ಮಂಗಳೂರು: ಕೋವಿಡ್-19 ಕಾರಣ ಕೊಲ್ಲಿ ರಾಷ್ಟ್ರ ಕತಾರ್‌ನಲ್ಲಿ ಸುಮಾರು 30,000 ಮಂದಿ ಕನ್ನಡಿಗರು ಕೆಲಸ ಕಳೆದುಕೊಂಡು ಸಂತ್ರಸ್ತರಾಗಿದ್ದು, ಪ್ರಸ್ತುತ ಅವರು ತಾಯ್ನಾಡಿಗೆ ಹಿಂದಿರುಗಲು ವ್ಯವಸ್ಥೆಗಳಿಲ್ಲದೆ ಎರಡೂವರೆ ತಿಂಗಳಿಂದ ಅತಂತ್ರರಾಗಿದ್ದಾರೆ.
ಕಂಪೆನಿಯು ಅವರನ್ನು ಕೆಲಸದಿಂದ ತೆಗೆದು ಹಾಕಿದ್ದು, ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿಲ್ಲ; ಹಾಗಾಗಿ ಕೆಲಸವೂ ಇಲ್ಲದೆ, ಊಟ ತಿಂಡಿಗೂ ಪರದಾಡ ಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರಯತ್ನದಿಂದ ಈಗಾಗಲೇ ದುಬಾೖ, ಸೌದಿ ಅರೇಬಿಯಾ, ಕುವೈಟ್ ಮತ್ತು ಇತರ ದೇಶಗಳಿಂದ ಕನ್ನಡಿಗರನ್ನು ಭಾರತಕ್ಕೆ ವಾಪಸ್ ಕರೆತರಲು ವಿಮಾನಗಳ ವ್ಯವಸ್ಥೆ ಆಗಿದೆ. ಆದರೆ ಕತಾರ್‌ನಲ್ಲಿರುವ ಕನ್ನಡಿಗರನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
“ನನ್ನ ಅಕ್ಕ ಮತ್ತು ಭಾವ 10 ವರ್ಷಗಳಿಂದ ಕತಾರ್‌ನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಮಾರ್ಚ್‌ನಲ್ಲಿ ಅವರನ್ನು ಕಂಪೆನಿ ಕೆಲಸದಿಂದ ಕೈಬಿಟ್ಟಿದೆ. ಊರಿಗೆ ವಾಪಸಾಗಲು ವಿಮಾನ ಇಲ್ಲದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ’ ಎಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಮಲ್‌ರಾಜ್ “ಉದಯವಾಣಿ’ಗೆ ತಿಳಿಸಿದರು. ಕತಾರ್‌ನಲ್ಲಿ ಒಂದು ಲಕ್ಷದಷ್ಟು ಕನ್ನಡಿಗರಿದ್ದು, 30,000 ಮಂದಿ ಈಗ ಕೆಲಸ ಕಳೆದುಕೊಂಡಿದ್ದಾರೆ.
ಸ್ವದೇಶಕ್ಕೆ ಹಿಂದಿರುಗಲು ಸಾವಿರಾರು ಮಂದಿಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ವಿಮಾನದ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿದೆ. ವಿಮಾನ ವ್ಯವಸ್ಥೆ ಮಾಡುವಂತೆ ಕರ್ನಾಟಕ ಸರಕಾರ, ಕೇಂದ್ರ ಸರಕಾರಗಳಿಗೆ ಮತ್ತು ಕತಾರ್ ಸರಕಾರಕ್ಕೆ ಸಲ್ಲಿಸಿದ ಮನವಿಗಳಿಗೆ ಈ ತನಕ ಯಾರೂ ಸ್ಪಂದಿಸಿಲ್ಲ.