Advertisement

ಈ ವರ್ಷ ರವಿಚಂದ್ರನ್‌ ಸಿನಿಹಬ್ಬ

11:16 AM Mar 31, 2018 | |

ಕಳೆದ ವರ್ಷ ರವಿಚಂದ್ರನ್‌ ಅಭಿನಯದ ಒಂದೇ ಒಂದು ಚಿತ್ರ ಬಿಡುಗಡೆಯಾಗಿತ್ತು. ಅದೇ “ಹೆಬ್ಬುಲಿ’. ಅದೊಂದು ಚಿತ್ರ ಹೊರತುಪಡಿಸಿದರೆ ಮಿಕ್ಕಂತೆ ಅವರ ಯಾವುದೇ ಚಿತ್ರ ಬಿಡುಗಡೆಯಾಗಿರಲಿಲ್ಲ. ಈ ಬಗ್ಗೆ ಬೇಸರಗೊಂಡಿದ್ದ ಅವರ ಅಭಿಮಾನಿಗಳಿಗೆ ಈ ವರ್ಷ ಬಂಪರ್‌ ಎಂದರೆ ತಪ್ಪಿಲ್ಲ. ಏಕೆಂದರೆ, ಈ ವರ್ಷ ರವಿಚಂದ್ರನ್‌ ಅವರ ಸಿನಿಹಬ್ಬ ಶುರುವಾಗಲಿದೆ.

Advertisement

ಹೀಗೆಂದಾಕ್ಷಣ, ಅಚ್ಚರಿಯಾಗಬಹುದೇನೋ? ಆದರೂ ಇದು ನಿಜ. ಹೌದು, ರವಿಚಂದ್ರನ್‌ ಅಭಿನಯಿಸಿರುವ ಈ ವರ್ಷದ ಮೊದಲ ಚಿತ್ರ “ಸೀಜರ್‌’ ಏಪ್ರಿಲ್‌ ಎರಡನೆಯ ವಾರದಂದು ಬಿಡುಗಡೆಯಾಗುತ್ತಿದೆ. ಇದು ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಾದರೆ, ಅವರು ಅಭಿನಯಿಸಿರುವ ಮೂರು ಚಿತ್ರಗಳು ಕೂಡ ಸಾಲು ಸಾಲಾಗಿ ತೆರೆಗೆ ಬರಲು ಸಜ್ಜಾಗಿವೆ. ಅಲ್ಲಿಗೆ ಈ ವರ್ಷ ರವಿಚಂದ್ರನ್‌ ನಟಿಸಿದ ನಾಲ್ಕು ಚಿತ್ರಗಳು ತೆರೆಗೆ ಬರಲಿವೆ ಎಂಬುದು ವಿಶೇಷ.

“ಸೀಜರ್‌’ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾದರೆ, ಅದರ ಹಿಂದೆಯೇ “ಬಕಾಸುರ’ ಚಿತ್ರ ತೆರೆಗೆ ಅಪ್ಪಳಿಸಲಿದೆ. ಇನ್ನು, ಬಹು ನಿರೀಕ್ಷೆಯ “ಮುನಿರತ್ನ ಕುರುಕ್ಷೇತ್ರ’ ಚಿತ್ರವು ಮೇ ಕೊನೆಯಲ್ಲಿ ಅಥವಾ ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದಾದ ಬಳಿಕ ರವಿಚಂದ್ರನ್‌ ನಿರ್ದೇಶಿಸಿ, ಅಭಿನಯಿಸುತ್ತಿರುವ “ರಾಜೇಂದ್ರ ಪೊನ್ನಪ್ಪ’ ಚಿತ್ರ ಕೂಡ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಬಹುದು.

ಅಲ್ಲಿಗೆ, ರವಿಚಂದ್ರನ್‌ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ ಎಂಬುದು ವಿಶೇಷತೆಗಳಲ್ಲೊಂದು. ಇದು ಅಭಿಮಾನಿಗಳ ಪಾಲಿಗೆ ಹಬ್ಬವಂತೂ ಹೌದು. ಸಾಮಾನ್ಯವಾಗಿ ಹೀರೋಗಳು ನಟಿಸಿದ ಎರಡು ಅಥವಾ ಮೂರು ಚಿತ್ರಗಳು ಒಂದು ವರ್ಷದಲ್ಲಿ ಬಿಡುಗಡೆಯಾಗಿರುವ ಉದಾಹರಣೆಗಳಿವೆ. ಈ ವರ್ಷ ರವಿಚಂದ್ರನ್‌ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇರುವುದು ವಿಶೇಷವಂತೂ ಹೌದು.

