ಗುಂಪಿನಲಿ ನಾ ಹರಟೆ ಹೊಡೆವಾಗ ಏನೂ ಅರಿಯದ ಮಳ್ಳಿಯ ಹಾಗೆ ನೆಲವನ್ನೇ ನೋಡುತ್ತ ನೀ ಸಾಗಬೇಕಿತ್ತು. ಅದನ್ನ ಗಮನಿಸಿ ನಾನು “ಏ ಬುಲ್ ಬುಲ್ ಮಾತಾಡಕಿಲ್ವಾ?’ ಅಂತ ನಿನ್ನನ್ನು ಕೆಣಕಬೇಕಿತ್ತು. ಒಮ್ಮೊಮ್ಮೆ ನಾನು ಸುಮ್ಮನಿದ್ದರೂ ದೂರದಿಂದಲೇ ನನ್ನನ್ನು ನೋಡಿ ಹತ್ತಿರ ಬಂದಾಗ ಕಂಡೂ ಕಾಣದವಳಂತೆ ನೀ ತಲೆಬಗ್ಗಿಸಿಕೊಂಡು ಹೋಗಿ ಬಿಡಬೇಕಿತ್ತು!
ಪ್ರೀತಿ-ಪ್ರೇಮದ ವಿಷಯದಲ್ಲಿ, ಪ್ರೀತಿಸ್ತಿದೀನಿ ಅಥವಾ ಇಲ್ಲ ಎಂದು ಸ್ಪಷ್ಟವಾಗಿ ಹೇಳದೆ ತಿಂಗಳುಗಳ ಕಾಲ ಕಾಡುವುದರಲ್ಲಿ ಹುಡುಗಿಯರದೇ ಮೇಲುಗೈ. “ನಿನ್ನ ಬಗ್ಗೆ ನನಗಾವ ರೀತಿಯ ಪ್ರೇಮಭಾವನೆಗಳೇ ಇಲ್ಲ’ ಎಂದರೂ ಬೆಂಬಿಡದ ಬೇತಾಳನಂತೆ ಗಂಟುಬಿದ್ದು “ಐ ಲವ್ ಯೂ’ ಅಂತ ಪೀಡಿಸುವ ಚಾಳಿ ಮಾತ್ರ ಹುಡುಗರ ಜನ್ಮಸಿದ್ಧ ಹಕ್ಕು. ಆದರೆ, ನಾ ಪೀಡಿಸಲಿಲ್ಲ. ನೀನು ಕಾಡಲೂ ಇಲ್ಲ. ಆದರೂ ನಾವು ಒಬ್ಬರಿಗೊಬ್ಬರು ಎಷ್ಟೊಂದು ಹತ್ತಿರ ಆಗಿಬಿಟ್ಟೆವಲ್ಲ? ನಿಜಕ್ಕೂ ಈಗ ಬೇಸರವಾಗುತ್ತಿದೆ ಹುಡುಗಿ, ಪೀಡಿಸುವ-ಕಾಡಿಸುವ ಆ ಖುಷಿಯಿಂದ ನಾವಿಬ್ಬರೂ ವಂಚಿತವಾದೆವಲ್ಲ ಎಂದು.
ಗುಂಪಿನಲಿ ನಾ ಹರಟೆ ಹೊಡೆವಾಗ ಏನೂ ಅರಿಯದ ಮಳ್ಳಿಯ ಹಾಗೆ ನೆಲವನ್ನೇ ನೋಡುತ್ತ ನೀ ಸಾಗಬೇಕಿತ್ತು. ಅದನ್ನು ನಾ ಗಮನಿಸಿ “ಏ ಬುಲ್ ಬುಲ್ ಮಾತಾಡಾಕಿಲ್ವ?’ ಅಂತ ಕೆಣಕಬೇಕಿತ್ತು. ಒಮ್ಮೊಮ್ಮೆ ನಾ ಸುಮ್ಮನಿದ್ದರೂ ದೂರದಿಂದಲೇ ನನ್ನನ್ನು ನೋಡಿ ಹತ್ತಿರ ಬಂದಾಗ ನೋಡಿಯೂ ನೋಡದಂತೆ ನೀ ಒಂಟಿಯಾಗಿ ಸಾಗಬೇಕಿತ್ತು. ನಾನು ನಿನ್ನ ಹಿಂದಿಂದೆ ಬಂದು ಭಯದಿಂದಲೇ ನಿನ್ನನ್ನು ಮಾತನಾಡಿಸಬೇಕಿತ್ತು. ದಿನಗಳೆದಂತೆ, ಒಬ್ಬರಿಗೊಬ್ಬರ ಕಣ್ಣುಗಳು ಮಾತಾಡಿ ಹೃದಯದಲಿ ಪ್ರೇಮ ಪ್ರಕರಣ ದಾಖಲಾಗಬೇಕಿತ್ತು.
