Advertisement

ಸೋಂಕು ಹೆಚ್ಚಾದರೆ ಲಾಕ್‌ಡೌನ್‌ಗೆ ಚಿಂತನೆ

06:14 AM Jun 24, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್‌ 19 ಪ್ರಕರಣಗಳು ಇದೇ ರೀತಿ ಹೆಚ್ಚುತ್ತಾ ಹೋದರೆ ಮತ್ತೂಮ್ಮೆ ಲಾಕ್‌ಡೌನ್‌ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ತಜ್ಞರೊಂದಿಗೆ ಚರ್ಚಿಸಲಾಗುವುದು  ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನಗರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

Advertisement

ನಗರದಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ನಾಲ್ಕು ಪ್ರದೇಶಗಳನ್ನು  ಹದಿನಾಲ್ಕು ದಿನದ ಮಟ್ಟಿಗೆ ಸೀಲ್‌ಡೌನ್‌ ಮಾಡಲಾಗಿದೆ. ಪ್ರಕರಣಗಳು ಏರಿಕೆ ಕ್ರಮದಲ್ಲಿ ಸಾಗಿದರೆ ನಗರವನ್ನು ಕೆಲ ದಿನಗಳ ಮಟ್ಟಿಗೆ ಲಾಕ್‌ಡೌನ್‌ ಮಾಡಲು ಚಿಂತಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೂಡಿ ತಜ್ಞರು ಹಾಗೂ ಟಾಸ್ಕ್‌ಫೋರ್ಸ್‌ ಸದಸ್ಯರ ಜೊತೆ ಸಭೆ ನಡೆಸಿ ಸಮಾಲೋಚಿಸಲಾಗುವುದು ಎಂದರು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲೂ  ಎರಡು ಸೋಂಕು ಪರೀಕ್ಷಾ ಪ್ರಯೋಗಾಲಯ ಸ್ಥಾಪಿ  ಸಲು ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ 76 ಪ್ರಯೋಗಾಲಗಳಿವೆ. ಬೆಂಗಳೂರು ನಗರದಲ್ಲಿ 16 ಆಸ್ಪತ್ರೆಗಳಲ್ಲಿ 1,330 ಹಾಸಿಗೆಯ ಸೌಲಭ್ಯ ಕಲ್ಪಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ  16 ಆಸ್ಪತ್ರೆಗಳನ್ನು ನಿಯೋಜಿತ ಕೋವಿಡ್‌ ಸೆಂಟರ್‌ ಗಳಾಗಿ ನಿಗದಿಪಡಿಸಲಾಗಿದ್ದು, ಅವುಗಳಲ್ಲಿ 527 ಆಕ್ಸಿಜನ್‌ ಸಂಪರ್ಕದ ಹಾಸಿಗೆಗಳು ಸೇರಿದಂತೆ 1300 ಆಸಿಗೆಗಳ ಸೌಲಭ್ಯವಿದ್ದು ಸೋಂಕಿತರ ದಾಖಲಾತಿ ಆರಂಭಿಸಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲೆ ಚಿಕಿತ್ಸೆಗೆ ಆದ್ಯತೆ: ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರ ಚಿಕಿತ್ಸೆಗೆ ದರ ನಿಗದಿಪಡಿಸಲಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗುವುದು. ಇಲ್ಲಿ ಹಾಸಿಗೆಗಳು ಖಾಲಿ ಇಲ್ಲದಿದ್ದರೆ  ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡಲಾಗುವುದು ಎಂದರು.

ಕೇಂದ್ರ ನಿರ್ದೇಶನ ಇಲ್ಲದೆ ಲಾಕ್‌ಡೌನ್‌ ಮಾಡಲ್ಲ: ಕೇಂದ್ರ ಸರ್ಕಾರದ ನಿರ್ದೇಶನ ಇಲ್ಲದೆ ರಾಜ್ಯ ಸರ್ಕಾರ ಮತ್ತೆ ಲಾಕ್‌ ಡೌನ್‌ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ಮಂಗಳವಾರ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ಕ್ಷಣವೂ ಎಲ್ಲವನ್ನು ಗಮನಿಸುತ್ತಿದೆ. ನಮ್ಮದು ತುಘಲಕ್‌ ಸರ್ಕಾರ ಅಲ್ಲ. ನುರಿತ ತಜ್ಞರ ಸಮಿತಿಯ ವರದಿ ಆಧಾರದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತದೆ. ವಾರ್ಡ್‌  ಮಟ್ಟದಲ್ಲಿ ಸೀಲ್‌ ಡೌನ್‌ ಮಾಡಬೇಕಾ..?

Advertisement

ವಿಧಾನಸಭೆ ವಾರು ಸೀಲ್‌ ಡೌನ್‌ ಮಾಡಬೇಕಾ..? ಎಲ್ಲವನ್ನೂ ತಜ್ಞರ ವರದಿ ಪಡೆದು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ವಿಕ್ಟೋರಿಯಾ  ಆಸ್ಪತ್ರೆಯಲ್ಲಿ ಬೆಡ್‌ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ನಿಗದಿತ ದರದೊಂದಿಗೆ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next