Advertisement

ಪ್ರಾಮಾಣಿಕರೆನ್ನುವವರೇ ಅತೀ ಭ್ರಷ್ಟರಾಗಿರುತ್ತಾರೆ: ಮೋದಿ

12:13 AM Nov 06, 2022 | Team Udayavani |

ಹೊಸದಿಲ್ಲಿ: “ನಾವು “ಖಟ್ಟರ್‌ ಪ್ರಾಮಾಣಿಕರು’ ಎಂದು ಯಾರು ಹೇಳಿಕೊಂಡು ತಿರುಗುತ್ತಾರೋ ಅವರೇ ಅತೀ ಭ್ರಷ್ಟರೂ, ಸಮಾಜವನ್ನು ವಿಭಜಿಸುವವರೂ ಆಗಿರುತ್ತಾರೆ. ಅಂಥ ಸ್ವಾರ್ಥಿಗಳ ಬಗ್ಗೆ ಎಚ್ಚರವಿರಲಿ.’
ಇದು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಹಿಮಾಚಲಪ್ರದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಲಹೆ.

Advertisement

ಶನಿವಾರ ಹಿಮಾಚಲ ಪ್ರದೇಶದ ಸೋಲನ್‌ ಮತ್ತು ಸುಂದರ್‌ನಗರದಲ್ಲಿ ಬೃಹತ್‌ ಪ್ರತಿಭಟನ ರ್‍ಯಾಲಿ ನಡೆಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಕಣದಲ್ಲಿರುವ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪ್ರಾಮಾಣಿಕರು ಎಂದು ಹೇಳಿಕೊಳ್ಳುವವರನ್ನು ನಂಬಬೇಡಿ ಎನ್ನುವ ಮೂಲಕ ಆಪ್‌ಗೆ ಪರೋಕ್ಷ ಟಾಂಗ್‌ ನೀಡಿದರು. ಇನ್ನು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು “ಕಾಂಗ್ರೆಸ್‌ ಎಂದರೇನೇ ಭ್ರಷ್ಟಾಚಾರ “ಖಾತ್ರಿ’ ಎಂದರ್ಥ. ಅದು ಸ್ವಾರ್ಥ ರಾಜಕಾರಣ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗಿದೆ. ಹಿಮಾಚಲವು ಸಣ್ಣ ರಾಜ್ಯ ಎಂಬ ಕಾರಣಕ್ಕೆ ಇಷ್ಟು ವರ್ಷ ಕಾಂಗ್ರೆಸ್‌ ಈ ರಾಜ್ಯವನ್ನು ನಿರ್ಲಕ್ಷಿಸುತ್ತ ಬಂತು. ರಕ್ಷಣ ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗುವ ಮೂಲಕ ಅನೇಕರ ಜೀವದ ಜತೆ ಆಟ ವಾಡಿತು’ ಎಂದೂ ಕಿಡಿಕಾರಿದರು.

ನ.12ರಂದು ಚಲಾವಣೆಯಾಗುವ ಪ್ರತಿಯೊಂದು ಮತವೂ ಹಿಮಾಚಲದ ಮುಂದಿನ 25 ವರ್ಷಗಳ ಅಭಿವೃದ್ಧಿಯ ಪಯಣವನ್ನು ನಿರ್ಧರಿಸಲಿದೆ. ಸ್ಥಿರತೆ ಮತ್ತು ಪ್ರಗತಿಗಾಗಿ ಜನರು ಮತ್ತೆ ಬಿಜೆಪಿಗೆ ಅಧಿಕಾರ ನೀಡಬೇಕು. ಆಗಾಗ್ಗೆ ಔಷಧವನ್ನು ಬದಲಿಸು ವುದರಿಂದ ರೋಗ ಗುಣವಾಗುವುದಿಲ್ಲ ಎಂದ ಅವರು, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವಂತೆ ಮನವಿ ಮಾಡಿದರು.

ಬಿಜೆಪಿ ತೊರೆದ ಮಾಜಿ ಸಚಿವ: ಬಿಜೆಪಿಯ ಹಿರಿಯ ನಾಯಕ, 4 ಬಾರಿಯ ಶಾಸಕ ಹಾಗೂ ಮಾಜಿ ಸಚಿವ ಜಯನಾರಾಯಣ ವ್ಯಾಸ್‌ ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

“ಬಿಜೆಪಿಯಿಂದ ನಾನು ರೋಸಿ ಹೋಗಿದ್ದೇನೆ. ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿಟ್ಟಿದ್ದೇನೆ. ಸಿದ್ಧಪುರ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ. ವ್ಯಾಸ್‌ ಶೀಘ್ರದಲ್ಲೇ ಕಾಂಗ್ರೆಸ್‌ ಅಥವಾ ಆಪ್‌ಗೆ ಸೇರುವ ಸಾಧ್ಯತೆಯಿದೆ.

