Advertisement

ಸಾವಿರ “ಆದರ್ಶ ಗ್ರಾಮ’ಕ್ಕೆ  ಕಂಕಣ ತೊಟ್ಟ  ಸರಪಂಚ

03:45 AM Jan 29, 2017 | Harsha Rao |

ಹುಬ್ಬಳ್ಳಿ: ಮನೆ ಮನೆಗೆ ತ್ಯಾಜ್ಯ ಸಂಗ್ರಹ, ತ್ಯಾಜ್ಯದಿಂದ ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್‌ ಸರ್ಕಾರಕ್ಕೆ ಮಾರಾಟ, ವೈಫೈ ಸೌಲಭ್ಯ, ಎಲ್ಲ ಮನೆಗೆ ಶೌಚಾಲಯ…ಇದು ಯಾವುದೋ ಮಹಾನಗರದ ಚಿತ್ರಣವಲ್ಲ. ಗುಜರಾತ್‌ನ ಪುಟ್ಟ ಹಳ್ಳಿಯೊಂದರ ಯಶೋಗಾಥೆ. ಗುಜರಾತ್‌ನ ಸಬರಕಂಠ ಜಿಲ್ಲೆಯ ಪುನ್ಸಾರಿ ಗ್ರಾಮದ ಸರಪಂಚ(ಗ್ರಾ.ಪಂ.ಅಧ್ಯಕ್ಷ)
ಹಿಮಾಂಶು ನರೇಂದ್ರಭಾಯಿ ಪಟೇಲ್‌, ಆದರ್ಶ ಗ್ರಾಮಗಳ ನಿರ್ಮಾಣಕ್ಕೆ ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಹರ್ಯಾಣ, ತೆಲಂಗಾಣಗಳಲ್ಲಿ 300 ಗ್ರಾಮಗಳನ್ನು ಈಗಾಗಲೇ ಗುರುತಿಸಿದ್ದು, ಕರ್ನಾಟಕ ಸೇರಿದಂತೆ ಇತರೆ
ರಾಜ್ಯಗಳ ಸಂಪರ್ಕ ಯತ್ನ ಕೈಗೊಂಡಿದ್ದಾರೆ.

Advertisement

ಪುನ್ಸಾರಿ ಗ್ರಾಮ ಹಲವು ಅತ್ಯಾಧುನಿಕ ಸೌಲಭ್ಯ ಪಡೆದಿದೆ. ಯಾವುದೇ ದೇಣಿಗೆ ಪಡೆಯದೆ ಕೇಂದ್ರ-ರಾಜ್ಯ ಸರ್ಕಾರಗಳ ಅನುದಾನದಲ್ಲೇ ಅಭಿವೃದ್ಧಿ ಹೊಂದಿ ಇಡೀ ದೇಶಕ್ಕೆ ಆದರ್ಶ ಗ್ರಾಮವಾಗಿ ಕಂಗೊಳಿಸುತ್ತಿದೆ. ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾದ 10 ವರ್ಷದಲ್ಲಿ ಇಡೀ ಗ್ರಾಮದ ಚಿತ್ರಣವನ್ನೇ ಬದಲು ಮಾಡಿದ ಹಿಮಾಂಶು ನರೇಂದ್ರಭಾಯಿ ಪಟೇಲ್‌,
ಗ್ರಾಮದ ಯಶೋಗಾಥೆ, ಇಂತಹ 1000 ಗ್ರಾಮಗಳ ನಿರ್ಮಾಣದ ಸಾಹಸ ಯಾತ್ರೆ ಚಿಂತ®ೆಯನ್ನು “ಉದಯವಾಣಿ’ ಮುಂದೆ ಬಿಚ್ಚಿಟ್ಟರು.

ನಾವು ಮಾದರಿಯಾಗಿದ್ದೇವೆ:
2006ಕ್ಕಿಂತ ಮೊದಲು ದೇಶದ ಇತರೆ ಗ್ರಾಮಗಳಂತೆ ಪುನ್ಸಾರಿಯೂ ಒಂದಾಗಿತ್ತು. ಸಮಸ್ಯೆ-ಸವಾಲುಗಳನ್ನು ಗ್ರಾಮ ಹೊದ್ದು ಮಲಗಿತ್ತು. ಪುನ್ಸಾರಿ ಗ್ರಾಮ ಸುಮಾರು 6000 ಜನಸಂಖ್ಯೆ ಹೊಂದಿದೆ. ಪ್ರತಿ ಮನೆಗೂ ಶೌಚಾಲಯ, ಶುದ್ಧ ಕುಡಿಯುವ ನೀರಿನ ಸಂಪರ್ಕ, ಬೀದಿಗಳಲ್ಲಿ ಎಲ್‌ಇಡಿ ದೀಪಗಳು, ವೈಫೈ ಸೌಲಭ್ಯ, ಮನೆ, ಮನೆಯಿಂದ ತ್ಯಾಜ್ಯ
ಸಂಗ್ರಹಿಸಿ, ಅದರಿಂದ ವಿದ್ಯುತ್‌ ತಯಾರಿಸಿ ಗ್ರಾಮಕ್ಕೆ ಬಳಸಿ ಉಳಿದ ವಿದ್ಯುತ್ತನ್ನು ಪ್ರತಿ ಯುನಿಟ್‌ಗೆ 6 ರೂ.ನಂತೆ ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡುತ್ತೇವೆ. ಚರಂಡಿ ವ್ಯವಸ್ಥೆ ಇದೆ. ಆಂತರಿಕ ಸಂಚಾರಕ್ಕೆ ಗ್ರಾಮ ಸಾರಿಗೆ ವ್ಯವಸ್ಥೆ
ಹೊಂದಿದೆ ಎನ್ನುತ್ತಾರೆ ಪಟೇಲ್‌.

