Advertisement

ಆಲಮಟ್ಟಿಯಲ್ಲಿ ಮೀನುಮರಿ ಉತ್ಪಾದನಾ ಕೇಂದ್ರ ಆರಂಭಕ್ಕೆ ಚಿಂತನೆ

06:10 PM Dec 19, 2021 | Shwetha M |

ಆಲಮಟ್ಟಿ: ಆಲಮಟ್ಟಿಯಲ್ಲಿ ಸರ್ಕಾರ ಪಂಜರು (ಅಕ್ವೇರಿಯಂ) ಮೀನು ಕೃಷಿ ಹಾಗೂ ಮೀನು ಮರಿ ಉತ್ಪಾದನಾ ಕೇಂದ್ರ ಆರಂಭಿಸಲು ಉದ್ದೇಶಿಸಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಶನಿವಾರ ಆಲಮಟ್ಟಿಯ ಹಿನ್ನೀರು ಪ್ರದೇಶಕ್ಕೆ ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ಜೊತೆಗೂಡಿ ಭೇಟಿ ನೀಡಿದ ನಂತರ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಹಿನ್ನೀರು ಪ್ರದೇಶ ವಿಶಾಲವಾಗಿದ್ದು, ಮೀನು ಕೃಷಿಗೆ ವಿಫುಲ ಅವಕಾಶವಿದೆ. ಈ ಭಾಗದಲ್ಲಿ ಮೀನು ಕೃಷಿ ಉತ್ತೇಜನಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ವಿಶ್ವವಿದ್ಯಾಲಯ ಮಂಜೂರಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಈ ಕುರಿತು ಮುದ್ದೇಬಿಹಾಳ ಶಾಸಕರ ಒತ್ತಾಯವೂ ಇದೆ. ರಾಜ್ಯದಲ್ಲಿ ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯ, ವಿದ್ಯಾಲಯಗಳೂ ಇಲ್ಲ. ಅವುಗಳನ್ನು ಆರಂಭಿಸುವುದರಿಂದ ಮೀನುಗಾರಿಕೆ ಅಭಿವೃದ್ಧಿಗಾಗಿ ತರಬೇತಿ ಕೇಂದ್ರಗಳೂ ಸೇರಿದಂತೆ ಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಪ್ರದೇಶದಲ್ಲಿ ಮೀನುಕೃಷಿ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅರಣ್ಯ, ಪ್ರವಾಸೋದ್ಯಮ ಹಾಗೂ ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಈ ಭಾಗದಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಮಾರುಕಟ್ಟೆ ವ್ಯವಸ್ಥೆ, ಗುಣಮಟ್ಟ, ಶಿಥಲೀಕರಣ ಘಟಕ, ರಾಜ್ಯದಲ್ಲಿ ಮೀನುಮರಿ ಸಂತಾನೋತ್ಪತ್ತಿ ಘಟಕಗಳು ಇಲ್ಲದಿರುವುದರಿಂದ ನೆರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಇಲ್ಲಿಯೇ ಮೀನುಮರಿ ಉತ್ಪಾದನಾ ಘಟಕ ನಿರ್ಮಿಸಲಾಗುವದು. ಇದರಿಂದ ರೈತರು ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ಮೀನುಗಾರಿಕೆಗೆ ಪ್ರೋತ್ಸಾಹಿಸಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ನೂತನ ತಂತ್ರಜ್ಞಾನ ಯೋಜನೆ ತಯಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಾರ ಹೇಳಿದರು.

Advertisement

ವಿವಿ ಆರಂಭಕ್ಕೆ ಆಗ್ರಹ

ಇದಕ್ಕೂ ಮುಂಚೆ ಉತ್ತರ ಕರ್ನಾಟಕ ಭಾಗದಲ್ಲಿ ಮೀನುಗಾರಿಕೆ ಉತ್ತೇಜನಕ್ಕಾಗಿ ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ವಿಶ್ವವಿದ್ಯಾಲಯವನ್ನು ಆಲಮಟ್ಟಿಯಲ್ಲಿಯೇ ಆರಂಭಿಸಬೇಕು ಎಂದು ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಆಗ್ರಹಿಸಿದರು.

ರಾಷ್ಟ್ರದಲ್ಲಿಯೇ ಮೀನುಗಾರಿಕೆ ಅಭಿವೃದ್ಧಿಗೆ ನೈಸರ್ಗಿಕ ಸಂಪತ್ತಿದೆ, ಮಾನವ ಸಂಪತ್ತಿದೆ, ಅರಣ್ಯ ಸಂಪತ್ತಿದೆ. ಕೈಗಾರಿಕೆ ಅಭಿವೃದ್ಧಿಗೆ ರಾಜ್ಯದ ಭೂಮಿಯಲ್ಲಿ ಖನಿಜಗಳ ನಿಕ್ಷೇಪಗಳಿವೆ. ಹೀಗೆ ದೇಶದಲ್ಲಿಯೇ ಎಲ್ಲ ಸಂಪತ್ತುಗಳನ್ನು ಹೊಂದಿರುವ ರಾಜ್ಯವೆಂದರೆ ಅದು ಕರ್ನಾಟಕ ಮಾತ್ರ ಎಂದರು. ದಕ್ಷಿಣ ಕರ್ನಾಟಕದಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ಉತ್ತೇಜಿಸುವ ಹಲವಾರು ಯೋಜನೆ ಹಾಗೂ ತಂತ್ರಜ್ಞಾನಗಳಿವೆ. ಮೀನುಗಾರಿಕೆ ಚಟುವಟಿಕೆಗೆ ದಕ್ಷಿಣಕ್ಕೆ ಸೀಮಿತಗೊಳ್ಳದೇ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಬೇಡಬೇಕು ಎಂದರು.

ಬಿಜೆಪಿ ಮುಖಂಡ ಮಲಕೇಂದ್ರಾಯಗೌಡ ಪಾಟೀಲ, ಆಪರ ಮೀನುಗಾರಿಕೆ ನಿರ್ದೇಶಕ ದಿನೇಶ ಕಳ್ಳೇರ, ಬೆಂಗಳೂರಿನ ಮೀನುಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ| ಎಂ.ಶಿವಕುಮಾರ ನೊಗದ, ಡಾ| ವಿಜಯಕುಮಾರ ಭೂತನಾಳ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next