ಹಕ್ಕು ಚಲಾಯಿಸಲಿದ್ದಾರೆ ಪಾಕಿಸ್ಥಾನಿ ಹಿಂದೂಗಳು
ಈ ಬಾರಿಯ ಗುಜರಾತ್‌ ವಿಧಾನಸಭೆ ಚುನಾವಣೆ ಯಲ್ಲಿ ಪಾಕಿಸ್ಥಾನಿ ಹಿಂದೂ ವಲಸಿಗರಿಗೆ ಹಕ್ಕು ಚಲಾ ಯಿಸುವ ಅವಕಾಶ ಸಿಗಲಿದೆ. ಕಳೆದ 5 ವರ್ಷಗಳಲ್ಲಿ ಭಾರತದ ಪೌರತ್ವ ಪಡೆದಿರುವ ಸಾವಿರಾರು ಮಂದಿ ಮತ ಚಲಾಯಿಸಲು ತುದಿಗಾಲಲ್ಲಿ ನಿಂತಿದ್ದಾರೆ. 2016 ರಿಂದ ಈವರೆಗೆ ಅಹ್ಮದಾಬಾದ್‌ ಜಿಲ್ಲಾಡಳಿತವು 1,032 ಹಿಂದೂಗಳಿಗೆ ಪೌರತ್ವ ನೀಡಿದೆ.

300 ಯುನಿಟ್‌ ಉಚಿತ ವಿದ್ಯುತ್‌,
680 ಕೋಟಿ ರೂ. ಸ್ಟಾರ್ಟ್‌ಅಪ್‌ ಫಂಡ್ !
ಹಿಮಾಚಲ ಪ್ರದೇಶ ಚುನಾವಣ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಶನಿವಾರ ಬಿಡುಗಡೆ ಮಾಡಿದೆ.

ಹಳೆಯ ಪಿಂಚಣಿ ಯೋಜನೆಯ ಅನುಷ್ಠಾನ, 300 ಯುನಿಟ್‌ ಉಚಿತ ವಿದ್ಯುತ್‌, ಪ್ರತೀ ಕ್ಷೇತ್ರಕ್ಕೂ 10 ಕೋಟಿ ರೂ.ಗಳಂತೆ 680 ಕೋಟಿ ರೂ.ಗಳ ಸ್ಟಾರ್ಟ್‌ಅಪ್‌ ನಿಧಿ, ಒಂದು ಲಕ್ಷ ಉದ್ಯೋಗ ಮತ್ತು 18-60ರ ವಯೋಮಾನದ ಮಹಿಳೆಯರಿಗೆ ಮಾಸಿಕ 1,500 ರೂ. ಆರ್ಥಿಕ ನೆರವು ಸೇರಿದಂತೆ ಹಲವು ಆಶ್ವಾಸನೆಗಳನ್ನು ಕಾಂಗ್ರೆಸ್‌ ನೀಡಿದೆ.

ಇದೇ ಕೇವಲ ಪ್ರಣಾಳಿಕೆಯಲ್ಲ, ಹಿಮಾಚಲದ ಅಭಿವೃದ್ಧಿ ಮತ್ತು ಜನರ ಕ್ಷೇಮಾಭಿವೃದ್ಧಿಗೆ ಸಿದ್ಧಪಡಿಸಿರುವ ದಾಖಲೆ ಎಂದೂ ಹೇಳಿದೆ. ಈ ನಡುವೆ ಕಾಂಗ್ರೆಸ್‌ ಶನಿವಾರ ಗುಜರಾತ್‌ ಚುನಾವಣೆಯ 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹಾಲಿ ಸಿಎಂ ಭೂಪೇಂದ್ರ ಪಟೇಲ್‌ ಅವರ ಕ್ಷೇತ್ರ ಘಟೊಯಾದಿಂದ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಅಮೀ ರನ್ನು ಕಣಕ್ಕಿಳಿಸಲಾಗಿದೆ.

ಕಾಂಗ್ರೆಸ್‌ ಅನ್ನು ಈಗ ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ 5 ಸೀಟೂ ಸಿಗುವುದಿಲ್ಲ. ಇದನ್ನು ನಾನು ಬೇಕಿದ್ದರೆ ಬರೆದು ಕೊಡುತ್ತೇನೆ. ಶೇ.30ರಷ್ಟು ಮತ ಗಳು ನಮಗೆ ಸಿಗಲಿವೆ. ನಾವು 2ನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇವೆ.
-ಅರವಿಂದ ಕೇಜ್ರಿವಾಲ್‌,
ಆಪ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next