಮದ್ಯ ಸೇವಿಸಲು ಕರೆದೊಯ್ದಿದ್ದ.

ತಡರಾತ್ರಿ 11.30ರ ವರೆಗೆ ಮದ್ಯ ಸೇವಿಸಿದ ಆರೋಪಿಗಳು ಟೇಬಲ್‌ ಮೇಲೆ ಕಾಲು ಇಟ್ಟು ಏರುಧ್ವನಿಯಲ್ಲಿ ಮಾತನಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಸಿಬ್ಬಂದಿಯೊಬ್ಬರು ಟೇಬಲ್‌ ಮೇಲಿಂದ ಕಾಲು ತೆಗೆಯುವಂತೆ ಕೇಳಿಕೊಂಡಿದ್ದಾರೆ. ಆಗ ಆರೋಪಿಗಳು ಹಾಗೂ ಹೋಟೆಲ್‌ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಎಲ್ಲರನ್ನೂ ಸಮಾಧಾನ ಪಡಿಸಿ ಐವರನ್ನು ಹೊರಗೆ ಕಳುಹಿಸಲಾಗಿತ್ತು.

Advertisement

ಇದರಿಂದ ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿದ್ದ ಅಡುಗೆ ಕೆಲಸಕ್ಕೆ ಬಳಸುವ ಚಾಕುವಿನಿಂದ ಹೋಟೆಲ್‌ ಒಳಗೆ ನುಗ್ಗಿ ಮಾಲೀಕ ಮೋಹನ್‌ ಶೆಟ್ಟಿ ಸೇರಿ 6 ಮಂದಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಉಪ್ಪಾರಪೇಟೆ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next