ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಜನ ಬೆಂಬಲಿಸಿದರೆ ಕ್ಷೇತ್ರದ ಅಭಿವೃದ್ಧಿ ಮತ್ತೆ 15 ವರ್ಷದ ಹಿಂದಕ್ಕೆ ಹೋಗುತ್ತದೆ. ಕಾಂಗ್ರೆಸ್ಸಿನ ಜಾತಿ, ಟೀಕೆ, ಅಪಪ್ರಚಾರ, ವಯಕ್ತಿಕ ನಿಂದನೆ, ವೈಷಮ್ಯ ಯಾವುದಕ್ಕೂ ಕಿವಿಕೊಡದೆ ಅಭಿವೃದ್ಧಿ ಪರವಿರುವ ಸುನಿಲರನ್ನೆ ಮತ್ತೂಮ್ಮೆ ಬಹುಮತದಿಂದ ಬೆಂಬಲಿಸುವ ನಿರ್ಧಾರವನ್ನು ಕ್ಷೇತ್ರದ ಮತದಾರರ ಬಂಧುಗಳು ಗಟ್ಟಿಯಾಗಿ ತೆಗೆದುಕೊಳ್ಳಬೇಕು ಎಂದು ಹಿರಿಯ ನ್ಯಾಯವಾಧಿ ಎಂ.ಕೆ ವಿಜಯಕುಮಾರ್ ಹೇಳಿದರು.
ಅಜೆಕಾರಿನಲ್ಲಿ ಮತಯಾಚಿಸಿ ಮಾತನಾಡಿದ ಅವರು ಕಾರ್ಕಳದ ಸಮಗ್ರ ಅಭಿವೃದ್ಧಿಯಲ್ಲಿ ಸಚಿವ ವಿ. ಸುನಿಲ್‌ಕುಮಾರ್ ಶ್ರಮಿಸಿದ ಹಾದಿ ಅದು ಅಷ್ಟು ಸುಲಭವಾಗಿರಲಿಲ್ಲ. ತನ್ನ ಕ್ಷೇತ್ರಕ್ಕಾಗಿ ಹಠ ಹಿಡಿದು ಸರಕಾರದ ಎಲ್ಲ ಇಲಾಖೆಗಳಿಂದ ಅನುದಾನ ತರಿಸಿ ಅಭಿವೃದ್ಧಿ ಮಾಡಿದನ್ನು ಯಾರೂ ಮರೆಯಬಾರದು. ಇದನ್ನು ಸಹಿಸಲಾಗದ ಕಾಂಗ್ರೆಸ್ ಸುನಿಲರು ಮಾಡಿದ ಅಭಿವೃದ್ಧಿಯನ್ನೇ ಟೀಕಿಸುತ್ತಿದೆ. ಇವರ ಅಪಪ್ರಚಾರ ಮಾತುಗಳಿಗೆ ಯಾರು ಕಿವಿಗೊಡದೆ ಕಣ್ಣೆದುರು ಕಾಣುವ ಅಭಿವೃದ್ಧಿಯನ್ನು ನೋಡಿ ಮತ ಹಾಕುವಂತೆ ಅವರು ಹೇಳಿದರು.
ಸುನಿಲರ ಅಭಿವೃದ್ಧಿ ಹೇಗೆ, ಏನು ಎನ್ನುವುದನ್ನು ಕ್ಷೇತ್ರದ ಪ್ರತಿ ಹಳ್ಳಿಯ ಜನ ಹೇಳುತ್ತಾರೆ. ಅದನ್ನು ಕಾಂಗ್ರೆಸ್ ಹೇಳಬೇಕಿಲ್ಲ ಎಂದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಮಹೇಶ್ ಶೆಟ್ಟಿ ಕುಡುಪ್ಲಾಜೆ, ಕೆ.ಪಿ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಸಜ್ಜನಿಕೆಯ ಮನಸ್ಸು ಕದಡುವ ಕೆಲಸ:ಸುನಿಲ್
ಕೇವಲ ವೈಯುಕ್ತಿಕ ನಿಂದನೆ ಮತ್ತು ಅಪಪ್ರಚಾರವನ್ನೇ ಬಂಡವಾಳವಾಗಿರಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿರುವ ಕಾಂಗ್ರೆಸ್, ಕಾರ್ಕಳ ಕ್ಷೇತ್ರದ ಸುಸಂಸ್ಕೃತ ಮತ್ತು ಸಜ್ಜನಿಕೆಯ ಮನಸ್ಸುಗಳನ್ನು ಕದಡುವ ಕೆಲಸವನ್ನು ಮಾಡುತ್ತಿದೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಚುನಾವಣಾ ಸಂದರ್ಭ ಅಭಿವೃದ್ಧಿ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ವಿ.ಸುನಿಲ್ ಕುಮಾರ್ ಬಜಗೋಳಿ ಪೇಟೆಯಲ್ಲಿ ಜರಗಿದ ಚುನಾವಣಾ ಪ್ರಚಾರ ಭಾಷಣದಲ್ಲಿ ಕರೆ ನೀಡಿದರು.
