ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಬೇಡಿಕೆಗೆ ತಕ್ಕಂತೆ ಅನುದಾನ ಒದಗಿಸುವ ಜತೆಗೆ ರಾಜ್ಯದ ಇತರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ಮೂಲಕ ಮುಂದಿನ ಮೂರೂವರೆ ವರ್ಷ ಸುಭದ್ರ ಸರಕಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು. ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 81 ಗ್ರಾಮಗಳ ಒಟ್ಟು 347 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಜನರ ಆಶೋತ್ತರಗಳಿಗೆ ಸ್ಪಂದನೆ ನೀಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಅಪೇಕ್ಷಿಸಿದ ಕಾಮಗಾರಿಗಳಿಗೆ ಅನುದಾನ ಪೂರೈಸಲಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದೇವೆ ಎಂದರು.
ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಅವರು, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದ ಜನತೆಗೆ ಒಳಿತಾಗಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಬೇಡುತ್ತೇನೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿಗೆ ತಡೆಗೋಡೆ ನಿರ್ಮಿಸುವಂತೆ ಡಾ| ಹೆಗ್ಗಡೆ ಮಾಡಿರುವ ವಿನಂತಿಯಂತೆ ಅನುದಾನ ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.
ನೆರೆ ಪರಿಹಾರ ನೆರವಿಗೆ ಕೃತಜ್ಞತೆ: ಪ್ರವಾಹ ಪರಿಸ್ಥಿತಿ ಉಂಟಾದಾಗ ಸಂತ್ರಸ್ತರ ನೆರವಿಗೆ ಧಾವಿಸಿ ದವರನ್ನು ಸಿಎಂ ಅಭಿನಂದಿಸಿದರು. ಡಾ| ವೀರೇಂದ್ರ ಹೆಗ್ಗಡೆ ಯವರು ನೀಡಿದ 25 ಕೋ.ರೂ.ನೆರವು ಸೇರಿ ರಾಜ್ಯದ ಪರಿಹಾರ ನಿಧಿಯಲ್ಲಿ ಒಟ್ಟು 500 ಕೋ.ರೂ. ಸಂಗ್ರಹವಾಗಿದೆ ಎಂದರು.
ಸಿಎಂಗೆ ಬೆಳ್ಳಿ ಕಿರೀಟ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ, 75 ಕೆ.ಜಿ.ತೂಕ, 31 ಅಡಿ ಉದ್ದದ ಬೃಹತ್ ತುಳಸಿ ಮತ್ತು ಸೇವಂತಿಗೆ ಹೂವುಗಳ ಮಾಲೆ ಹಾಕಿ ಶಾಸಕ ಹರೀಶ್ ಪೂಂಜ ಗೌರವಿಸಿದರು. ಪವಿತ್ರ ನೇತ್ರಾವತಿ ತೀರ್ಥ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ನೀಡಿದರು.
ರಾಜ್ಯದಿಂದ ಜಿಎಸ್‌ಟಿ ಕಟ್ಟಿಲ್ಲ ಎಂದು ಹೇಳಿ ಕೇಂದ್ರ ಸರಕಾರ ಅನುದಾನ ಕೊಡುತ್ತಿಲ್ಲ ಎಂಬ ಸಿದ್ದರಾಮಯ್ಯ ಆರೋಪ ಸತ್ಯಕ್ಕೆ ದೂರವಾದದ್ದು. ವಿಪಕ್ಷ ನಾಯಕರಾಗಿ ಮಾಹಿತಿ ತಿಳಿದುಕೊಳ್ಳದೆ ಆರೋಪ ಮಾಡುವುದು ಸರಿಯಲ್ಲ.
-ಬಿ.ಎಸ್.ಯಡಿಯೂರಪ್ಪ, ಸಿಎಂ