ಅರಂತೋಡು: ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಮತ್ಸ್ಯ ತೀರ್ಥ ಹೊಳೆಯಲ್ಲಿ ಸಾವಿರಾರು ದೇವರ (ಮಹಷೀರ್) ಮೀನುಗಳಿದ್ದು ಹೊಳೆಯಲ್ಲಿ ನೀರಿನ ಹರಿಯುವಿಕೆ ಕಡಿಮೆಯಾಗಿದೆ.
ಮೀನುಗಳಿಗೆ ಅಪಾಯ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಪೈಪ್ ಮೂಲಕ ನೀರು ಹರಿಸಲಾಗುತ್ತಿದೆ. ದೇಗುಲದ ಪಕ್ಕದಲಿರುವ ಮತ್ಸ್ಯ ತೀರ್ಥ ಹೊಳೆಯಲ್ಲಿರುವ ಮೀನುಗಳಿಗೆ ಪ್ರತೀ ವರ್ಷ ನೀರಿನ ಕೊರತೆ ಉಂಟಾಗುತ್ತದೆ.
ಈ ನೀರಿನ ಕೊರತೆ ನೀಗಲು ಈಗ ದೂರದ ಹೊಳೆಯಿಂದ ಪೈಪ್ ಮೂಲಕ ನೀರು ಹರಿಸಲಾಗುತ್ತಿದೆ. ಮಹಷೀರ್ ಜಾತಿಯ ಮೀನುಗಳು ಅಪರೂಪ ಜಾತಿಯ ಮೀನುಗಳಾಗಿದ್ದು ಇದರ ಸಂತತಿ ಅವನತಿಯಂಚಿನಲ್ಲಿದೆ. ಅವುಗಳ ಸಂರಕ್ಷಣೆ ಅಗತ್ಯ ಇದೆ.
ಇದೀಗ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಂಗಾರ ಅವರು ಒಳನಾಡು ಜಲ ಸಾರಿಗೆ ಬಂದರು ಮತ್ತು ಮೀನುಗಾರಿಕೆ ಸಚಿವರಾಗಿರುವ ಹಿನ್ನೆಲೆಯಲ್ಲಿ ತನ್ನ ಕ್ಷೇತ್ರದ ತೊಡಿಕಾನ ದೇಗುಲದ ಮೀನುಗಳ ಸಂರಕ್ಷಣೆಗೆ ಶಾಶ್ವತ ಯೋಜನೆಯೊಂದು ಕೈಗೆತ್ತಿಕೊಳ್ಳಬೇಕಾದ ಅಗತ್ಯ ಇದೆ.
ಮೀನುಗಳನ್ನು ರಕ್ಷಿಸುವ ಉದ್ದೇಶದಿಂದ ಈ ಭಾಗದಲ್ಲಿ ಮಹಷೀರ್ ಮೀನುಗಳನ್ನು ಹಿಡಿಯುವುದನ್ನು ನಿಷೇಧ ಮಾಡಲಾಗಿದೆ.
ನೈಸರ್ಗಿಕ ಯೋಜನೆ ಅಗತ್ಯ ದೇಗುಲದ ಪಕ್ಕ ದೇಗುಲಕ್ಕೆ ಸೇರಿರುವ ಮತ್ಸ್ಯ ತಟಾಕದಲ್ಲಿ ಸಾವಿರಾರು ದೇವರ ಮೀನುಗಳಿವೆ. ಇವುಗಳಿಗೆ ಬೇಸಗೆಯಲ್ಲಿ ನೀರಿನ ಕೊರತೆಯಾಗುತ್ತದೆ. ಮೀನುಗಳ ಸಂರಕ್ಷಣೆಗೆ ಶಾಶ್ವತ ನೈಸರ್ಗಿಕ ಯೋಜನೆ ಅಗತ್ಯ ಇದೆ.
–ಕಿಶೋರ್ ಕುಮಾರ್ ಯು.ಎಂ,ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ.