ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ತೊಕ್ಕೊಟ್ಟುವಿನಿಂದ ದೇರಳಕಟ್ಟೆ, ಮಂಗಳೂರು ವಿ.ವಿ. ಸಂಪರ್ಕಿಸುವ ಚತುಷ್ಪಥ ರಸ್ತೆಯ ನಡುವೆ ಅಲ್ಲಲ್ಲಿ ಹೊಂಡ ಬಿದ್ದು, ಸಂಚಾರಕ್ಕೆ ತೊಡಕಾದರೆ, ತೊಕ್ಕೊಟ್ಟುವಿನಿಂದ ಚೆಂಬುಗುಡ್ಡೆವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ರಸ್ತೆಯಲ್ಲಿ ಸಂಚರಿಸುವುದೆ ದುಸ್ತರವಾಗಿದ್ದು, ಅಲ್ಲಲ್ಲಿ ಬಿದ್ದಿರುವ ಹೊಂಡಗಳಿಂದ ದ್ವಿಚಕ್ರ ವಾಹನ ಅಪಘಾತಕ್ಕೀಡಾಗುತ್ತಿದ್ದು, ಮಳೆ ನಿಂತ ಸಂದರ್ಭದಲ್ಲಿ ತಾತ್ಕಾಲಿಕ ಹೊಂಡ ಮುಚ್ಚುವ ಕಾರ್ಯಕ್ಕೆ ಲೊಕೋಪಯೋಗಿ ಇಲಾಖೆ ಮುಂದಾಗಬೇಕಾಗಿದೆ.
ತೊಕ್ಕೊಟ್ಟು ಜಂಕ್ಷನ್‌ನಿಂದ ಚೆಂಬುಗುಡ್ಡೆವರೆಗೆ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಮಂಜೂರಾದರೂ ಟೆಂಡರ್ ನಡೆಯದೆ ಕಾಮಗಾರಿ ಆರಂಭಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಮಳೆಗಾಲ ಕಳೆಯುವವರೆಗೆ ಹದಗೆಟ್ಟಿರುವ ರಸ್ತೆ ಕಾಮಗಾರಿ ತಾತ್ಕಾಲಿಕವಾಗಿ ನಡೆಯಬೇಕಾಗಿದೆ. ಜಿಲ್ಲೆಯಲ್ಲೇ ಅತೀ ಹೆಚ್ಚು ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಶಿಕ್ಷಣ ಸಂಸ್ಥೆಗಳ ವಾಹನಗಳೊಂದಿಗೆ, ಆಸ್ಪತ್ರೆಗೆ ಸಂಚರಿಸುವ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಆನುಭವಿಸುತ್ತಿದ್ದಾರೆ.
ಟ್ರಾಫಿಕ್ ದಟ್ಟಣೆಯ ನಡುವೆಯೇ ವಾಹನ ತಪಾಸಣೆ ಮಾಡುವ ಪೊಲೀಸರು. ಒಂದೆಡೆ ರಸ್ತೆ ಗುಂಡಿಗಳಲ್ಲಿ ಸರ್ಕಸ್ ಮಾಡಿಕೊಂಡು ಸಂಚರಿಸುವ ವಾಹನಗಳು, ಇನ್ನೊಂದೆಡೆ ಕಿರಿದಾದ ರಸ್ತೆ ಅಕ್ಕಪಕ್ಕದಲ್ಲಿ ಮೀನು ಸೇರಿದಂತೆ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರದಿಂದ ವಾಹನ ದಟ್ಟಣೆಯಾದರೆ ಇದರ ನಡುವೆಯೇ ಟ್ರಾಫಿಕ್ ಪೊಲೀಸರು ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವುದರಿಂದ ನಿತ್ಯ ಸಂಚಾರ ಮಾಡುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಪೊಲೀಸರು ವಾಹನ ನಿಲ್ಲಿಸುವಾಗ ರಸ್ತೆ ಬದಿಯಲ್ಲೇ ನಿಲ್ಲುವುದರಿಂಣದ ಸರಿಯಾದ ಫುಟ್‌ಪಾತ್ ಇಲ್ಲದ ಚೆಂಬುಗುಡ್ಡೆ ರಸ್ತೆಯಲ್ಲಿ ಇನ್ನಷ್ಟು ತೊಂದರೆಯಾಗುತ್ತಿದೆ.
ಆ್ಯಂಬುಲೆನ್ಸ್ ಸಂಚಾರಕ್ಕೂ ಕುತ್ತು
ಸುಮಾರು 900 ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟ ಕಾರಣ ದೇರಳಕಟ್ಟೆ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ಮಂಗಳೂರು ಸೇರಿದಂತೆ ಕೇರಳದ ಕಡೆಯಿಂದ ರೋಗಿಗಳನ್ನು ತುರ್ತು ಚಿಕಿತ್ಸೆಗೆ ತರುವ ಆ್ಯಂಬುಲೆನ್ಸ್ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಗುಂಡಿಗಳ ನಡುವೆ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವುದೆ ಒಂದು ಸಾಹಸವೇಯಾಗಿದೆ.