Advertisement

Cricket Stories; ಆ 2 ರನ್…ದ.ಆಫ್ರಿಕಾ ಮರೆಯಲಾಗದ ವಿಶ್ವಕಪ್ ಹೀರೋ ಲ್ಯಾನ್ಸ್ ಕ್ಲೂಸನರ್

10:46 AM Sep 22, 2023 | ಕೀರ್ತನ್ ಶೆಟ್ಟಿ ಬೋಳ |

ತನ್ನ ಹೊಡಿಬಡಿ ಶೈಲಿಯ ಬ್ಯಾಟಿಂಗ್, ಖಡಕ್ ಬೌಲಿಂಗ್ ದಾಳಿ, ಕಷ್ಟದ ಸಮಯದಲ್ಲಿ ತಂಡದ ನಂಬಿಕೆಯ ಬ್ಯಾಟರ್, ಮಿಲಿಟರಿ ಪ್ರೇರಿತ ಜೀವನ ಶೈಲಿ, ಒಂದು ಕಾಲದ ರಾಷ್ಟ್ರೀಯ ಹೀರೋ… ಹೀಗೆ ಎಲ್ಲಾ ಇದ್ದರೂ ಲ್ಯಾನ್ಸ್ ಕ್ಲೂಸನರ್ ಎಂಬ ದಕ್ಷಿಣ ಆಫ್ರಿಕಾ ನಾಡಿನ ಕ್ರಿಕೆಟ್ ಆಟಗಾರ ಈಗಲೂ ನೆನಪಾಗುವುದು ಆ ‘ಎರಡು ರನ್’ ಗಳಿಂದ ಮಾತ್ರ.

Advertisement

171 ಪಂದ್ಯಗಳಲ್ಲಿ 41ರ ಸರಾಸರಿಯಲ್ಲಿ 3576 ರನ್, 90ರ ಸ್ಟ್ರೈಕ್ ರೇಟ್, ಮೇಲಾಗಿ 192 ವಿಕೆಟ್ ಗಳು. 90ರ ದಶಕದ ನಿಸ್ಸಂದೇಹವಾಗಿ ಅತ್ಯುತ್ತಮ ಆಲ್ ರೌಂಡರ್ ಆಗಿದ್ದ ಲ್ಯಾನ್ಸ್ ಕ್ಲೂಸನರ್ ವೃತ್ತಿ ಜೀವನ ಕೊನೆಯಾಗಿದ್ದು ಮಾತ್ರ ಆ ಎರಡು ರನ್ ಗಳ ಹೊರೆಯಿಂದ. ಕ್ರಿಕೆಟ್ ವಿಶ್ವದ ದುರಂತ ನಾಯಕರಲ್ಲಿ ಈ ಹರಿಣಗಳ ನಾಡಿನ ಗಟ್ಟಿಗ ಕ್ಲೂಸನರ್ ಕೂಡಾ ಒಬ್ಬರು.

ಟೆಸ್ಟ್ ಮತ್ತು ಏಕದಿನಗಳಲ್ಲಿ ರನ್‌ ಗಳ ಪ್ರಮಾಣವು ಸಾಮಾನ್ಯವಾಗಿ ಕ್ಲೂಸನರ್ ರನ್ನು ಅತ್ಯುತ್ತಮ ಆಟಗಾರರನ್ನಾಗಿ ಮಾಡಬೇಕು. ಆದರೆ, ಅವರನ್ನು ಆ ಎರಡು ರನ್ ಗಳ ಕಾರಣದಿಂದಲೇ ಶಾಶ್ವತವಾಗಿ ಭಿನ್ನವಾಗಿ ನೋಡಲಾಗುತ್ತದೆ. ಆಸ್ಟ್ರೇಲಿಯ ವಿರುದ್ಧದ ಸೆಮಿ ಫೈನಲ್‌ ನಲ್ಲಿ ಅವರು ಗಳಿಸಲು ವಿಫಲವಾದ ಒಂದು ರನ್ ಮತ್ತು 2003 ರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಎಂಟು ಎಸೆತಗಳಲ್ಲಿ ಗಳಿಸಿದ ಒಂದು ರನ್.

