Advertisement

ಈ ಸಲ ಮತದಾನ ಮಾಡುತ್ತೇವೆ, ವರ್ಷದೊಳಗೆ ರಸ್ತೆ ದುರಸ್ತಿ ಮಾಡಿ

10:44 AM May 11, 2018 | |

ಕಡಬ: ಪದವಿನಿಂದ ಕೆದ್ದೊಟ್ಟೆ- ಇಡಾಳ- ಕುಂಟ್ಯಾನ ಮೂಲಕ ಕುಂತೂರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಕಚ್ಛಾ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ರಾಜಕೀಯ ಪಕ್ಷಗಳ ನಾಯಕರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಭಾಗವಹಿಸಿ ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಚುನಾವಣ ಬಹಿಷ್ಕಾರ ಮಾಡಲು ನಿರ್ಣಯಿಸಿದ್ದಾರೆ.

Advertisement

ಜಾಲತಾಣದಲ್ಲಿ ಜಾಗೃತಿ
ಸುಮಾರು 10 ಕಿ.ಮೀ. ಉದ್ದದ ರಸ್ತೆಯಲ್ಲಿ ಇಷ್ಟರತನಕ ಕೇವಲ 1 ಕಿ.ಮೀ. ಡಾಮರು ರಸ್ತೆ ನಿರ್ಮಿಸಲಾಗಿದ್ದರೆ, 900 ಮೀ. ಉದ್ದಕ್ಕೆ ಕಾಂಕ್ರೀಟ್‌ ಹಾಕಲಾಗಿದೆ. ಆದರೆ ಈ ಹಿಂದೆ ರಸ್ತೆಗೆ ಹಾಕಲಾಗಿದ್ದ ಡಾಮರು ಸಂಪೂರ್ಣ ಕಿತ್ತುಹೋಗಿದೆ. ಬೇಸಗೆಯಲ್ಲಿ ಬಹಳ ಕಷ್ಟದಿಂದ ಈ ಮಣ್ಣಿನ ರಸ್ತೆಯಲ್ಲಿ ಸಂಚರಿಸುವ ಸ್ಥಳೀಯರ ನಿಜವಾದ ಕಷ್ಟ ಆರಂಭವಾಗುವುದು ಮಳೆಗಾಲದಲ್ಲಿ. ಮಳೆಗಾಲದ ಆರಂಭದಿಂದಲೇ ಕೆಸರುಮಯವಾಗುವ ಈ ರಸ್ತೆಯಲ್ಲಿ ವಾಹನ ಸಂಚಾರ ಅತ್ಯಂತ ದುಸ್ತರ. ಕೆಸರಿನಲ್ಲಿ ನಡೆದುಹೋಗಲೂ ಹರಸಾಹಸ ಪಡಬೇಕಾದ ಪರಿಸ್ಥಿತಿ. ದಿನಂಪ್ರತಿ ಈ ರಸ್ತೆಯಲ್ಲಿ ಸಂಚರಿಸಬೇಕಾದ ವಿದ್ಯಾರ್ಥಿ ಗಳು, ಉದ್ಯೋಗಿಗಳು, ಕೃಷಿಕರು ಸಹಿತ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಓಡಾಡುತ್ತಾರೆ. 

ಪ್ರತಿ ಚುನಾವಣೆಯ ಸಂದರ್ಭದಲ್ಲೂ ಇಲ್ಲಿನ ಮತದಾರರು ರಾಜಕೀಯ ಪಕ್ಷಗಳ ನೇತಾರರ ಮುಂದೆ ತಮ್ಮ ಅಹವಾಲು ಮಂಡಿಸುತ್ತಾರೆ. ಆದರೆ ಪ್ರಯೋಜನ ಮಾತ್ರ ಶೂನ್ಯ. ಆದರೆ ಈ ಬಾರಿ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಸ್ಥಳೀಯ ಯುವಕರು ಗ್ರಾಮಸ್ಥರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅದರಂತೆ ಕೆದ್ದೊಟ್ಟೆ ಶ್ರೀರಾಮ ಭಜನ ಮಂದಿರದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದ ಸ್ಥಳೀಯರು ಈ ಬಾರಿ ಚುನಾವಣೆಯಲ್ಲಿ ಭಾಗವಹಿಸಿ, ರಸ್ತೆ ಅಭಿವೃದ್ಧಿಪಡಿಸಲು ಮುಂದಿನ ಲೋಕಸಭಾ ಚುನಾವಣೆಯ ತನಕ ಜನಪ್ರತಿನಿಧಿಗಳಿಗೆ ಗಡುವು ನೀಡಲು ನಿರ್ಧರಿಸಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅದರೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಲೋಕಸಭೆಯ ಚುನಾವಣೆಗೆ ಮತಯಾಚಿಸಲು ನಮ್ಮ ಗ್ರಾಮಕ್ಕೆ ಬರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಗ್ರಹಚಾರ ಬಿಡಿಸುವುದಾಗಿ ಅವರು ಎಚ್ಚರಿಸಿದ್ದಾರೆ.

ಮನವಿ ಸಲ್ಲಿಸುತ್ತೇವೆ
ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವುದು ಅಥವಾ ನೋಟಾ ಮತದಾನ ಮಾಡುವುದು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಆದರೆ ಎಲ್ಲರೊಂದಿಗೆ ಚರ್ಚಿಸಿ ಜನಪ್ರತಿನಿಧಿಗಳಿಗೆ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ನಮ್ಮ ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಚುನಾವಣೆ ಬಹಿಷ್ಕರಿಸುವುದು ಅಥವಾ ನೋಟಾ ಮತ ಚಲಾಯಿಸುವುದು ಅನಿವಾರ್ಯ. ಮೇ 12 ರ ಚುನಾವಣೆಯ ಬಳಿಕ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮತ್ತೆ
ಮನವಿ ಸಲ್ಲಿಸಿ ಎಚ್ಚರಿಕೆ ನೀಡುವ ಕೆಲಸ ಮಾಡಲಿದ್ದೇವೆ.
-ಗಣೇಶ್‌ ಇಡಾಳ,
ಸ್ಥಳೀಯ ಯುವ ಮುಂದಾಳು

ನಾಗರಾಜ್‌ ಎನ್‌.ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next