Advertisement
ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಕಾದು ಟೋಕನ್ ಪಡೆದುಕೊಂಡು ಸೀರೆ ಖರೀದಿ ಮಾಡಲು ಸಾಧ್ಯವಾಗದ ಮಹಿಳೆಯರಿಗೆ ಬುಧವಾರ ರಿಯಾಯಿತಿ ದರದಲ್ಲಿ ಸೀರೆಗಳನ್ನು ನೀಡುವುದಾಗಿ ಕೆಎಸ್‌ಐಸಿ ತಿಳಿಸಿತ್ತು. ಅದರಂತೆ ಬುಧವಾರ ಬೆಳಗ್ಗೆ 10ರಿಂದ ಕೆಎಸ್‌ಐಸಿ ಸಿಬ್ಬಂದಿ ಸೀರೆ ಮಾರಾಟ ಆರಂಭಿಸಿದ್ದರು. ಆದರೆ ಟೋಕನ್ ಪಡೆದುಕೊಳ್ಳದ ಮಹಿಳೆಯರು ಗೌರಿ ಹಬ್ಬ ಆಚರಣೆ ಕೈಬಿಟ್ಟು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರು.
ಐಸಿ ಸಿಬ್ಬಂದಿ ಪದೇ ಪದೆ ಹೇಳುತ್ತಿದ್ದರೂ ಮಹಿಳೆಯರು ಕೇಳಲಿಲ್ಲ. ಸೀರೆ ಬೇಕು ಸೀರೆ ಬೇಕು ಎಂದು ಪ್ರತಿಭಟನೆ ಕೂಡ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು. ಟೋಕನ್ ಹೊಂದಿದ ಮಹಿಳೆಯರನ್ನು ಮಾತ್ರ ಎಫ್ಕೆಸಿಸಿಐ ಸಭಾಂಗಣದೊಳಗೆ ಬಿಡಲಾಗಿತ್ತು. ಮಂಗಳವಾರ ಸೀರೆ ಆಯ್ಕೆಯಿಂದಲೇ ಸಮಸ್ಯೆ ಉಂಟಾದ್ದರಿಂದ ಕೇವಲ 10 ಸೀರೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಗ್ರಾಹಕರು ದೂರದಿಂದಲೇ ಸೀರೆಗಳನ್ನು ನೋಡಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಟೋಕನ್ ಹೊಂದಿದ ಕೆಲ ಮಹಿಳೆಯರು ಹಬ್ಬ ಮಾಡುವುದನ್ನು ಕೈಬಿಟ್ಟು ಬೆಳಗ್ಗೆ 6 ಗಂಟೆಯಿಂದಲೇ ಕಾದು ಮಾರಾಟ ಆರಂಭವಾಗುತ್ತಿದ್ದಂತೆ ಸೀರೆ ಖರೀದಿಸಿ ಸಂತಸಪಟ್ಟರು.
Related Articles
Advertisement
ಟೋಕನ್ ಪಡೆದುಕೊಳ್ಳದ ಮಹಿಳೆಯರಿಂದ ಪ್ರತಿಭಟನೆ: ಟೋಕನ್ ಪಡೆದ ಮಹಿಳೆಯರಿಗೆ ಸೀರೆ ನೀಡಿದ ನಂತರ ಬಾಕಿ ಉಳಿದ ಸೀರೆಗಳನ್ನು ನಮಗೆ ನೀಡಬಹುದೆಂಬ ಭರವಸೆಯಿಂದ ಟೋಕನ್ ಇಲ್ಲದ ಮಹಿಳೆಯರು ಬೆಳಗ್ಗೆಯಿಂದ ಕಾದು ಕುಳಿತ್ತಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಟೋಕನ್ ಹೊಂದಿದ ಕೆಲ ಮಹಿಳೆಯರು ಐದಾರುಸೀರೆಗಳನ್ನು ಖರೀದಿಸುವುದನ್ನು ಕಂಡು ಹೊರಗಿದ್ದವರು ಕುಪಿತಗೊಂಡರು. ಟೋಕನ್ ವಿತರಣೆ ಬಗ್ಗೆ ಕೆಲವೇ ಕೆಲವು ಮಹಿಳೆಯರಿಗಷ್ಟೇ ಹೇಗೆ ತಿಳಿಯಿತು? ಮಾಧ್ಯಮಗಳಲ್ಲಿ ರಿಯಾಯಿತಿ ದರದಲ್ಲಿ ಸೀರೆ ನೀಡಲಾಗುವುದು ಎಂದು ಬೆಳಗ್ಗೆ 11ರ ನಂತರ ಪ್ರಸಾರ ಮಾಡಲಾಗಿತ್ತು. ಆದರೆ ಕೆಲ ಮಹಿಳೆಯರು ಟೋಕನ್ ಪಡೆದುಕೊಳ್ಳಲು ಮಂಗಳವಾರ ಬೆಳಗ್ಗೆ 9ರಿಂದಲೇ ಕಾದು ಕುಳಿತಿದ್ದರು. ಈ ಬಗ್ಗೆ ಹೇಗೆ ಅವರಿಗೆ ಮಾತ್ರ ತಿಳಿಯಿತು ಎಂದು ಕೆಎಸ್‌ಐಸಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಕೆಎಸ್‌ಐಸಿ ಸಿಬ್ಬಂದಿ ತಮ್ಮ ಕುಟುಂಬಸ್ಥರಿಗೆ ಟೋಕನ್ ವಿತರಣೆ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಅವರಿಗೆ ಟೋಕನ್ ಪಡೆದುಕೊಳ್ಳಲು ಸಾಧ್ಯವಾಗಿದೆ. ರಿಯಾಯಿತಿ ದರದ ಸೀರೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಕೆಎಸ್‌ಐಸಿ ಸಿಬ್ಬಂದಿಗೆ ಮತ್ತು ಅವರ ಕುಟುಂಬದವರಿಗೆ ಹಾಗೂ ಹಿರಿಯ ಅಧಿಕಾರಿಗಳ ಪತ್ನಿಯರಿಗೆ ಮಾತ್ರವೇ ಸೀರೆ ದೊರೆತಿದೆ. ಅಲ್ಲದೆ ಭದ್ರತೆಗಾಗಿ ಬಂದತಹ ಪೊಲೀಸ್ ಸಿಬ್ಬಂದಿ ಕೂಡ ಟೋಕನ್ ಇಲ್ಲದೆ ಸೀರೆ ಪಡೆದುಕೊಳ್ಳುತ್ತಿದ್ದಾರೆ ಎಂದು ಕೆಲ ಮಹಿಳೆಯರು ಆರೋಪಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯಬಹುದೆಂದು ತಿಳಿದ ಪೊಲೀಸರು ಮಹಿಳೆಯರನ್ನು ಚದುರಿಸಿದರು. ಹಬ್ಬ ಆಚರಿಸದೆ ಸೀರೆಯೂ ಇಲ್ಲದೆ ಮಹಿಳೆಯರು ಬೇಸರದಿಂದ ಮನೆ ಕಡೆ ಹೆಜ್ಜೆ ಹಾಕಿದರು.