ಬಹುಶಃ ಲ್ಯಾನ್ಸ್ ಕ್ಲೂಸನರ್ ಎಂದಾದರೂ ತನ್ನ ಆತ್ಮಚರಿತ್ರೆ ಬರೆದರೆ ಅದರ ಹೆಸರು ಹೀಗಿರಬಹುದು: Those Two Runs!

ಕ್ಲೂಸನರ್ ವೃತ್ತಿ ಜೀವನದಲ್ಲಿ ಗಳಿಸಿದ 3575 ರನ್ ಗಿಂತಲೂ ಆ ಎರಡು ರನ್ ಗಳು ಅವರ ಜೀವನವನ್ನು ಮತ್ತೆ ಮತ್ತೆ ಇಣುಕಿ ನೋಡುವಂತೆ ಮಾಡುತ್ತದೆ. 90ರ ದಶಕದಲ್ಲಿ ಅದ್ಭುತ ಬ್ಯಾಟರ್ ಮತ್ತು ಬೌಲರ್ ಗಳಲ್ಲಿ ಒಬ್ಬರಾಗಿದ್ದ ಕ್ಲೂಸನರ್ ಎದುರಾಳಿಯಿಂದ ಜಯವನ್ನು ಕಸಿಯುವುದರಲ್ಲಿ ನಿಷ್ಣಾತ. ಡೆತ್ ಓವರ್ ಗಳಲ್ಲಿ ಬ್ಯಾಟಿಂಗ್ ಅಬ್ಬರಿಂದ ಎಷ್ಟೋ ಸೋಲುವ ಪಂದ್ಯಗಳಲ್ಲಿ ದ.ಆಫ್ರಿಕಾ ಜಯ ಪಡುವಂತೆ ಮಾಡಿದವರು ಅವರು.

Advertisement

1971ರಲ್ಲಿ ಡರ್ಬನ್ ನಲ್ಲಿ ಜನಿಸಿದ ಲ್ಯಾನ್ಸ್ ಕ್ಲೂಸನರ್, ಕಬ್ಬಿನ ತೋಟಗಳಲ್ಲಿ ಜುಲು ಮಕ್ಕಳೊಂದಿಗೆ ಕಾಲ ಕಳೆದಿದ್ದರು. ಮಿಲಿಟರಿ ಹಿನ್ನೆಲೆಯಿಂದ ಬಂದ ಕ್ಲೂಸನರ್ ಶಿಸ್ತು ಮತ್ತು ಮೌಲ್ಯಗಳನ್ನು ತಿಳಿದವರು. ಜುಲು ಬುಡಕಟ್ಟಿನೊಂದಿಗೆ ತನ್ನ ಸಮಯವನ್ನು ಕಳೆದ ಕಾರಣದಿಂದ ಅವರು ತಂಡದಲ್ಲಿ ಅವರು ‘ಜುಲು’ ಎಂದೇ ಹೆಸರು ಪಡೆದಿದ್ದರು. ಸುಮಾರು ಮೂರು ಪೌಂಡ್‌ಗಳಷ್ಟು ತೂಗುವ ದೊಡ್ಡ ಬ್ಯಾಟ್‌ ನೊಂದಿಗೆ ಆಡುತ್ತಿದ್ದ ಕ್ಲೂಸನರ್ ಬಲಿಷ್ಠ ದಾಂಡಿಗ.

