ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 2011ರ ಅಕ್ಟೋಬರ್ ಬಳಿಕ ಜನಿಸಿದ ಮಕ್ಕಳನ್ನು ಎಂಡೋಸಲ್ಫಾನ್ ಸಿಂಪಡಣೆಯಿಂದ ಬಾಧಿತರಾಗಿರುವವರ ಪಟ್ಟಿಯಿಂದ ಹೊರಗೆ ಇರುವ ಕೇರಳ ಸರಕಾರದ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ವಿಜ್ಞಾನಿಗಳು, ವೈದ್ಯ ಸಮುದಾಯ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಎಂಡೋಸಲ್ಫಾನ್‌ನ ಅಂಶಗಳು ಪೂರ್ಣವಾಗಿ ನಿವಾರಣೆ ಆಗಿಲ್ಲ. ಇದರ ಹೊರತಾಗಿಯೂ ಕೂಡ ಕೇರಳ ಸರಕಾರ ಕೈಗೊಂಡ ತೀರ್ಮಾನ ಸರಿಯಲ್ಲ ಎಂದು ಹೇಳಿದೆ.
2011ರ ಬಳಿಕ ಜನಿಸಿದ ಹಲವಾರು ಮಕ್ಕಳಲ್ಲಿ ಔಷಧದ ದುಷ್ಪರಿಣಾಮ ಕಂಡುಬಂದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿಯ ಮುಖಂಡ ಮುನೀಷಾ ಅಂಬಲತ್ತರ, “ನ. 18ರಂದು ಕೇರಳ ಸರಕಾರ ಹೊರಡಿಸಿದ ಆದೇಶ ಖಂಡನೀಯ. 1980ರ ಜನವರಿಯಿಂದ 2011ರ ಅಕ್ಟೋಬರ್ ವರೆಗೆ ಜನಿಸಿದವರು ಮಾತ್ರ ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅರ್ಹತೆ ಪಡೆದಿದ್ದಾರೆ ಎಂದು ಹೊರಡಿಸಿರುವ ಆದೇಶ ಪ್ರಶ್ನಾರ್ಹ. ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ವಿಶೇಷ ವೈದ್ಯಕೀಯ ತಪಾಸಣಾ ಶಿಬಿರ ನಡೆಸಿತ್ತು ಎಂದು ಹೇಳಿದ್ದಾರೆ.
ಒಂದು ವೇಳೆ 2011ರ ಅಕ್ಟೋಬರ್ ಬಳಿಕ ಜನಿಸಿದವರಿಗೆ ಔಷಧದಿಂದ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ ಎಂದಾದರೆ 2017ರಲ್ಲಿ ಜಿಲ್ಲೆಯಲ್ಲಿ ಮತ್ತೆ ವೈದ್ಯಕೀಯ ತಪಾಸಣ ಶಿಬಿರ ನಡೆಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆದೇಶ ಹಿಂಪಡೆಯದಿದ್ದರೆ ಪ್ರತಿ ಭಟನೆ ನಡೆಸುವುದಾಗಿ ಮುನೀಷಾ ಎಚ್ಚರಿಸಿದ್ದಾರೆ. 1978 ರಿಂದ ಅವ್ಯಾಹತ ವಾಗಿ ಕಾಸರಗೋಡು ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಗೇರು ಗಿಡ ಮತ್ತು ಮರಗಳಿಗೆ ಎಂಡೋಸಲ್ಫಾನ್ ಸಿಂಪಡಿಸಿದ್ದರಿಂದ 500 ಮಂದಿ ಅಸುನೀಗಿದ್ದರು. ಮಕ್ಕಳು ಅಂಗಾಂಗ ವೈಕಲ್ಯಕ್ಕೆ ಒಳಗಾಗಿದ್ದರು. ಈಗಾಗಲೇ 6,600 ಮಂದಿ ಸರಕಾರದ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ.