ಬರಾಡಿಯಾ, ಛತ್ತೀಸ್‌ಗಢ : ಒಬ್ಬ ವ್ಯಕ್ತಿ 30 ವರ್ಷ ಕಾಲ ಕೇವಲ ಟೀ ಕುಡಿದು ಬದುಕಿರಲು ಸಾದ್ಯವಾ ? ನಂಬಿದ್ರೆ ನಂಬಿ – ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಬರಾಡಿಯಾಗ್ರಾಮದ ಪಿಲ್ಲೀ ದೇವಿ ಎಂಬ ಮಹಿಳೆ ಕಳೆದ 30 ವರ್ಷದಿಂದ ಕೇವಲ ಟೀ ಕುಡಿದು ಬದುಕಿಕೊಂಡಿದ್ದಾಳೆ; ಕೇವಲ ಬದುಕಿರುವುದು ಮಾತ್ರವಲ್ಲ, ಉತ್ತಮ ಆರೋಗ್ಯವನ್ನೂ ಹೊಂದಿದ್ದಾಳೆ !
ಪಿಲ್ಲೀ ದೇವಿ ತಾನು 11 ವರ್ಷದವಳಿದ್ದಾಗ ಅನ್ನಾಹಾರ ಸೇವಿಸುವುದನ್ನು ಬಿಟ್ಟಿದ್ದಳು. ಅಂದಿನಿಂದ ಆಕೆ ಕೇವಲ ಟೀ ಮಾತ್ರವೇ ಸೇವಿಸಲು ತೊಡಗಿದ್ದಳು. ಅದಾಗಿ ಈಗ 30 ವರ್ಷಗಳು ಕಳೆದು ಹೋಗಿವೆ. ಆದರೆ ಪಿಲ್ಲೀ ದೇವಿ ಇಂದಿಗೂ ಅನ್ನಾಹಾರ ಸೇವಿಸುವುದಿಲ್ಲ; ನೀರನ್ನೂ ಕುಡಿಯುವುದಿಲ್ಲ. ಆಕೆ ಸೇವಿಸುವುದು ಕೇವಲ ಟೀ ಮಾತ್ರ . ಹಾಗಾಗಿ ಅಕೆಯನ್ನು ಗ್ರಾಮದವರೆಲ್ಲ ಚಾಯ್ ವಾಲಿ ಚಾಚಿ ಎಂದೇ ಕರೆಯುತ್ತಾರೆ.
ಪಿಲ್ಲೀ ದೇವಿಯ ತಂದೆ ರತಿರಾಮ್ ಅವರು ಟೀ ಮಾತ್ರ ಸೇವಿಸುವ ತನ್ನ ಮಗಳ ಈ ವಿಚಿತ್ರ ಅಭ್ಯಾಸದ ಬಗ್ಗೆ ಹೀಗೆ ಹೇಳುತ್ತಾರೆ :
ನನ್ನ ಮಗಳು ಆರನೇ ತರಗತಿಯಲ್ಲಿ ಓದುತ್ತಿದ್ದಾಗ ಕೊರಿಯ ಜಿಲ್ಲೆಯ ಜನಕಪುರದಲ್ಲಿನ ಪಟ್ನಾ ಶಾಲೆಯಿಂದ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗೆ ಹೋಗಿದ್ದಳು. ಆಗ ಅವಳಿಗೆ 11 ವರ್ಷ ವಯಸ್ಸು. ಅಲ್ಲಿಂದ ಹಿಂದಿರುಗಿ ಬಂದ ಬಳಿಕ ಆಕೆ ಆಹಾರ ಮಾತ್ರವಲ್ಲ ನೀರು ಸೇವಿಸುವುದನ್ನೂ ಬಿಟ್ಟಳು. ಅಂದಿನಿಂದ ಇಂದಿನ ವರೆಗೂ, (ಅವಳಿಗೀಗ 44 ವರ್ಷ ವಯಸ್ಸು) ಅವಳು ಟೀ ಮಾತ್ರವೇ ಸೇವಿಸಿ ಬದುಕುತ್ತಿದ್ದಾಳೆ.