ನಟಾಲ್‌ ತಂಡದ ಮ್ಯಾನೇಜರ್ ಡೆನಿಸ್ ಕಾರ್ಲ್‌ಸ್ಟೈನ್ ಅವರು ಕ್ಲೂಸನರ್ ಬೌಲಿಂಗ್‌ ನೋಡಿ ನೆಟ್‌ ಸೆಶನ್ ಗಳಿಗೆ ಹಾಜರಾಗುವಂತೆ ಶಿಫಾರಸು ಮಾಡಿದರು. ಅಲ್ಲಿ ನಟಾಲ್‌ ಮಾಲ್ಕಮ್ ಮಾರ್ಷಲ್‌ ಅವರು ಕ್ಲೂಸನರ್ ಗೆ ತರಬೇತಿ ನೀಡಿದರು. 1993/94 ರಲ್ಲಿ ಅವರು ಮೊದಲ ಬಾರಿ ಆಡುವ ಬಳಗಕ್ಕೆ ಸೇರಿದರು. “ಬೌಲರ್ ಆಗಿ ಆಕ್ರಮಣ ಮಾಡುವುದನ್ನು ಎಂದಿಗೂ ನಿಲ್ಲಿಸಬೇಡ” ಎಂಬ ಮಾಲ್ಕಮ್ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ ಕ್ಲೂಸನರ್.

ಮುಂದಿನ ವರ್ಷವೇ ಕ್ಲೂಸನರ್ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಗೆ ಪದಾರ್ಪಣೆ ಮಾಡಿದರು. ಭಾರತದ ವಿರುದ್ಧ ಕೋಲ್ಕತ್ತಾ ಪಂದ್ಯದಲ್ಲಿ ಕ್ಲೂಸನರ್ ಎಂಟು ವಿಕೆಟ್ ಕಿತ್ತರು. ನಾಲ್ಕನೇ ಪಂದ್ಯದಲ್ಲೇ ಕೇಪ್ ಟೌನ್ ನಲ್ಲಿ 100 ಎಸೆತದಲ್ಲಿ 102 ರನ್ ಬಾರಿಸಿ ಬ್ಯಾಟಿಂಗ್ ಖದರ್ ತೋರಿಸಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅವರು ಪರಿಪೂರ್ಣ ಆಲ್ ರೌಂಡರ್ ಆಗಿದ್ದರು.

1999 ವಿಶ್ವಕಪ್ ಮತ್ತು ಕ್ಲೂಸನರ್

1999ರ ಏಕದಿನ ವಿಶ್ವಕಪ್ ಎಂದಿಗೂ ನೆನಪಿನಲ್ಲಿ ಉಳಿಯುವುದು ಕ್ಲೂಸನರ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಕಾರಣದಿಂದ. ಟ್ರೆಂಟ್ ಬ್ರಿಡ್ಜ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾಗೆ ಎದುರಾಗಿದ್ದು ಶೋಯೆಬ್ ಅಖ್ತರ್ ಎಂಬ 90 ಮೈಲಿ ವೇಗದಲ್ಲಿ ಬೆಂಕಿ ಚೆಂಡು ಎಸೆಯುತ್ತಿದ್ದ ಬೌಲರ್. ಆದರೆ ಅವರಿಗೆ ಎದುರಾಗಿ ನಿಂತಿದ್ದು ಕ್ಲೂಸನರ್! ಅಖ್ತರ್ ಅವರ 90 ಮೈಲಿ ವೇಗದ ಶಾರ್ಟ್ ಬಾಲ್ ಅನ್ನು ಟ್ರೆಂಟ್ ಬ್ರಿಡ್ಜ್‌ ನ ಸ್ಟ್ಯಾಂಡ್‌ ಗಳ ಮೇಲೆ ಸಿಕ್ಸರ್‌ ಗೆ ಬಾರಿಸಿದ್ದು ಆ ಇನ್ನಿಂಗ್ಸ್ ನ ವಿಶೇಷತೆ.

