Advertisement

ಯಾವುದೇ ಕ್ಷಣ ಸಮ್ಮಿಶ್ರ ಸರ್ಕಾರ ಪತನ

11:45 AM Jun 02, 2019 | Naveen |

ತೀರ್ಥಹಳ್ಳಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿಯೇ ಬಿಜೆಪಿ ದಾಖಲೆಯ ಮತ ಪಡೆದು ವಿಜಯ ಸಾಧಿಸಿದೆ. ರಾಜ್ಯದ ಇತಿಹಾಸದಲ್ಲಿ 7 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುವುದರೊಂದಿಗೆ ದಾಖಲೆ ನಿರ್ಮಿಸಿದೆ. ರಾಜ್ಯದ 171 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅತೀ ಹೆಚ್ಚಿನ ಅಂತರದ ಮತಗಳನ್ನು ಪಡೆದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಕ್ಷೇತ್ರ ಬಿಜೆಪಿ ಆಯೋಜಿಸಿದ್ದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿಯ ಬಿ.ವೈ. ರಾಘವೇಂದ್ರ ಅವರ ಸನ್ಮಾನ ಹಾಗೂ ಮತದಾರರ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಬಾರಿ ಬಿಜೆಪಿಯನ್ನು ನಿರೀಕ್ಷೆಗೂ ಮೀರಿದ ಸಾಧನೆಯೊಂದಿಗೆ ದೇಶದ ಜನತೆ ಬೆಂಬಲಿಸಿದ್ದಾರೆ. ಮೋದಿ ಪ್ರಧಾನಿಯಾಗಬೇಕೆಂಬ ರಾಜ್ಯದ ಮತದಾರರ ಕನಸು ನನಸಾಗಿದೆ ಎಂದರು.

ರಾಜ್ಯದ ಸಮ್ಮಿಶ್ರ ಸರ್ಕಾರ ಕಚ್ಚಾಟ ಬಡಿದಾಟಗಳಿಂದ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬರಗಾಲ ಉದ್ಭವಿಸಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಮ್ಮಿಶ್ರ ಸರ್ಕಾರ ಮಾತ್ರ ರಾಜಕೀಯ ದೊಂಬರಾಟದಲ್ಲಿ ತೊಡಗಿದೆ. ಯಾವ ಸಂದರ್ಭದಲ್ಲಾದರೂ ರಾಜ್ಯ ಸಮ್ಮಿಶ್ರ ಸರ್ಕಾರ ಬೀಳಬಹುದು. ನಾವು ಬೀಳಿಸಲು ಹೋಗುವುದಿಲ್ಲ. ಸರ್ಕಾರ ರಚನೆಗೆ ಅವಕಾಶ ಸಿಕ್ಕರೆ ಮಾತ್ರ ಪ್ರಯತ್ನಿಸುತ್ತೇವೆ. ಏಕೆಂದರೆ ನಾವೇನು ಸನ್ಯಾಸಿಗಳಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಸಮ್ಮಿಶ್ರ ಸರ್ಕಾರ ದೊಂಬರಾಟದಲ್ಲಿ ತೊಡಗಿದೆ. ಕರ್ನಾಟಕವನ್ನು ಮಾರಲು ಹೊರಟಿರುವ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲದಂತಾಗಿದೆ. 3600 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಮಾರಲು ಹೊರಟಿರುವ ಈ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕತೆ ಇಲ್ಲ. ಕೆಲವೇ ತಿಂಗಳಿನಲ್ಲಿ ಸರ್ಕಾರ ಪತನಗೊಳ್ಳಲಿದೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವಪೀಳಿಗೆ ಬಿಜೆಪಿಯ ಗೆಲುವಿಗೆ ಹೆಚ್ಚು ಶಕ್ತಿ ನೀಡಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮವಹಿಸಿ ಬೂತ್‌ಮಟ್ಟದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿಯ ಮೋದಿ ಸರ್ಕಾರದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಹಣಕಾಸು ಖಾತೆ ನೀಡಲಾಗಿದೆ. ನಿರ್ಮಲಾ ಸೀತಾರಾಮನ್‌ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

Advertisement

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಈ ಬಾರಿಯ ಗೆಲುವಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮತ ಪರಿವರ್ತನೆಯ ಶ್ರಮವೇ ಕಾರಣ. ಕ್ಷೇತ್ರದ ಜನಸಾಮಾನ್ಯರು ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ನನಗೆ ನೀಡಿದ ಮತ ಸಾರ್ಥಕವಾಗಿದೆ. ಮೋದಿಯನ್ನು ವಿಶ್ವನಾಯಕರನ್ನಾಗಿ ಮಾಡಿದ ಕ್ಷೇತ್ರದ ಮತದಾರರನ್ನು ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಅಭಿನಂದಿಸಬೇಕು. ಮುಂದಿನ ದಿನಗಳಲ್ಲಿ ಮಲೆನಾಡಿನ ಸಮಸ್ಯೆಗಳು, ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದರು.

ಈ ಬಾರಿಯ ಗೆಲುವಿನಲ್ಲಿ ಹೋರಾಟ ಹಾಗೂ ಅಭಿವೃದ್ಧಿಯ ಹರಿಕಾರ ಬಿ.ಎಸ್‌. ಯಡಿಯೂರಪ್ಪನವರ ವರ್ಚಸ್ಸು ಮುಖ್ಯ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಕೇಂದ್ರವನ್ನು ರೂಪಿಸುವ ಗುರಿ ನನ್ನದಾಗಿದೆ. ತುಂಗಾತೀರದಲ್ಲಿ ಪ್ರವಾಸೋದ್ಯಮ ಕೇಂದ್ರವನ್ನು ನಿರ್ಮಿಸಿ ತೀರ್ಥಹಳ್ಳಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕಲ್ಪನೆ ನನ್ನಲ್ಲಿದೆ ಎಂದರು.

ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಬಿಜೆಪಿಯ ಗೆಲುವಿನ ದಾರಿ ಕಾರ್ಯತಂತ್ರ ಹಾಗೂ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರನ್ನು ಸ್ಮರಿಸಿದರು. ಬೈಂದೂರಿನ ಶಾಸಕ ಸುಕುಮಾರ ಶೆಟ್ಟಿ, ರಾಜ್ಯ ಮಹಿಳಾ ಬಿಜೆಪಿ ಮುಖಂಡರಾದ ಭಾರತಿ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗದ ಮುಖಂಡ ಬೇಗುವಳ್ಳಿ ಸತೀಶ್‌, ಮುಖಂಡ ಆರ್‌. ಮದನ್‌, ಮಾಜಿ ಶಾಸಕ ಸ್ವಾಮಿರಾವ್‌ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ಜಿಲ್ಲಾ ಮುಖಂಡ ದತ್ತಾತ್ರಿ, ತಾಲ್ಲೂಕು ಅಧ್ಯಕ್ಷ ಆರ್‌. ಮೋಹನ್‌, ಅಶೋಕಮೂರ್ತಿ, ಮಲ್ಲಿಕಾರ್ಜುನ, ಬಿ. ಶ್ರೀನಿವಾಸ್‌, ಅಪೂರ್ವ ಶರಧಿ, ಭಾರತಿ ಸುರೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next