ನವದೆಹಲಿ: ಕಳೆದ ಶನಿವಾರ ವಕೀಲರೊಂದಿಗಿನ ಘರ್ಷಣೆಯಲ್ಲಿ ತಮಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ದೆಹಲಿ ಪೊಲೀಸ್ ಸಿಬ್ಬಂದಿ ಕಳೆದ 11 ಗಂಟೆಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್ಟಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಸಾವಿರಾರು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಪೊಲೀಸ್ ಮುಖ್ಯ ಕಛೇರಿಯ ಮುಂಭಾಗ ಸತ್ಯಾಗ್ರಹವನ್ನು ನಡೆಸುತ್ತಿದ್ದರು.
ಪೊಲೀಸ್ ಸಿಬ್ಬಂದಿ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ ಭರವಸೆಯ ಮೇಲೆ ಪೊಲೀಸ್ ಸಿಬ್ಬಂದಿ ತಮ್ಮ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ.
ತೀಸ್ ಹಝಾರಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಳೆದ ಶನಿವಾರ ವಕೀಲರು ಮತ್ತು ಪೊಲೀಸರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಈ ಘಟನೆಗೆ ಕಾರಣರಾದ ಆರೋಪಿಗಳ ವಿರುದ್ದ ದೆಹಲಿ ಹೈಕೋರ್ಟಿನ ಆದೇಶದ ಪ್ರಕಾರ ಹೊಸ ದೂರುಗಳನ್ನು ದಾಖಲಿಸಿಕೊಳ್ಳುವುದಾಗಿ ವಿಶೇಷ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಸತೀಶ್ ಗೋಲ್ಚಾ ಅವರು ಭರವಸೆ ನೀಡುವ ಮೂಲಕ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ನಡೆಸುತ್ತಿರುವ ಸತ್ಯಾಗ್ರಹವನ್ನು ಕೂಡಲೇ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ತಮ್ಮ ಸತ್ಯಾಗ್ರಹವನ್ನು ಕೈಬಿಟ್ಟರು.
ತೀಸ್ ಹಝಾರಿ ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಕನಿಷ್ಟ 25 ಸಾವಿರ ರೂಪಾಯಿಗಳ ಪರಿಹಾರವನ್ನು ಒದಗಿಸಲಾಗುವುದು ಎಂದೂ ಸಹ ಗೋಲ್ಚಾ ಅವರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.