ಮುಂದೆ ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು. ಆದರೆ ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. ಈ ಪಂದ್ಯ ಹರ್ಷಲ್ ಗಿಬ್ಸ್ ಅವರು ‘ಡ್ರಾಪ್ ಕ್ಯಾಚ್’ ವಿಚಾರಕ್ಕೆ ಸದಾ ನೆನಪಿನಲ್ಲಿ ಉಳಿಯುತ್ತದೆ. (ಆಸೀಸ್ ನಾಯಕ ಸ್ಟೀವ್ ವಾ ಅವರ ಸುಲಭ ಕ್ಯಾಚನ್ನು ಗಿಬ್ಸ್ ಚೆಲ್ಲಿದ್ದರ. ನಂತರ ವಾ ಶತಕ ಬಾರಿಸಿದ್ದರು) ಆಸೀಸ್ ಮತ್ತೆ ಮುಖಾಮುಖಿಯಾಗಿದ್ದು ಎಡ್ಜ್ ಬಾಸ್ಟನ್ ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ಅಲನ್ ಡೊನಾಲ್ಡ್ ಮತ್ತು ಶಾನ್ ಪೊಲಾಕ್ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 213 ರನ್ ಗೆ ಆಲೌಟಾಗಿತ್ತು. ಅದೇ ರೀತಿ ಬ್ಯಾಟಿಂಗ್ ಆರಂಭಿಸಿದ ಹರಿಣಗಳ ತಂಡಕ್ಕೆ ಕಾಡಿದ್ದು ಶೇನ್ ವಾರ್ನ್. ಆದರೆ ಮತ್ತೆ ಆಪದ್ಭಾಂದವರಂತೆ ನಿಂತಿದ್ದು ಅದೇ ಲ್ಯಾನ್ಸ್ ಕ್ಲೂಸನರ್. ಏಕಾಂಗಿ ಹೋರಾಟ ನಡೆಸಿದ ಕ್ಲೂಸನರ್ 49ನೇ ಓವರ್ ನಲ್ಲಿ ಮೆಕ್ ಗ್ರಾಥ್ ಎಸೆತಕ್ಕೆ ಸಿಕ್ಸರ್ ಬಾರಿಸಿ ಆಟವನ್ನು ಕೊನೆಯ ಓವರ್ ಥ್ರಿಲ್ಲರ್ ಗೆ ತಂದರು.

ಒಂದು ಓವರ್, ಬೇಕಾಗಿದ್ದು ಒಂಬತ್ತು ರನ್, ಇದ್ದಿದ್ದು ಕೊನೆಯ ಒಂದು ವಿಕೆಟ್. ಆದರೆ ಕ್ಲೂಸನರ್ ಸ್ಟ್ರೈಕ್ ನಲ್ಲಿದ್ದು. ಆಫ್ರಿಕಾ ಅಭಿಮಾನಿಗಳ ಸಮಾಧಾನಕ್ಕೆ ಇದೊಂದು ಸಾಕಾಗಿತ್ತು. ಆದರೆ ಅಲ್ಲಿತ್ತು ಟ್ವಿಸ್ಟ್!

ತಂಡವನ್ನು ಜಯದ ದಡ ಮುಟ್ಟಿಸಲು ಕ್ಲೂಸನರ್ ಬದ್ಧರಾದಂತೆ ಆಡುತ್ತಿದ್ದರು. ಡಮೇನ್ ಫ್ಲೆಮಿಂಗ್ ಎಸೆದ ಮೊದಲ ಎರಡು ಎಸೆತಗಳನ್ನು ಕ್ಲೂಸನರ್ ಬೌಂಡರಿಗಟ್ಟಿದರು. ಆ ಎರಡು ಹೊಡೆತಗಳು ಎಷ್ಟು ಶಕ್ತಿಯುತವಾಗಿತ್ತೆಂದರೆ ಆಸೀಸ್ ನ ಜಂಘಾಬಲವೇ ಉಡುಗಿ ಹೋಗಿತ್ತು. ಸ್ಕೋರ್ ಲೆವೆಲ್ ಆಗಿತ್ತು. ಆಫ್ರಿಕಾ ಮುಂದಿನ ನಾಲ್ಕು ಎಸೆತದಲ್ಲಿ ಒಂದು ರನ್ ಗಳಿಸಬೇಕಿತ್ತು. ಮೊದಲ ಫೈನಲ್ ಪ್ರವೇಶದ ಕನಸಿನಲ್ಲಿ ಆಫ್ರಿಕಾದ ಜನರು ತೇಲಾಡುತ್ತಿದ್ದರು. ಆಗ ನಡೆದಿದ್ದು ಯಾರೂ ಊಹಿಸಿದ ದುರಂತ.

