Advertisement
ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇಲಾಖೆಯಲ್ಲಿನ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ನಗರದ ಡಿಎಸ್‌ಇಆರ್‌ಟಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ “ಸಂವೇದನಾ’ ಎಂಬ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳ 38 ಮಂದಿ ಸಚಿವರಿಗೆ ಫೋನ್ ಕರೆ ಮಾಡಿ, 44 ಪ್ರಶ್ನೆಗಳನ್ನು ಕೇಳಿದರು.
Related Articles
Advertisement
ಶಾಲೆ ಸ್ಥಳಾಂತರಿಸಿ: ಹತ್ತಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಿ, ಆ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಉತ್ತರ ಕನ್ನಡದ ವೆಂಕಟೇಶ್ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದೇ ಮಗು ಶಾಲೆಯಲ್ಲಿದ್ದರೆ ಆಟ, ಪಾಠ ಎಲ್ಲದಕ್ಕೂ ಸಮಸ್ಯೆಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ ಎಂದರು.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ, ಹತ್ತು ಅಥವಾ ಅದಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಸಮೀಪದ ಕರ್ನಾಟಕ ಪಬ್ಲಿಕ್ ಶಾಲೆಗೆ ಸ್ಥಳಾಂತರಿಸಿ, ಅವರಿಗೆ ನಿತ್ಯ ಶಾಲೆಗೆ ಹೋಗಿ ಬರಲು ಸರ್ಕಾರದಿಂದ ಸಾರಿಗೆ ವ್ಯವಸ್ಥೆ ಮಾಡಲು ಬೇಕಾದ ಪ್ರಸ್ತಾವನೆ ಸರ್ಕಾರದ ಮುಂದಿದೆ. ನೀತಿ ಕೂಡ ಸಿದ್ಧಪಡಿಸಿದ್ದೇವೆ. ಸಚಿವ ಸಂಪುಟದಲ್ಲಿ ತೀರ್ಮಾನ ಆಗಬೇಕಿದೆ. ಗುಣಮಟ್ಟದ ಕಲಿಕೆಗೆ ಇದು ಪೂರಕವಾಗಲಿದೆ ಎಂದರು.
ವಿದ್ಯಾರ್ಥಿ-ಶಿಕ್ಷಕರ ಅನುಪಾತ ಇಳಿಸಿ: ಸರ್ಕಾರಿ ಶಾಲೆಗಳಲ್ಲಿ ಸದ್ಯ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತ 70:1 ಇದೆ. ಗುಣಮಟ್ಟದ ಶಿಕ್ಷಣ ನೀಡಲು ಇದನ್ನು 50:1ಕ್ಕೆ ಇಳಿಸಬೇಕು ಎಂದು ಉಡುಪಿ ಜಿಲ್ಲೆ ಬೈಂದೂರಿನ ನಾಗರಾಜ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅನುಪಾತ ಕಡಿಮೆ ಮಾಡುವುದರಿಂದ ಹೆಚ್ಚಳವಾಗುವ ಶಿಕ್ಷಕರ ಸಂಖ್ಯೆ, ಕೊಠಡಿ ಮತ್ತು ಕಟ್ಟಡಗಳ ಪ್ರಮಾಣ ಹಾಗೂ ಆರ್ಥಿಕ ವೆಚ್ಚವನ್ನು ಅಂದಾಜಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸ್ಯಾಟ್ ಮಾಹಿತಿ ಸರಳೀಕರಣಗೊಳಿಸಿ: ವಿದ್ಯಾರ್ಥಿಗಳ ಸಾಧನಾ ಟ್ರ್ಯಾಕಿಂಗ್ ವ್ಯವಸ್ಥೆ (ಸ್ಯಾಟ್) ಯಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಬಿಸಿಯೂಟ, ವಿವಿಧ ಸೌಲಭ್ಯಗಳ ವಿತರಣೆ ಮಾಹಿತಿಯನ್ನು ಪ್ರತಿದಿನ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕಿದೆ. ಗ್ರಾಮೀಣ ಪ್ರದೇಶ ದಲ್ಲಿ ಇಂಟರ್‌ನೆಟ್ ಹಾಗೂ ಕಂಪ್ಯೂಟರ್ ಸೌಲಭ್ಯವಿಲ್ಲದ ಕಾರಣ ಮಾಹಿತಿ ಅಪ್‌ಲೋಡ್ ಮಾಡುವ ವಿಧಾನವನ್ನು ಸರಳೀ ಕರಣಗೊಳಿಸುವಂತೆ ಅರ್ಚನಾ ಎಂಬುವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಸರಳೀಕರಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಸರ್ಕಾರವು 4ನೇ ಶನಿವಾರವನ್ನು ಕೂಡ ಸರ್ಕಾರಿ ರಜೆ ಎಂದು ಘೋಷಿಸಿದ ಬಳಿಕ ಸರ್ಕಾರಿ ನೌಕರರ ಸಾಂದರ್ಭಿಕ ರಜೆ (ಸಿಎಲ್)ಯನ್ನು 15ರಿಂದ 10ಕ್ಕೆ ಇಳಿಸಿದೆ. ಆದರೆ, ಶಿಕ್ಷಕರು ಈ ಎರಡೂ ದಿನಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಎಂದಿನಂತೆ 15 ರಜೆ ನೀಡಬೇಕು ಎಂದು ಶಿಕ್ಷಕ ವರ್ಗ ಮನವಿ ಮಾಡಿದೆ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಲು ಗಮನ ಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡ ಬೋಧನೆಗೆ ಅವಕಾಶ ನೀಡಿ: ಬಸವಕಲ್ಯಾಣ ತಾಲೂಕಿನ ಮದನ ಪಟೇಲ್, ತಾನು ಮರಾಠಿ ಮಾಧ್ಯಮದ ಶಿಕ್ಷಕನಾಗಿದ್ದು, ಕನ್ನಡ ಬೋಧನೆಗೆ ಅಗತ್ಯವಾದ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದೇನೆ. ಕನ್ನಡ ಶಾಲೆಗಳಲ್ಲಿ ಬೋಧಿಸಲು ಉತ್ಸುಕನಾಗಿದ್ದೇನೆ, ಅವಕಾಶ ನೀಡಿ ಎಂದು ಮನವಿ ಮಾಡಿದರು. ಇಲಾಖೆ ಆಯುಕ್ತರು ಪ್ರತಿಕ್ರಿಯಿಸಿ, ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರೆ ಪರಿಶೀಲಿಸುವುದಾಗಿ ತಿಳಿಸಿದರು.
ಬೇಸಿಗೆ ಸಂಭ್ರಮ: ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವುದಕ್ಕಾಗಿ ಆರಂಭಿಸಿದ್ದ “ಬೇಸಿಗೆ ಸಂಭ್ರಮ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. “ಫೋನ್ ಇನ್ ಕಾರ್ಯಕ್ರಮ’ದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಆಟೋಟ, ಸೃಜನಶೀಲತೆ ಮತ್ತು ಕಲಿಕಾ ಮನೋಭಾವ ಉಂಟು ಮಾಡುವುದಕ್ಕಾಗಿ ಆರಂಭಿಸಿದ್ದ “ಬೇಸಿಗೆ ಸಂಭ್ರಮ’ವನ್ನು ಮರು ಆರಂಭಿಸುವಂತೆ ಸೂಚಿಸಿದರು.