ಪ್ರೇಮಗೀತೆಗಳ ಕೆಲ ಸಾಲುಗಳನ್ನೇ ಕದ್ದು ಮುದ್ದಾದ ಪ್ರೇಮ ನಿವೇದನೆಯ ಪತ್ರವನ್ನು ನಾನು ಬರೆಯಬೇಕಿತ್ತು. ಅದು ನಿಮ್ಮಪ್ಪನ ಕೈಗೆ ಸಿಕ್ಕಿ ಫಜೀತಿಯಾಗಬೇಕಿತ್ತು. ಅದೇ ಕಾರಣಕ್ಕೆ ನೀನು ಮುನಿಸಿಕೊಳ್ಳಬೇಕಿತ್ತು. ನಾನು ಒಂದಿಡೀ ವಾರ ನಿನಗೆ ಸಾರಿ ಕೇಳಿ ಕಡೆಗೂ ರಾಜಿ ಮಾಡಿಕೊಳ್ಳಬೇಕಿತ್ತು. ಕೊನೆಗೆ ಪ್ರೀತಿಯಲಿ ಫಿಲಾಸಫಿ ಪಾಸಾದ ನಮ್ಮ ಕಾಲೇಜಿನ ಅಮರ ಪ್ರೇಮಿಗಳಿಬ್ಬರ ಸಂಧಾನದಿಂದ ನಾವಿಬ್ಬರೂ ಒಂದಾಗಬೇಕಿತ್ತು.
ಎಲ್ಲವೂ ಅಂದುಕೊಂಡಂತೆಯೇ ಆಗಿ, ಸಿನಿಮಾ-ಪಾರ್ಕು ಅಂತ ಅಲೆಯುತ್ತ ಕಾಲ ದೂಡಬೇಕಿತ್ತು. ರಾತ್ರಿಯಿಡೀ ಮೊಬೈಲಲ್ಲಿ ಹರಟಬೇಕಿತ್ತು. ಬ್ಯಾಟರಿಯ ಚಾರ್ಜ್ ಖಾಲಿಯಾದಾಗ ಕರೆಂಟು ಇಲ್ಲದ್ದು ಗೊತ್ತಾಗಿ ಕೆಪಿಟಿಸಿಎಲ್ನವರನ್ನು ಹಳಿಯಬೇಕಿತ್ತು. ನಿನ್ನನ್ನು ಬಿಟ್ಟು ನಿನ್ನ ಗೆಳತಿಯ ನಾಸಿಕದ ಕುರಿತು ನಾ ಬರೆದ ಕವನವನ್ನು ನಿನ್ನಿಂದಲೇ ಓದಿಸಿ ನಿನ್ನನ್ನು ರೇಗಿಸಬೇಕಿತ್ತು.
ಇದಕ್ಕೆ ಪ್ರತೀಕಾರವಾಗಿ ಕವನ ಓದಿದ ಮರುದಿನದಿಂದಲೇ ನೀನು ನನ್ನೊಂದಿಗೆ ಮಾತು ಬಿಟ್ಟು ಹೊಟ್ಟೆ ಉರಿಸಬೇಕಿತ್ತು. ಆಗ, ಹಸಿವು ನಿದ್ರೆಗಳಿರದೇ ನಾನು ಒದ್ದಾಡಬೇಕಿತ್ತು. ನಮ್ಮಿಬ್ಬರ ಬದುಕಿನಲ್ಲಿ ಇಷ್ಟೇ ಅಲ್ಲ, ಇನ್ನೂ ಏನೇನೋ ಆಗಬೇಕಿತ್ತು ಅನಿಸುತ್ತಿದೆ. ಹೇಳು, ನಿನಗೂ ಎಂದಾದರೂ ಹೀಗೆ ಅನಿಸಿದೆಯಾ? ನನಗೆ ಕಷ್ಟಪಡದೇ ಸಿಕ್ಕ ಸ್ವರ್ಗ ಸುಖ ನೀನು. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸೆಳೆವುದೇ ಜೀವನ’ ಅಲ್ಲವೇ? ಅದಕ್ಕೇ ಇಂಥ ತರ್ಲೆ ವಿಚಾರಗಳು. ಅನಿಸಿದ್ದನ್ನ ಹಾಗೇ ಹೇಳಿದ್ದೇನೆ.
ಇಂತಿ ನಿನ್ನ ನಲ್ಮೆಯ ಹುಚ್ಹುಡುಗ: ಅಶೋಕ ವಿ ಬಳ್ಳಾ