ಮೈಸೂರು: ವಿದ್ಯಾರ್ಥಿಗಳು ಕಲಿಯುತ್ತಾ, ಕಲಿಸಿದವರಿಗೆ ನಮಿಸುತ್ತಾ, ಕಲಿತ ಮೇಲೆ ಕಲಿಸಿದವರನ್ನು ಸ್ಮರಿಸುತ್ತಾ ಬದುಕಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಕಲಿಸು ಫೌಂಡೇಷನ್ ವತಿಯಿಂದ ಕುವೆಂಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ “ಹಂಸಲೇಖ ಚುಟುಕು ಕಥೆ ಹಾಗೂ ಮಕ್ಕಳೊಂದಿಗೆ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಕೆ ಎಂಬುದು ಒಂದು ಹಂತದವರೆಗೆ ಮಾತ್ರ ಕಲಿಯುವುದಲ್ಲ. ಅದು ನಿರಂತರವಾಗಿರುತ್ತದೆ. ಬದುಕಿನಲ್ಲಿ ತಾಯಿ ಹಾಗೂ ಗುರು ನಮಗೆ ಕಲಿಸುವ ಗುರುಗಳಾಗಿದ್ದು, ಹೀಗಾಗಿ ಕಲಿಯುತ್ತಾ, ಕಲಿಸಿದವರಿಗೆ ನಮಿಸುತ್ತಾ, ಕಲಿತ ಮೇಲೆ ಕಲಿಸಿದವರ ಸ್ಮರಿಸುತ್ತಾ ಬದುಕಬೇಕಿದೆ ಎಂದರು.
ಅಲ್ಲದೆ ಭೂಮಿ ನಮಗೆ ಸಾಕಷ್ಟು ನೀಡಿದ್ದು, ಭೂಮಿಯನ್ನು ಮೊದಲು ನಮಿಸಬೇಕಿದೆ. ಅಲ್ಲದೆ ಆಶ್ಚರ್ಯ ಎಂಬುದು ಒಂದು ಕಲಿಕೆ ಮಾರ್ಗವಾಗಿದ್ದು, ಆಶ್ಚರ್ಯ ಎಂಬುದು ಜೀವನವನ್ನು ಕುತೂಹಲವಾಗಿ ಇಡುತ್ತದೆ. ಹೀಗಾಗಿ ಎಷ್ಟೇ ಕಲಿತರೂ ನಮಗೆ ಅಚ್ಚರಿಗಳು ಮತ್ತಷ್ಟು ಕಲಿಸುತ್ತಾ ಹೋಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ “ಮನೆಯಲ್ಲಿ ಇಲಿ’ ಎಂಬ ಚುಟುಕು ಕಥೆ ಹೇಳುವ ಮೂಲಕ ಮಕ್ಕಳನ್ನು ರಂಜಿಸಿದರು. ನಂತರ ಮಕ್ಕಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು, ನಿಮ್ಮ ಸಂಗೀತಕ್ಕೆ ಸ್ಪೂರ್ತಿಯಾರು? ಎಂದು ಪುಟ್ಟಬಾಲೆಯೊಬ್ಬಳು ಪ್ರಶ್ನಿಸಿದಳು, ಬಾಲಕಿ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಹಂಸಲೇಖ, ನಿನ್ನ ಮುಗುಳುನಗೆಯೇ ನನಗೆ ಸ್ಫೂರ್ತಿ ಎಂದರು.
ಬಳಿಕ ನಿಮಗೆ ಯಾವ ಊರು ಇಷ್ಟ? ಎಂಬ ಮಕ್ಕಳ ಪ್ರಶ್ನಿಗೆ ಉತ್ತರಿಸಿದ ಅವರು, ಮೈಸೂರು ದಸರಾ ನನ್ನ ಬಾಲ್ಯವನ್ನು ನೆನಪಿಸುತ್ತದೆ, ತಂದೆಯ ಹೆಗಲೇರಿ ದಸರಾ ನೋಡಿದ್ದೆ, ಮೈಸೂರಿನ ಎಲ್ಲಾ ಸ್ಥಳಗಳು ನನಗೆ ಇಷ್ಟ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಹೀಗೆ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ನುಗುತ್ತಲೇ ಉತ್ತರಿಸಿದ ಹಂಸಲೇಖ, ಮಕ್ಕಳೊಂದಿಗೆ ಮಗುವಾಗಿ ಬೆರತರು. ಕಲಿಸು ಫೌಂಡೇಷನ್‌ನ ನಿಖೀಲೇಶ್ ಇತರರು ಇದ್ದರು.