Related Articles
ಮಣಿರಾಜ್ ಶೆಟ್ಟಿ , ಕೆಪಿ ಶೆಣೈ, ರವೀಂದ್ರ ಶೆಟ್ಟಿ ಬಜಗೋಳಿ ,ಶಶಿಧರ್ ಶೆಟ್ಟಿ ಬರೊಡ, ಸದಾಶಿವ ಸಾಲಿಯಾನ್ ಹರೀಶ್. ಡಿ. ಸಾಲಿಯಾನ್ ಪುಣೆ, ಸುರೇಶ್ ಶೆಟ್ಟಿ, ಉದಯ ಕೋಟ್ಯಾನ್, ವಿಖ್ಯಾತ್ ಶೆಟ್ಟಿ ಜೆರಾಲ್ಡ್ ಡಿ ಸಿಲ್ವ ಸುರೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಹಿಂದೂ ಧಾರ್ಮಿಕ ಕೇಂದ್ರದ ಅಭಿವೃದ್ಧಿ ಕಾಂಗ್ರೆಸ್ಸಿಗೆ ಬೇಕಿಲ್ಲ. ಸಹಿಸಲೂ ಆಗುತಿಲ್ಲ:ಹೆಗ್ಡೆ
ಪುರಾತನ ದೇಗುಲ ಶ್ರೀ ಮಾರಿಯಮ್ಮ ದೇಗುಲ ಇಡೀ ಕಾರ್ಕಳ ಕ್ಷೇತ್ರದ ಭಕ್ತರಿಗೆ ಸಂಬಂದಿಸಿದ್ದು, ಸರ್ವ ಭಕ್ತರ ನೆರವಿನಿಂದ ಭಕ್ತರ ಆಶಯದಂತೆ, ಸರಕಾರದ ಸಹಕಾರ ಪಡೆದು ದೇವಿ ದೇಗುಲದ ಜೀರ್ಣೋದ್ಧಾರ ನಡೆಸಿ, ಬ್ರಹ್ಮಕಲಶ ವೈಭವಯುತವಾಗಿ ನಡೆಸಿದರೆ ಇಷ್ಟು ದೊಡ್ಡ ದೇವಸ್ಥಾನ ಬೇಕಿತ್ತ? ವೈಭವ ಬೇಕಿತ್ತ ಎಂದೆಲ್ಲ ದೇವಸ್ಥಾನದ ಅಭಿವೃದ್ಧಿಯನ್ನೆ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯನ್ನು ಕಾಂಗ್ರೆಸ್ಸಿಗೆ ಸಹಿಸಲಾಗುತ್ತಿಲ್ಲವೇ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿಗರ ಮನಸ್ಥಿತಿ ಹೇಗಿದೆ ಎಂದರೆ ಅಭಿವೃದ್ಧಿ ಆಗಿಲ್ಲ ಎಂದರೆ ಆಗಿಲ್ಲ ಎನ್ನುತ್ತಾರೆ. ಅಭಿವೃದ್ಧಿ ಮಾಡಿದಾಗ ಅದನ್ನು ಟೀಕಿಸುತ್ತಾರೆ. ಹಾಗಿದ್ದರೆ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್ಸಿನ ಮನಸ್ಥಿತಿ ಏನು ಎನ್ನುವುದೇ ಅರ್ಥವಾಗುತಿಲ್ಲ. ಒಂದು ಕಡೆ ಹಿಂದೂ ದೇವಸ್ಥಾನಗಳ ಅಭಿವೃದ್ಧಿ ಸಹಿಸದೆ ಟೀಕಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗುಟ್ಟಾಗಿ ಮಸೀದಿ ಕಟ್ಟಿ ಕೊಡುತ್ತೇವೆ ಎನ್ನುತ್ತ ತಿರುಗಾಡುತ್ತಿದ್ದಾರೆ ಎಂದರು. ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶದಲ್ಲಿ ಭಕ್ತರೆಲ್ಲರೂ ಸಹಕರಿಸಿದ್ದಾರೆ. ಅದರಲ್ಲಿ ಬಿಜೆಪಿ ಕಾರ್ಯಕರ್ತರೂ ಸೇರಿದ್ದಾರೆ. ಕಾಂಗ್ರೆಸ್ಸಿನವರಿಗೆ ಹುಳುಕು ಹುಡುಕುವುದಕ್ಕೆ ಏನೂ ಸಿಗುತಿಲ್ಲ ಅದಕ್ಕೆ ಒಂತಹದನ್ನು ಸೃಷ್ಟಿಸುತ್ತಿದೆ ಎಂದರು.
ಹಿಂದೂ ಅಶ್ಲೀಲ ಎನ್ನುವ ಪದ ಬಳಕೆ ಮಾಡುವ ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕೇಂದ್ರದ ಅಭಿವೃದ್ಧಿಯನ್ನು ಸಹಿಸಲು ಸಾಧ್ಯವಾಗುತಿಲ್ಲ, ಹಿಂದೂ ದೇಗುಲ ಅಭಿವೃದ್ಧಿ ಆಗುವುದು ಕಾಂಗ್ರೆಸ್ಸಿಗೆ ಬೇಕಿಲ್ಲ ಎಂದ ಅವರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಅಮಾಯಕ ಎಂದು ಆ ಪಕ್ಷದ ಮುಖಂಡರೇ ಹೇಳುತ್ತಾರೆ. ಧಾರ್ಮಿಕ ವಿಚಾರ ಬಂದಾಗ ಪ್ರತಿಯೊಂದರಲ್ಲೂ ಹುಳುಕು ಹುಡುಕುವ ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕ್ಷೇತ್ರಗಳ ವೈಭವ ಕಾಣುವುದಕ್ಕೆ, ಅರಗಿಸಿಕೊಳ್ಳಲು ಆಗುತಿಲ್ಲ ಎಂದು ದೂರಿದರು.