Advertisement

ಭಾರತಕ್ಕೆ ಕಾಲಿಟ್ಟ ಥಾಮ್ಸನ್‌ ಸ್ಮಾರ್ಟ್‌ ಟಿವಿ

12:07 PM Apr 13, 2018 | |

ನವದೆಹಲಿ: ಇಲೆಕ್ಟ್ರಾನಿಕ್ಸ್‌ ಉಪಕರಣಗಳ ಜನಪ್ರಿಯ ಕಂಪನಿ ಥಾಮ್ಸನ್‌, ಭಾರತದ ಸ್ಮಾರ್ಟ್‌ ಟಿವಿ ಮಾರುಕಟ್ಟೆಗೆ ಕಾಲಿರಿಸಿದೆ. ಗುರುವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸತಾಗಿರುವ ಮೂರು ಸ್ಮಾರ್ಟ್‌ ಟಿವಿ ಮಾದರಿಗಳನ್ನು ಬಿಡುಗಡೆ ಮಾಡಿದೆ.

Advertisement

ಶಿಯೋಮಿ, ವು ಹಾಗೂ ಮೈಕ್ರೋಮ್ಯಾಕ್ಸ್‌ನಂಥ ಕಂಪನಿಗಳಿಗೆ ಪ್ರತಿಸ್ಪರ್ಧೆ ಒಡ್ಡಲು ಥಾಮ್ಸನ್‌ ದರವನ್ನು ಅತ್ಯಂತ ಸ್ಪರ್ಧಾತ್ಮಕವಾಗಿ ನಿಗದಿ ಮಾಡಿದೆ. ಫ್ರಾನ್ಸ್‌ ಮೂಲದ ಕಂಪನಿ ಥಾಮ್ಸನ್‌, ಪ್ರಧಾನಿ ನರೇಂದ್ರ ಮೋದಿಯವರ “ಮೇಕ್‌ ಇನ್‌ ಇಂಡಿಯಾ’ಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸೂಪರ್‌ ಪ್ಲಾಸ್ಟಿಕ್ಸ್‌ ಪ್ರೈ. ಲಿಮಿಟೆಡ್‌ (ಎಸ್‌ಪಿಪಿಎಲ್‌) ಜತೆ ಸಹಭಾಗಿತ್ವ ಸಾಧಿಸಿದೆ.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಎಸ್‌ಪಿಪಿಎಲ್‌ ಕಾರ್ಯನಿರ್ವಹಣಾ ಅಧಿಕಾರಿ ಅವನೀತ್‌ ಸಿಂಗ್‌ ಮಾರ್ವಾ ಇತರ ಕಂಪನಿಗಳಿಗಿಂತ ಹೆಚ್ಚಿನ ವೈಶಿಷ್ಟಗಳನ್ನು ಹೊಂದಿರುವ ಥಾಮ್ಸನ್‌ ಸ್ಮಾರ್ಟ್‌ ಟಿವಿಗಳನ್ನು ಅತ್ಯಂತ ಸ್ಪರ್ಧಾತ್ಮಕ  ದರದಲ್ಲಿ ಒದಗಿಸುತ್ತಿದ್ದೇವೆ ಎಂದರು.

ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಏ.13 ಮಧ್ಯಾಹ್ನ 12 ಗಂಟೆಯ ನಂತರ ಎಲ್ಇಡಿ ಸ್ಮಾರ್ಟ್‌ ಟಿವಿ ಬುಕ್‌ ಮಾಡಬಹುದು. 32 ಇಂಚಿನ ಎಲ್ಇಡಿ ಟಿ.ವಿ.ಯ ದರ 13,490. 43 ಇಂಚಿನ ಯುಎಚ್‌ಡಿ 4 ಕೆ ಟಿ.ವಿ.ಯ ದರ  27,999 ರೂ. ಹಾಗೂ 40 ಇಂಚಿನ 40 ಬಿ  9 ಟಿವಿ ದರ   19,999 ರೂ. ಎಂದು ಅವರು ಹೇಳಿದ್ದಾರೆ.

