ಪ್ರತಿಯೊಂದು ಹಾದಿಯಲ್ಲಿ ಕಲ್ಲು, ಮುಳ್ಳು ಇದ್ದೇ ಇರುತ್ತದೆ. ಆದರೆ ಅವನ್ನೆಲ್ಲಾ ದಾಟಿಕೊಂಡು ನಾವು ಮುಂದೆ ಹೋಗಿ ಹೂವಿನ ಸಿಂಹಾಸನವನ್ನು ಏರಬೇಕು. ನಮಗೆ ಮಾತ್ರ ಜೀವನದಲ್ಲಿ ಕಷ್ಟಗಳು ಬರುವುದು, ನಮ್ಮ ಹಾದಿ ಮಾತ್ರ ಕಲ್ಲು ಮುಳ್ಳುಗಳಿಂದ ಕೂಡಿರುವುದು ಎಂದು ನಾವು ಭಾವಿಸುತ್ತೇವೆ. ಕೊರಗುತ್ತಾ ಕೂರುತ್ತೇವೆ. ಹೀಗೆ ಕೊರಗುತ್ತಾ ಕೊರಗುತ್ತಾ ನಮ್ಮ ಜೀವನವನ್ನೇ ನಾವು ಹಾಳುಮಾಡಿಕೊಳ್ಳುತ್ತೇವೆ ವಿನಃ ಅದರಿಂದ ಯಾವ ಪ್ರಯೋಜನವಾಗಲೀ ಇಲ್ಲ.
ಯಶಸ್ಸಿನ ಸಿಂಹಾಸನವೇ ಹೂವಿನ ಸಿಂಹಾಸನ. ಆದರೆ ಅದರಲ್ಲಿ ಕುಳಿತುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅದಕ್ಕೆ ಕಠಿನ ಪರಿಶ್ರಮ, ಶ್ರದ್ಧೆ, ಭಕ್ತಿ ಅತ್ಯವಶ್ಯಕವಾಗಿದೆ. ಮಾರ್ಗ ಎಷ್ಟೇ ಕಷ್ಟವಾಗಿದ್ದರೂ, ಅಂತಿಮ ಗುರಿ ಹೂವಿನ ಸಿಂಹಾಸನವಾಗಿರುತ್ತದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತೊಂದಿದೆ.
ಬೆಟ್ಟವನ್ನು ದೂರದಿಂದ ನೋಡಿದಾಗ ಅದು ಸುಂದರವಾಗಿ ಕಾಣುತ್ತದೆ. ಆದರೆ ಅದರ ಹತ್ತಿರಕ್ಕೆ ಹೋದಾಗ ಅದರಲ್ಲಿ ಕಲ್ಲು, ಮುಳ್ಳುಗಳಿರುವುದು ಕಂಡುಬರುತ್ತದೆ. ಅದೇರೀತಿ ನಮ್ಮ ಪರಿಸ್ಥಿತಿ. ಎಷ್ಟೋ ಜನರನ್ನು ದೂರದಿಂದ ಕಾಣುವಾಗ ಅವರು ಸುಂದರವಾದ ಬದುಕನ್ನು ಬದುಕುತ್ತಿದ್ದಾರೆ ಎಂದು ನಮಗೆ ಅನ್ನಿಸುತ್ತದೆ. ಆದರೆ ಅವರನ್ನು ಹತ್ತಿರದಿಂದ ನೋಡಿದಾಗಲೇ ನಮಗೆ ತಿಳಿಯುವುದು ಅವರು ಜೀವನದಲ್ಲಿ ಎಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆಂದು.
ಉದಾಹರಣೆಗೆ ಹೂವನ್ನೇ ನೋಡಿ ಅದರಲ್ಲಿ ಎಷ್ಟೇ ಮುಳ್ಳುಗಳಿದ್ದರೂ ಅದು ಎಷ್ಟು ಸುಂದರವಾಗಿ ಅರಳುತ್ತದೆ ಎಂದು. ಅದೇರೀತಿ ನಮ್ಮನ್ನು ಪ್ರೀತಿಸುವವರು ನಮ್ಮ ಮುಖದಲ್ಲಿ ಮಂದಹಾಸವನ್ನು ಕಾಣಲು ಬಯಸುತ್ತಾರೆ. ಆದುದರಿಂದ ಎಷ್ಟೇ ಕಷ್ಟವಿದ್ದರೂ ಅದನ್ನೆಲ್ಲ ಮೆಟ್ಟಿ ನಿಂತು ಅವರ ಮುಂದೆ ಮಂದಹಾಸ ಬೀರಬೇಕು. ಕಷ್ಟಗಳು ಬರುವುದು ನಮ್ಮನ್ನು ನಾಶ ಪಡಿಸಲು ಅಲ್ಲ. ಬದಲಾಗಿ ನಮ್ಮೊಳಗಿನ ಶಕ್ತಿಯನ್ನು ಅರ್ಥ ಮಾಡಿಸಲು ಎಂಬ ಅರಿವಿ ನೊಂದಿಗೆ ಸದಾಕಾಲವೂ ಬದುಕುತ್ತಿದ್ದರೆ ನಮ್ಮ ಜೀವನ ಯಾವಾಗಲೂ ಖುಷಿಯಿಂದ ಕೂಡಿರುತ್ತದೆ. ಹೀಗೆ ಎಲ್ಲಾ ಕಷ್ಟವನ್ನು ಮೆಟ್ಟಿನಿಂತಾಗ ಹೂವಿನ ಸಿಂಹಾಸನದಲ್ಲೂ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ.
-ಕಾವ್ಯಶ್ರೀ ಎಸ್. ಸಾಮೆತ್ತಡ್ಕ
ಸ. ಪ್ರ. ದ. ಮಹಿಳಾ ಕಾಲೇಜು, ಪುತ್ತೂರು