ವಿನಯ್‌ಕೃಷ್ಣ ನಿರ್ದೇಶನದ “ಸೀಜರ್‌’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕ. ಅವರಿಗೆ ಪಾರುಲ್‌ ಯಾದವ್‌ ನಾಯಕಿ. ತ್ರಿವಿಕ್ರಮ ಈ ಚಿತ್ರದ ನಿರ್ಮಾಪಕರು. ಆರಂಭದಲ್ಲಿ ರವಿಚಂದ್ರನ್‌ “ಸೀಜರ್‌’ನಲ್ಲಿ ನಟಿಸುತ್ತಾರೆಂಬುದು ಸುದ್ದಿ ಇರಲಿಲ್ಲ. ಎಷ್ಟೋ ದಿನಗಳ ಬಳಿಕ ರವಿಚಂದ್ರನ್‌ “ಸೀಜರ್‌’ ತಂಡ ಸೇರಿಕೊಂಡ ಸುದ್ದಿ ಬಂತು. ಈಗಾಗಲೇ ರವಿಚಂದ್ರನ್‌ ಹಲವು ಹೀರೋಗಳ ಚಿತ್ರದಲ್ಲಿ ನಾಯಕನ ತಂದೆಯಾಗಿ, ಅಣ್ಣನಾಗಿ ಕಾಣಿಸಿಕೊಂಡಿರುವುದರಿಂದ ಇಲ್ಲೂ ಚಿರುಗೆ ತಂದೆ ಪಾತ್ರ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇತ್ತು.

Advertisement

ಆದರೆ, ರವಿಚಂದ್ರನ್‌ “ಸೀಜರ್‌’ನಲ್ಲಿ ಒಬ್ಬ ಫೈನಾನ್ಶಿಯರ್‌ ಪಾತ್ರ ಮಾಡುತ್ತಿದ್ದಾರೆ. ಅವರೊಂದಿಗೆ ಚಿರು ಅವರು ಕಾರುಗಳನ್ನು ಸೀಜ್‌ ಮಾಡುವ ಹುಡುಗನಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಂಜಿ ಛಾಯಾಗ್ರಹಣ ಮಾಡಿದರೆ, ಚಂದನ್‌ ಶೆಟ್ಟಿ ಅವರ ಸಂಗೀತವಿದೆ. ಇನ್ನು, “ಕರ್ವ’ ಖ್ಯಾತಿಯ ನವನೀತ್‌ ನಿರ್ದೇಶನದ “ಬಕಾಸುರ’ದಲ್ಲೂ ರವಿಚಂದ್ರನ್‌ ನಟಿಸುತ್ತಿದ್ದಾರೆ.

ಹಾಗಾದರೆ, ಈ ಚಿತ್ರದಲ್ಲಿ ರವಿಚಂದ್ರನ್‌ ಪಾತ್ರ ಏನು? ಅದಕ್ಕೆ ಉತ್ತರ ಚಿತ್ರ ಬರುವವರೆಗೆ ಕಾಯಬೇಕು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ “ಮುನಿರತ್ನ ಕುರುಕ್ಷೇತ್ರ’ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಚುನಾವಣೆ ಘೋಷಣೆಯಾಗಿದ್ದರಿಂದ ಚಿತ್ರ ಮುಂದಕ್ಕೆ ಹೋಗಿದೆ. ಈ ಚಿತ್ರದಲ್ಲಿ ರವಿಚಂದ್ರನ್‌ ಅವರು ಕೃಷ್ಣನಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ದೊಡ್ಡ ತಾರಾಬಳಗ ಇರುವ ಸಿನಿಮಾ. ರವಿಚಂದ್ರನ್‌ ಕೃಷ್ಣನಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಈಗಾಗಲೇ ಒಂದು ಪೋಸ್ಟರ್‌ ಕೂಡ ಬಿಡುಗಡೆಯಾಗಿತ್ತು.

ಮಹಾಭಾರತದ ಕೃಷ್ಣ ಏನೆಲ್ಲಾ ಮಾಡಿದ್ದಾರೋ, ಅದನ್ನೇ ತೆರೆಯ ಮೇಲೆ ರವಿಚಂದ್ರನ್‌ ಅವರು ಕೃಷ್ಣನಾಗಿ ತೋರಿಸಲು ಹೊರಟಿದ್ದಾರೆ. “ದೃಶ್ಯಂ’ನಲ್ಲಿ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಗಮನಸೆಳೆದ ರವಿಚಂದ್ರನ್‌, “ರಾಜೇಂದ್ರ ಪೊನ್ನಪ್ಪ’ ಹೆಸರಲ್ಲೇ ಚಿತ್ರವೊಂದಕ್ಕೆ ಚಾಲನೆ ಕೊಟ್ಟರು. ಅದೂ ಕೂಡ ಈ ವರ್ಷವೇ ಬರುವ ಸೂಚನೆ ನೀಡಿದೆ. ಅವರಿಗೆ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next