ಎಲ್ಜಿ ಐಪಿಎಸ್‌ ಪ್ಯಾನೆಲ್‌ ಹೊಂದಿರುವ  43 ಇಂಚಿನ 4ಕೆ ಟಿವಿ 3840 x 2160 ಪಿಕ್ಸೆಲ್ ರೆಸೊಲ್ಯುಶನ್‌ ಹೊಂದಿದೆ ಹಾಗೂ ಎಚ್‌ಡಿಆರ್‌ ಕೂಡ ಲಭ್ಯವಿದೆ. 178 ಡಿಗ್ರಿ ಕೋನದಿಂದಲೂ ಟಿವಿ ವೀಕ್ಷಣೆ ಉತ್ತಮವಾಗಿರುತ್ತದೆ. ಆಂಡ್ರಾಯ್ಡ ಕಿಟ್‌ಕ್ಯಾಟ್‌ ಆವೃತ್ತಿಯನ್ನು ಒಳಗೊಂಡಿರುವ ಥಾಮ್ಸನ್‌  43 ಇಂಚು ಟಿವಿ 1.4 ಗಿಗಾಹರ್ಟ್ಸ್ ಡ್ನೂಯಲ್‌ಕೋರ್‌ ಎ53 ಪ್ರೊಸೆಸರ್‌ ಹೊಂದಿದೆ.

Advertisement

1 ಜಿಬಿ ರ್ಯಾಮ್‌ 8 ಜಿಬಿ ಸ್ಟೋರೇಜ್‌ ಹೊಂದಿದ್ದು, ಅಪ್ಲಿಕೇಶನ್‌ ಡೇಟಾಗಳನ್ನು ಸಂಗ್ರಹಿಸುವಷ್ಟು ಸ್ಥಳಾವಕಾಶವಿದೆ. ಇನ್ನೊಂದು ವಿಶೇಷತೆಯೆಂದರೆ 10 ವ್ಯಾಟ್‌ ಸ್ಪೀಕರ್‌ಗಳನ್ನು ಇದು ಹೊಂದಿದ್ದು, ಸಿನಿಮಾ ವೀಕ್ಷಿಸುವಾಗ ಉತ್ತಮ ಗುಣಮಟ್ಟದ ಧ್ವನಿಯೂ ಕೇಳಿಸುತ್ತದೆ. 3 ಎಚ್‌ಡಿಎಂಐ ಪೋರ್ಟ್‌ ಹಾಗೂ 2 ಯುಎಸ್‌ಬಿ ಪೋರ್ಟ್‌ ಇವೆ. ಫೋಟೋಗಳನ್ನು ವೀಕ್ಷಿಸಲು ಒಂದು ಎಸ್‌ಡಿ ಕಾರ್ಡ್‌ ಪೋರ್ಟ್‌ ಕೂಡಾ ಇದೆ.

40 ಇಂಚಿನ ಸ್ಮಾರ್ಟ್‌ ಟಿವಿ ಸ್ಯಾಮ್ಸಂಗ್‌ ಎಲ್ಇಡಿ ಪ್ಯಾನೆಲ್ ಹೊಂದಿದ್ದು ಇದು 4ಕೆ ಅಲ್ಲ. ಅಲ್ಲದೆ ಇದು 1920 x 1080 ಪಿಕ್ಸೆಲ್ ಹಾಗೂ ಆಂಡ್ರಾಯ್ಡ ಲಾಲಿಪಪ್‌ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದೆ. ಉಳಿದ ವೈಶಿಷ್ಟ್ಯಗಳು 43 ಇಂಚಿನ ಟಿವಿಯಲ್ಲಿರುವಂತೆಯೇ ಇದೆ. 32 ಇಂಚಿನ ಟಿವಿ 1366x 768 ಪಿಕ್ಸೆಲ್ ಹೊಂದಿದೆ ಹಾಗೂ 20 ವ್ಯಾಟ್‌ ಸೌಂಡ್‌ ಔಟ್‌ಪುಟ್‌ ಹೊಂದಿದೆ.

ಸ್ಮಾರ್ಟ್‌ ಟಿವಿಯಲ್ಲಿ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾಗಳು, ಧಾರಾವಾಹಿಗಳು ಹಾಗೂ ವೀಡಿಯೋಗಳನ್ನು ವೀಕ್ಷಿಸಲು ಅನುವಾಗುವಂತೆ ಹಲವು ಅಪ್ಲಿಕೇಶನ್‌ಗಳು ಲಭ್ಯವಿವೆ. ಅಲ್ಲದೆ ಉಚಿತವಾಗಿ ನೆಟ್‌ಫ್ಲಿಕ್ಸ್‌, ಯೂಟ್ಯೂಬ್‌ ಸೇರಿ ಬೇಕಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

* ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next