ಪಿಲ್ಲೀ ದೇವಿ ಮೊದಲೆಲ್ಲ ಬ್ರೆಡ್, ಬಿಸ್ಕತ್, ಹಾಲಿನ ಟೀ ಸೇವಿಸುತ್ತಿದ್ದಳು. ಕೆಲ ಸಮಯದ ಬಳಿಕ ಅವಳು ಸೂರ್ಯಾಸ್ತದ ಬಳಿಕ ಒಂದು ಬಾರಿ ಮಾತ್ರವೇ ಬ್ಲ್ಯಾಕ್ ಟೀ ಸೇವಿಸತೊಡಗಿದಳು. ಆಕೆಯಲ್ಲಿನ ಈ ಬದಲಾವಣೆ ಬಗ್ಗೆ ಆಕೆಯ ಸಹೋದರ ಬಿಹಾರಿ ಲಾಲ್ ರಾಜವಾಡೆ ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದ. ವೈದ್ಯರು ಆಕೆ ಯಾವುದೇ ರೋಗದಿಂದ ಬಳಲುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿದರು. ಆ ಬಳಿಕವೂ ನಾವು ಆಕೆಯನ್ನು ಬೇರೆ ಬೇರೆ ವೈದ್ಯರಲ್ಲಿ ಒಯ್ದೆವು. ಆಕೆ ಟೀ ಮಾತ್ರವೇ ಯಾಕೆ ಸೇವಿಸುತ್ತಾಳೆ ಎಂಬುದಕ್ಕೆ ಯಾವ ವೈದ್ಯರಿಂದಲೂ ನಮಗೆ ಉತ್ತರ ಸಿಗಲಿಲ್ಲ. ಇಂದಿಗೂ ಅದು ನಮಗೆಲ್ಲ ನಿಗೂಢವೇ ಆಗಿದೆ.
ಪಿಲ್ಲಿ ದೇವಿಯಲ್ಲಿ ಈ ಅವಧಿಯಲ್ಲಿ ಇನ್ನೊಂದು ಬದಲಾವಣೆಯಾಗಿದೆ. ಆಕೆ ಮನೆಯಿಂದ ಹೊರಗೆ ಹೋಗುವುದೇ ಅಪರೂಪವಾಗಿದೆ. ಶಿವನ ಧ್ಯಾನದಲ್ಲೇ ಕಾಲ ಕಳೆಯುತ್ತಾಳೆ ಎಂದಾಕೆಯ ತಂದೆ ಹೇಳುತ್ತಾರೆ.
ಕೊರಿಯಾ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಎಸ್ ಕೆ ಗುಪ್ತಾ ಪಿಲ್ಲಿ ದೇವಿಯ ಬಗ್ಗೆ ಹೀಗೆ ಹೇಳುತ್ತಾರೆ : ಇದು ನಿಜಕ್ಕೂ ಅಚ್ಚರಿಯ ವಿಷಯ. ವೈಜ್ಞಾನಿಕವಾಗಿ ಹೇಳುವುದಾದರೆ ಯಾವುದೇ ಮನುಷ್ಯ 33 ವರ್ಷಗಳ ಕಾಲ ಟೀ ಕುಡಿದು ಬದುಕಿರಲು ಸಾಧ್ಯವಿಲ್ಲ. ನವರಾತ್ರಿಯ ವೇಳೆ 9 ದಿನ ಉಪವಾಸ ಮಾಡುವವರು ಟೀ ಮಾತ್ರವೇ ಕುಡಿದಿರುವುದು ಇದೆ. ಆದರೆ 33 ವರ್ಷ ಕಾಲ ಟೀ ಕುಡಿದೇ ಬದುಕಿರುವುದು ಅಸಾಧ್ಯ. ಇದೊಂದು ಅಚ್ಚರಿಯ, ನಿಗೂಢ ಸಂಗತಿ.