ಮೂರನೇ ಎಸೆತದಲ್ಲಿ ಕ್ಲೂಸನರ್ ಮಿಡ್ ಆನ್ ಕಡೆ ಹೊಡೆದರು. ಬ್ಯಾಟರ್ ಗಳಿಬ್ಬರು ಓಡಲು ಯತ್ನಿಸಿದರು. ಆದರೆ ಚೆಂಡು ತಡೆದ ಡ್ಯಾರೆನ್ ಲೆಹ್ಮನ್ ಬೌಲರ್ ಕಡೆಯ ವಿಕೆಟ್ ಗೆ ಎಸೆದರು. ಬ್ಯಾಟರ್ ಗಳು ಓಡದೆ ಕ್ರೀಸ್ ಕಡೆ ಮರಳಿದರು. ನಾನ್ ಸ್ಟ್ರೈಕ್ ನ ಬ್ಯಾಟರ್ ಅಲನ್ ಡೊನಾಲ್ಡ್ ಕ್ರೀಸ್ ಮುಟ್ಟಿರಲಿಲ್ಲ, ಪುಣ್ಯಕ್ಕೆ ಬಾಲ್ ವಿಕೆಟ್ ಗೆ ತಾಗದೆ ಬಳಿಯಲ್ಲೇ ಹೋಯಿತು. ಆಸೀಸ್ ಆಟಗಾರರು ತಲೆಗೆ ಕೈ ಇಟ್ಟರೆ, ಆಫ್ರಿಕಾ ಡ್ರೆಸ್ಸಿಂಗ್ ರೂಂ ಸಮಾಧಾನದ ನಿಟ್ಟುಸಿರು ಬಿಟ್ಟಿತು.

ಅದು ಬಹುಶಃ ದುರಂತದ ಮೊದಲು ಬರುವ ಸೂಚನೆಯಾಗಿತ್ತು. ಆದರೆ ಅದು ಕ್ಲೂಸನರ್ ಗೆ ತಿಳಿಯಲಿಲ್ಲ. ನಾಲ್ಕನೇ ಎಸೆತವನ್ನು ಕ್ಲೂಸನರ್ ಮಿಡ್ ಆಫ್ ಕಡೆ ಬಾರಿಸಿ ರನ್ ಗೆ ಓಡಿದರು. ಆದರೆ ಡೊನಾಲ್ಡ್ ಗೆ ಹಿಂದಿನ ಎಸೆತದ ಕಹಿ ಅನುಭವ ಜೀವಂತವಾಗಿತ್ತು. ಓಡುವುದನ್ನು ಮರೆದ ಡೊನಾಲ್ಡ್ ಚೆಂಡು ನೋಡುತ್ತಾ ನಿಂತರು. ಕ್ಲೂಸನರ್ ಓಡಿ ಬಂದಾಗಿತ್ತು. ಮಿಡ್ ಆಫ್ ನಲ್ಲಿ ಚೆಂಡು ಹಿಡಿದ ಮಾರ್ಕ್ ವಾ ಅವರು ಬೌಲರ್ ಫ್ಲೆಮಿಂಗ್ ಕಡೆಗೆ ಎಸೆದರು. ಈ ವೇಳೆ ಕ್ಲೂಸನರ್ ಮತ್ತು ಡೊನಾಲ್ಡ್ ಇಬ್ಬರೂ ಬೌಲಿಂಗ್ ಕ್ರೀಸ್ ನಲ್ಲಿ ನಿಂತಿದ್ದಾರೆ. ಫ್ಲೆಮಿಂಗ್ ಅವರು ಚೆಂಡನ್ನು ಕೀಪರ್ ಗಿಲ್ ಕ್ರಿಸ್ಟ್ ಕಡೆ ಎಸೆದು ರನೌಟ್ ಮಾಡಿದರು!