ಇ-ಶೌಚಾಲಯ, ಇಡೀ ಗ್ರಾಮಕ್ಕೆ ಸಿಸಿ ಟಿವಿ, ಶಾಲೆಗಳು ಸ್ಮಾರ್ಟ್‌ ಆಗಿವೆ, 2010ರಿಂದ ಒಂದೇ ಒಂದು ಮಗು ಶಾಲೆಯಿಂದ ಹೊರಗುಳಿದಿಲ್ಲ. 120 ಕಡೆ ಧ್ವನಿವರ್ಧಕ ಅಳವಡಿಸಲಾಗಿದ್ದು, ಮುಂಜಾನೆ-ಸಂಜೆ ಮಹಾತ್ಮ ಗಾಂಧಿ ಅವರ ಭಜನೆ, ಕೃಷಿ ಸಂಬಂಧಿ ಮಾಹಿತಿ ನೀಡಲಾಗುತ್ತದೆ. ನಗರಗಳಿಗೆ ವಲಸೆ ಹೋಗಿದ್ದ 32 ಕುಟುಂಬಗಳು ಮತ್ತೆ ಹಳ್ಳಿಗೆ ಬಂದು ನೆಲೆಸಿದ್ದು, ಇದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಹಿಮಾಂಶು ಹೇಳಿದರು.

ಜಿಪಿಎಸ್‌ ಮ್ಯಾಪಿಂಗ್‌: ಮುಂದಿನ ದಿನಗಳಲ್ಲಿ ಗ್ರಾಮವನ್ನು ಜಿಪಿಎಸ್‌ ಮ್ಯಾಪಿಂಗ್‌ ಮಾಡಿಸುತ್ತೇವೆ. ಬ್ಯಾಟರಿಯಾಧಾರಿತ ಇ-ರಿಕ್ಷಾ, ಮಕ್ಕಳಿಗೆ ಪ್ರೇರಣೆ ನೀಡುವ ಚಿತ್ರಗಳ ಪ್ರದರ್ಶನಕ್ಕೆ ಡಿಜಿಟಲ್‌ ಸ್ಕ್ರೀನ್‌ ಮಿನಿ ಥೇಟರ್‌,
ಹಸಿರು ಗ್ರಾಮವಾಗಿಸುವ ಕಾರ್ಯಗಳಿಗೆ ಶ್ರೀಕಾರ ಹಾಕಿಯಾಗಿದ್ದು, ಮುಂದಿನ ಕೆಲ ತಿಂಗಳಲ್ಲಿ ಇವು ಅನುಷ್ಠಾನಗೊಳ್ಳಲಿವೆ ಎಂಬುದು ಅವರ ಮಾತು. 

Advertisement

ಪ್ರಧಾನಿ ಮೋದಿಯೇ ಮಾದರಿ
ದೇಶದ 1,000 ಗ್ರಾಮಗಳಿಗೆ ಪುನ್ಸಾರಿ ಮಾದರಿ ಅಭಿವೃದ್ಧಿ ಸ್ಪರ್ಶ ನೀಡಲು ಮುಂದಾಗಿದ್ದೇನೆ. ಸರ್ಕಾರಗಳಿಂದ ಬರುವ ಅನುದಾನವನ್ನೇ ಸಮರ್ಪಕ ಹಾಗೂ ಪರಿಣಾಮಕಾರಿ ಬಳಸುವ ವಿಧಾನ ಹಾಗೂ ನಮ್ಮ ಅನುಭವ ಧಾರೆಯರೆಯಲು ಸಿದ್ಧವಿರುವುದಾಗಿ ಹಿಮಾಂಶು ನರೇಂದ್ರಭಾಯಿ ಪಟೇಲ್‌ ಹೇಳುತ್ತಾರೆ. ಸಮಾನಮನಸ್ಕ ಸರಪಂಚರು ಕೈ ಜೋಡಿಸಿದರೆ ಸಾಕು, ಕೆಲವೇ ವರ್ಷಗಳಲ್ಲಿ ಸಾವಿರ ಗ್ರಾಮಗಳು ಆದರ್ಶ ಗ್ರಾಮಗಳಾಗಲಿವೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಸಂಸದರ ಆದರ್ಶ ಗ್ರಾಮಗಳನ್ನು ಕೇಂದ್ರಿಕರಿಸಿಕೊಂಡು ಕಾರ್ಯನಿರ್ವಹಿಸುವೆ. ನನ್ನ ಈ ಬಯಕೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಮಾದರಿ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next