ಮೈಸೂರು: ಪಠ್ಯ ವಾಪಾಸ್ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವವರು ವಿಚಾರಹೀನರು. ತರ್ಕದಲ್ಲಿ ಇವರು ಗೆಲ್ಲಲು ಆಗಲಿಲ್ಲ. ಹೀಗಾಗಿ ಹೊಸ ತರಕಾರರು ಶುರು ಮಾಡಿದ್ದಾರೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ ಅವರು ಕುವೆಂಪು ಅವರ 8 ಪಠ್ಯ ಇದ್ದನ್ನು 7 ಮಾಡಿದರು. ನಾವು ಈಗ ಕುವೆಂಪು ಅವರ 10 ಪಠ್ಯ ಸೇರಿಸಿದ್ದೇವೆ ಎಂದರು.
ಸಿದ್ದರಾಮಯ್ಯ ಆಡಳಿತ ವ್ಯಂಗ್ಯ ಮಾಡಲು 2017 ರಲ್ಲಿ ಯಾರೋ ಬರೆದ ಗೀತೆಯನ್ನು ಚಕ್ರತೀರ್ಥ ವಾಟ್ಸಾಪ್ ಫಾರ್ವಡ್ ಮಾಡಿದ್ದಾರೆ. ಆ ಕೇಸ್ ಬಿ ರೀಪೋರ್ಟ್ ಆಗಿದೆ. ಕಾಂಗ್ರೆಸ್ ಈಗ ನೆಲ ಕಚ್ಚಿದೆ. ಕಾಂಗ್ರೆಸ್ ನಿಂದ ಉಪಕೃತರಾದ ಸಾಹಿತಿಗಳು ಈಗ ತಗಾದೆ ತೆಗೆದಿದ್ದಾರೆ. ಕಮಲ ಹಂಪನಾ, ಬರಗೂರು ರಾಮಚಂದ್ರಪ್ಪ ಇವರಲ್ಲಿ ಯಾರು ಕಳೆದ 10 ವರ್ಷಗಳಲ್ಲಿ ನೆನಪಿಡುವ ಕೃತಿ ರಚನೆ ಮಾಡಿದ್ದಾರೆ ಹೇಳಿ? ಎಲ್ಲಾ ವಾದದಲ್ಲೂ ಸೋತ ಮೇಲೆ ಈಗ ವಾಟ್ಸಾಪ್ ಫಾರ್ವಡ್ ಮೇಸೇಜ್ ಹಿಡಿದು ಪ್ರಚಾರ ಪಡೆಯಲು ಮುಂದಾಗಿದ್ದಾರೆ ಎಂದರು.
ಸಾಹಿತಿಗಳ ಪಠ್ಯ ವಾಪಾಸ್ ಚಳವಳಿ ಟೂಲ್ ಕೀಟ್ ನಾ ಒಂದು ಭಾಗ. ದೇವನೂರು ಮಹದೇವ್ ಸೇರಿದಂತೆ ಹಲವರ ಪಠ್ಯವನ್ನು 10 ರಿಂದ 15 ವರ್ಷದಿಂದ ಮಕ್ಕಳು ಓದಿದ್ದಾರೆ. ಕೆಲವರ ಪಠ್ಯ ಕೈ ಬಿಟ್ಟಿದ್ದೇವೆ. ತಮ್ಮ ಪಠ್ಯ ಕೈ ಬಿಟ್ಟಿದ್ದರೂ ಕೂಡ ಕೆಲ ಸಾಹಿತಿಗಳು ಪಠ್ಯ ವಾಪಾಸ್ ಪಡೆದಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಇದರಲ್ಲಿ ಅರ್ಥವಿದೆಯಾ? ಎಂದರು.
ಸಾಹಿತಿ ಹಂಪಾ ನಾಗರಾಜ ಅಕಾಡೆಮಿಗೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಪತ್ನಿ ಇನ್ನೂ ಹುದ್ದೆಯಲ್ಲೇ ಇದ್ದಾರೆ. ಮನೆಯಲ್ಲೇ ಸಮ್ಮತಿ ಇಲ್ಲ ಎಂದು ಇದರ ಅರ್ಥ ಎಂದರು.
ಇದನ್ನೂ ಓದಿ:ಖಾದರ್-ವಿದ್ಯಾರ್ಥಿನಿ ಫೋನ್ ಸಂಭಾಷಣೆಯಲ್ಲೇನಿತ್ತು? ರಾಂಗ್ ನಂಬರ್ ಅಂದಿದ್ದೇಕೆ?
ಮೊದಲು ಭಗತ್ ಸಿಂಗ್ ನಾರಾಯಣ್ ಗುರು ವಿಚಾರವಾಗಿ ಚರ್ಚೆ ಆರಂಭವಾಗಿತ್ತು. ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರೂ ಯಾರೂ ಬರಲಿಲ್ಲ. ಇವರು ವಿಚಾರ ಹೀನರಾಗಿಲ್ಲದಿದ್ದರೆ ಚರ್ಚೆಗೆ ಬರುತ್ತಿದ್ದರು ಎಂದು ಹೇಳಿದರು.
ಕುವೆಂಪು ಅವರಿಗೆ ಅತೀ ಹೆಚ್ಚು ಗೌರವ ಕೊಟ್ಟಿರುವುದು ಬಿಜೆಪಿ. ಸದಾನಂದ ಗೌಡರು ಸಿಎಂ ಆಗಿದ್ದಾಗ ನಾಡಗೀತೆ ಆಯಿತು. ಮೋದಿ ಅಧಿಕಾರಕ್ಕೆ ಬಂದಾಗ ಪ್ರಶಸ್ತಿ ವಾಪಸ್ಸು ನೀಡಿದರು. ಇದೀಗ ಪಠ್ಯದ ಲೇಖನ ವಾಪಸ್ಸಿಗೆ ಪತ್ರ ಬರೆಯುತ್ತಿದ್ದಾರೆ. ಇದು ಕಾಂಗ್ರೇಸ್ ಅವರಿಂದ ಉಪಕೃತರಾದವರ ಕೆಲವರ ನಾಟಕ ಎಂದರು.