ಲಕ್ನೋ : ‘ಭಾರತದಲ್ಲಿ ತಾವು ಅಸುರಕ್ಷಿತರು ಎಂದು ಹೇಳುವವರ ಮೇಲೆ ಬಾಂಬ್ ಹಾಕಬೇಕು’ ಎಂದು ಉತ್ತರ ಪ್ರದೇಶದ ಮುಜಫರನಗರದ ಬಿಜೆಪಿ ಶಾಸಕ ವಿಕ್ರಮ್ ಸಾಯಿನಿ ಹೇಳಿರುವುದು ತೀವ್ರ ವಿವಾದ, ಟೀಕೆ, ಖಂಡನೆಗೆ ಗುರಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಾಸಕ ಸಾಯಿನಿ ಹೇಳಿದ್ದು ಹೀಗೆ : “ಭಾರತದಲ್ಲಿ ತಾವು ಅಸುರಕ್ಷಿತರೆಂದು ಹೇಳುವವರ ಮೇಲೆ ಬಾಂಬ್ ಹಾಕಬೇಕು – ಇದು ನನ್ನ ವೈಯಕ್ತಿಕ ಅನ್ನಿಸಿಕೆ. ನಿಜಕ್ಕಾದರೆ ಹಾಗೆ ಹೇಳುವವರು ದೇಶ ದ್ರೋಹಿಗಳು. ಅಂಥವರನ್ನು ಶಿಕ್ಷಿಸಲು ಕಾನೂನನ್ನು ತರಬೇಕು, ಏಕೆಂದರೆ ಈ ರೀತಿಯ ಹೇಳಿಕೆಗಳು ದೇಶದ್ರೋಹದ ಕೃತ್ಯವಾಗುತ್ತದೆ. ನನಗೊಂದು ಸಚಿವ ಪದ ಕೊಡಿ. ನಾನು ಇಂಥವರ ಮೇಲೆ ಬಾಂಬ್ ಹಾಕುತ್ತೇನೆ; ಈ ರೀತಿಯ ಹೇಳಿಕೆ ನೀಡುವ ಯಾರನ್ನೂ ಬಿಡದೆ ಬಾಂಬ್ ಹಾಕಿ ನಾಶ ಮಾಡುತ್ತೇನೆ’.
ಬಿಜೆಪಿ ಶಾಸಕ ವಿಕ್ರಮ್ ಸಾಯಿನಿ ಅವರ ಈ ಮಾತುಗಳನ್ನು ಕೇಳಿಸಿಕೊಂಡ ಅವರ ಸುತ್ತಮುತ್ತಲು ಮೈದಾನದಲ್ಲಿದ್ದ ಜನರು ಆಶ್ಚರ್ಯ ಪಟ್ಟರು.
ಈ ರೀತಿಯ ಮಾತುಗಳನ್ನು ನೀವು ಹೇಳುವುದು ಸರಿಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ “ನಾನೇನು ತಪ್ಪು ಹೇಳಿದ್ದೇನೆ; ಬಾಂಬ್ ಹಾಕುವ ಭಾಷೆ ನನ್ನ ಹಳ್ಳಿಯ ಜನರದ್ದು; ಅದೇ ಭಾಷೆಯಲ್ಲಿ ನಾನೀ ಮಾತುಗಳನ್ನು ಹೇಳಿದ್ದೇನೆ’ಎಂದು ಸಾಯಿನಿ ಹೇಳಿದರು.
ಬಾಂಬ್ ಹಾಕುವ ತಮ್ಮ ಈ ಹೇಳಿಕೆಗೆ ಸಾಯಿನಿ ಯಾವುದೇ ವಿಷಾದ ವ್ಯಕ್ತಪಡಿಸಲಿಲ್ಲ; ತಮ್ಮ ಈ ವಿವಾದಾತ್ಮಕ ಮಾತನ್ನು ಹಿಂಪಡೆಯಲೂ ಇಲ್ಲ !