ಪಂದ್ಯ ಟೈ ಆಯಿತು. ಸುಲಭದಲ್ಲಿ ಗೆಲ್ಲುವ ಪಂದ್ಯವು ದುರಾದೃಷ್ಟದಿಂದಲೋ ಅಥವಾ ಅಜಾಗರೂಕತೆಯಿಂದಲೋ ಟೈ ಆಗಿತ್ತು. ಆದರೆ ಆಸ್ಟ್ರೇಲಿಯಾದ ನೆಟ್ ರನ್ ರೇಟ್ ದಕ್ಷಿಣ ಆಫ್ರಿಕಾ ಗಿಂತ ಕೇವಲ 0.01 ಹೆಚ್ಚಿಗೆ ಇದ್ದ ಕಾರಣ ಆಸೀಸ್ ಫೈನಲ್ ತಲುಪಿತು. 1999ರ ವಿಶ್ವಕಪ್ ಹೀರೋ ಕ್ಲೂಸನರ್ ಸೆಮಿ ಫೈನಲ್ ಪಂದ್ಯದಲ್ಲಿ ನಿರಾಶೆಯಿಂದ ತಲೆ ತಗ್ಗಿಸಿದರು.

ಎಂಟು ಎಸೆತ – ಒಂದು ರನ್; 2003ರ ವಿಶ್ವಕಪ್

1999 ರ ನೋವು ಅನೇಕ ದಕ್ಷಿಣ ಆಫ್ರಿಕನ್ನರಿಗೆ ಇನ್ನೂ ಹಸಿರಾಗಿತ್ತು. ಆದರೆ, ಕ್ಲೂಸನರ್ ಇನ್ನೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಗಾಯಗಳ ಕಾರಣದಿಂದ ಮುಂದಿನ ಎರಡು ವರ್ಷಗಳಲ್ಲಿ, ಬ್ಯಾಟ್ ಮತ್ತು ಬಾಲ್‌ನೊಂದಿಗೆ ಕ್ಲೂಸನರ್ ಅವರ ಫಾರ್ಮ್ ಕುಸಿಯಿತು. ಆದರೆ, ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್‌ನಲ್ಲಿ ಅವರು ಇನ್ನೂ ತಂಡದಲ್ಲಿ ಸ್ಥಾನ ಪಡೆದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ, ಅವರು ಆಕ್ರಮಣಕಾರಿ ಅರ್ಧಶತಕವನ್ನು ಹೊಡೆದರು, ಆದರೆ ತಂಡವು ಸೋಲನುಭವಿಸಿತು.

