ಬಸವಕಲ್ಯಾಣ: ಉನ್ನತ ಶಿಕ್ಷಣ ಪಡೆದು ಸುಶೀಕ್ಷಿತರಾದವರು ಸಮಾಜದ ಋಣ ತೀರಿಸುವುದನ್ನು ಮರೆಯಬಾರದು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ನಗರದ ಬಂದವರ ಓಣಿ ಬಳಿಯ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕಂಪ್ಯೂಟರ್ ಕೋಣೆ ಹಾಗೂ ಗ್ರಂಥಾಲಯ ಕೋಣೆ ಉದ್ಘಾಟಿಸಿ, ವಿದ್ಯಾರ್ಥಿಗಳ ಜತೆ ಸಂಚರಿಸಿದ ಅವರು, ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಪಡೆದು, ಕಷ್ಟ ಪಟ್ಟು ಕಲಿಸಿದ ತಂದೆ-ತಾಯಿ, ಅಕ್ಷರ ಕಲಿಸಿದ ಶಾಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ಜೀವನದಲ್ಲಿ ಸಕಾರಾತ್ಮಕ ಚಿಂತನೆ ಯಶಸ್ಸಿಗೆ ದಾರಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಬದುಕು ರೂಪಿಸಿಕೊಳ್ಳುವ ಚಿಂತನೆ ಅವಶ್ಯ. ಶಿಕ್ಷಣ ಕಲಿತು ಉದ್ಯೋಗ ಪಡೆದರೆ ಸಾಲದು, ದೇಶದ ಬಗ್ಗೆ ಅಭಿಮಾನ, ಸಮಾಜದ ಬಗ್ಗೆ ಕಳಕಳಿ ಬೆಳೆಸಿಕೊಳ್ಳಬೇಕು. ಸಕಾರದಿಂದ ಸಿಗುವ ಸಹಾಯ, ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ವಿದ್ಯಾಭ್ಯಾಸಕ್ಕೆ
ಯಾವುದೇ ಸಮಸ್ಯೆ ಇದ್ದರು ತಮ್ಮ ಗಮನಕ್ಕೆ ತಂದರೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವಸತಿ ನಿಲಯದಲ್ಲಿ ಕಂಪ್ಯೂಟರ್ ಶಿಕ್ಷಕರ ಕೊರತೆಯಿದೆ. ವಸತಿ ನಿಲಯದ ಸಮೀಪ ಬಸ್ ನಿಲ್ಲಿಸುತ್ತಿಲ್ಲ. ಹೀಗಾಗಿ ವಸತಿ ನಿಲಯದಿಂದ ಶಾಲಾ ಕಾಲೇಜಿಗೆ ಹೋಗಲು ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದಾಗ, ಶಾಸಕರು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿ ತರಿಗೆ ಸೂಚಿಸಿದರು. ಬಿಸಿಎಂ ಅಧಿಕಾರಿ ಅಂಬರಾಯ ಸಂಗೋಳಕರ್, ಜಿಪಂ ಸದಸ್ಯ ಆನಂದ ಪಾಟೀಲ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಗಿರೀಶ ರಂಜೊಳಕರ್, ಸಂಜು ಗಾಯಕವಾಡ, ಕಾಳಿದಾಸ ಜಾಧವ, ಸೋಮಣ್ಣ, ಬಸ್ಸು ಖೂಬಾ, ಅನೀಲಕುಮಾರ ಸ್ವಾಮಿ ಉಪಸ್ಥಿತರಿದ್ದರು. ಮಲ್ಲಿನಾಥ ನಿರೂಪಿಸಿದರು. ವಾರ್ಡನ್ ರವಿಂದ್ರ ಮೇತ್ರೆ ವಂದಿಸಿದರು.