ನ್ಯೂಜಿಲ್ಯಾಂಡ್ ವಿರುದ್ಧದ ಸೋಲಿನ ನಂತರ ದಕ್ಷಿಣ ಆಫ್ರಿಕಾ ಹೊರ ಬೀಳುವ ಆತಂಕದಲ್ಲಿತ್ತು. ಶ್ರೀಲಂಕಾ ವಿರುದ್ಧದ ಡರ್ಬನ್‌ ಪಂದ್ಯದಲ್ಲಿ ಅವರು ಗೆಲ್ಲಲೇಬೇಕಿತ್ತು. ಲಂಕಾ ಪರ ಮಾರ್ವನ್ ಅಟಪಟ್ಟು ಶತಕ ಮತ್ತು ಅರವಿಂದ ಡಿ ಸಿಲ್ವಾ ಅರ್ಧಶತಕದ ನೆರವಿನಿಂದ ಶ್ರೀಲಂಕಾ 268 ರನ್ ಗಳಿಸಿತು. ಪ್ರತಿಯಾಗಿ ಹರ್ಷಲ್ ಗಿಬ್ಸ್ ಸುಂದರವಾಗಿ ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾವನ್ನು ಹಾದಿಗೆ ತಂದರು. ಆದರೆ ನಂತರ ಲಂಕಾ ಕೆಲವು ವಿಕೆಟ್ ಪಡೆದು ಪಂದ್ಯಕ್ಕೆ ಮರುಜೀವ ನೀಡಿದರು. ಆದರೆ ಮಳೆ ಬರುವ ಸಾಧ್ಯತೆ ಇದ್ದುದರಿಂದ ದಕ್ಷಿಣ ಆಫ್ರಿಕಾ ಡಕ್ ವರ್ತ್ ಲೂಯಿಸ್ ಸ್ಕೋರ್‌ಗಿಂತ ಮುಂದಿರಬೇಕಿತ್ತು. ವೇಗದ ಬ್ಯಾಟಿಂಗ್ ನ ಅಗತ್ಯವಿತ್ತು. ಈ ವೇಳೆ ಬ್ಯಾಟಿಂಗ್‌ ಗೆ ಬಂದ ಕ್ಲೂಸನರ್ ರನ್ ಗಳಿಸಲು ಪರದಾಡಿದರು. ಅವರು ಎಂಟು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿದರು. ಇದು ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು. 46ನೇ ಓವರ್ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 229 ರನ್ ಗಳಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಡ್ರೆಸ್ಸಿಂಗ್ ರೂಂನಿಂದ ಮತ್ತೋರ್ವ ಬ್ಯಾಟರ್ ಮಾರ್ಕ್ ಬೌಚರ್ ನೀಡಿಲಾಗಿತ್ತು. ಬೌಚರ್ ಅವರು ಮುತ್ತಯ್ಯ ಮುರಳೀಧರನ್ ರ 46ನೇ ಓವರ್ ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಅಲ್ಲಿಗೆ ತಂಡದ ಮೊತ್ತ 229 ಆಗಿತ್ತು. ಹೀಗಾಗಿ ನಂತರ ಕೊನೆಯ ಎಸೆತವನ್ನು ಡಿಫೆಂಡ್ ಮಾಡಿದರು.

ಆದರೆ ಬೌಚರ್ ಗೆ ಬಂದ ಸಂದೇಶ ತಪ್ಪಾಗಿತ್ತು. 46 ಓವರ್ ನ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಗೆಲ್ಲಲು 230 ರನ್ ಮಾಡಬೇಕಾಗಿತ್ತು. ಆದರೆ ಮಾಡಿದ್ದು 229 ರನ್. ಆಗ ಮಳೆ ಸುರಿಯಲಾರಂಭಿಸಿತು. ಮಳೆ ನಿಲ್ಲದ ಕಾರಣ ಪಂದ್ಯ ಟೈ ಆಗಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡವು ತವರಿನ ಕೂಟದಲ್ಲಿ ಹೊರಬಿತ್ತು. ಅಗತ್ಯ ಸಮಯದಲ್ಲಿ ರನ್ ಮಾಡದ ಕ್ಲೂಸನರ್ ಮತ್ತೆ ವಿಲನ್ ಆದರು.

ಕ್ಲೂಸನರ್ ಅವರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರ ವೃತ್ತಿಜೀವನವು ನಿರಾಶಾದಾಯಕವಾಗಿ ಕೊನೆಗೊಂಡಿತು. ಅತ್ಯದ್ಭುತ ಪ್ರದರ್ಶನಗಳ ಹೊರತಾಗಿಯೂ ಅತೀ ಅಗತ್ಯ ಸಮಯದಲ್ಲಿ ಸರಿಯಾದ ನಿರ್ಧಾರ ಮಾಡದ ಕ್ಲೂಸನರ್ ಕ್ರಿಕೆಟ್ ವಿಶ್ವದ ದುರಂತ ನಾಯಕನಾಗಿಯೇ ಉಳಿದರು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.