Advertisement

ಈ ಬಾರಿ ದುಬೈನಲ್ಲಿ ತುಳು ಸಮ್ಮೇಳನ

12:28 PM Sep 11, 2018 | Team Udayavani |

ಬೆಂಗಳೂರು: ಅಖೀಲ ಭಾರತ ತುಳು ಒಕ್ಕೂಟದ ವತಿಯಿಂದ ನ.23 ಮತ್ತು 24ರಂದು ದುಬೈನ ಅಲ್‌ನಸಾರ್‌ ಲೀಸರ್‌ ಲ್ಯಾಂಡ್‌ ಐಸ್‌ರಿಂಗ್‌ನಲ್ಲಿ ವಿಶ್ವ ತುಳು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಾಗರೋತ್ತರ ತುಳುವರು ಸಂಘಟನೆಯ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಮಾತನಾಡಿ, ಕೊಲ್ಲಿ ರಾಷ್ಟ್ರಗಳ ತುಳು ಜನತೆಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ತುಳು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಉದ್ಯಮಿ ಬಿ.ಆರ್‌.ಶೆಟ್ಟಿ ವಹಿಸಲಿದ್ದಾರೆ.

ಧರ್ಮಸ್ಥಳದ ಧರ್ಮಧಿಕಾರಿ ವಿರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್‌ ಪೌಲ್‌ ಸಲ್ಡಾನಾ, ಮಂಗಳೂರು ಸಿಎಸ್‌ಐನ ಧರ್ಮಾಧ್ಯಕ್ಷ ಎಬಿನೆಜರ್‌ ಹಾಗೂ ಮುಸ್ಲಿಂ ಪ್ರವಚನಕಾರ  ಅಬ್ದುಸ್ಸಲಾಂ ಪುತ್ತಿಗೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶೇಷ ಸ್ಮರಣ ಸಂಚಿಕೆ ವಿಶ್ವ ತುಳು ಐಸಿರಿ ಲೋಕಾರ್ಪಣೆಗೊಳಿಸಲಾಗುವುದು. ವಿದ್ವಾಂಸರಿಂದ ತುಳುನಾಡಿನ ಕಲೆ ಸಾಹಿತ್ಯ ಕ್ರೀಡೆ ಜನಪದ ಸಮಗ್ರ ಮಾಹಿತಿಗಳು, ಸಾಹಿತಿಗಳ ಅರ್ಥಪೂರ್ಣ ಲೇಖನಗಳು ಈ ಸ್ಮರಣ ಸಂಚಿಕೆಯಲ್ಲಿ ಇರಲಿದೆ ಎಂದು ಹೇಳಿದರು.

ಜಾನಪದ ಗಾಯನ, ಜಾನಪದ ನೃತ್ಯ, ಸಮೂಹ ಗಾಯನ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ತುಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮಸ್ಕತ್‌, ಬಹರೈನ್‌, ಕತಾರ್‌, ಕುವೈತ್‌, ಸೌದಿ ಅರೇಬಿಯಾ, ಒಮಾನ್‌ ಮತ್ತು ಯುಎಇ ಸೇರಿದಂತೆ ಬೇರೆ ದೇಶಗಳ ಜಾನಪದ ನೃತ್ಯ ತಂಡಗಳು ಭಾಗವಹಿಸಲಿವೆ ಎಂದರು.

Advertisement

ಚಕ್ರಪಾಣಿ ನೃತ್ಯ ಕಲಾಕೇಂದ್ರದಿಂದ ತುಳುನಾಡ ಪಬೊìಲು ನೃತ್ಯರೂಪಕ, ಮಿಜಾರು ತಂಡ ಹಾಗೂ ಪ್ರಶಂಸಾ ತಂಡದಿಂದ ಬಲೆ ತೆಲಿಪಾಲೆ, ನಾಟ್ಯನಿಕೇತನ ಉಳ್ಳಾಲ್‌ ಮೋಹನ್‌ ಕುಮಾರ್‌ ತಂಡದವರಿಂದ ಎಳುವೆರ್‌ ದೆಯ್ನಾರ್‌ ನೃತ್ಯರೂಪಕ, ಸನಾತನ ನಾಟ್ಯಾಲಯದಿಂದ ಸತ್ಯನ ಪುರಾತ ಸಿರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ, ತುಳು ಸಾಹಿತ್ಯ ಗೋಷ್ಠಿ, ತುಳು- ಕೋಡೆ ಇನಿ ಎಲ್ಲೆ, ದೇವಾರಾಧನೆ, ನಾಗರಾಧನೆ ಮತ್ತು ಭೂತರಾಧನೆಯ ಕುರಿತು ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ಕವನ ವಾಚನ, ಚುಟುಕು ಗೋಷ್ಠಿ, ತುಳು ರಂಗಭೂಮಿ ಮತ್ತು ಚಲನಚಿತ್ರದ ಕುರಿತು ಗೋಷ್ಠಿ, ಹೊರನಾಡ ತುಳು ಸಂಘಟನೆಗಳ ಕುರಿತು ವಿಚಾರ ಮಂಥನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪುರುಷೋತ್ತಮ ಚೇಂಡ್ಲಾ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನವೆಂಬರ್‌ನಲ್ಲಿ ಆಯೋಜಿಸಲು ಉದ್ದೇಶಿಸಿರುವ ದ್ರಾವಿಡಾ ಭಾಷಾ ಸಮ್ಮೇಳನದ ಮೊದಲ ಸಭೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಆಹ್ವಾನಿಸಿರಲಿಲ್ಲ. ಎರಡನೇ ಸಭೆಗೆ ಆಹ್ವಾನಿಸಲಾಗಿದೆ. ಸೆ.10ರಂದು ನಡೆಯಬೇಕಿದ್ದ ಎರಡನೇ ಸಭೆ ಭಾರತ್‌ ಬಂದ್‌ನಿಂದಾಗಿ ಮುಂದೂಡಲಾಗಿದೆ.

ಮುಂದಿನ ಸಭೆ ಯಾವಾಗ ನಡೆಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಲಿದ್ದಾರೆ. ತುಳು ಭಾಷೆ ಕೂಡ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಇದಕ್ಕೆ ಲಿಪಿ ಇಲ್ಲ ಎಂಬ ಕಾರಣಕ್ಕಾಗಿ ದ್ರಾವಿಡ ಭಾಷಾ ಸಮಾವೇಶದಿಂದ ದೂರ ಇಡಬಾರದು. ಇದಕ್ಕೂ ಲಿಪಿ ಕಂಡು ಹಿಡಿಯಲಾಗಿದೆ ಎಂದು ಹೇಳಿದರು. ಇದೇ ವೇಳೆ ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವಂತೆ ಒತ್ತಾಯಿಸಿದರು.

ವಿಶ್ವ ತುಳು ಸಮ್ಮೇಳನಕ್ಕೆ ಆಸಕ್ತರು ಹೆಸರು ನೋಂದಾಯಿಸಲು ಧರ್ಮಪಾಲ ಯು. ದೇವಾಡಿಗ (93225 06941), ನಿಟ್ಟೆ ಶಶಿಧರ ಶೆಟ್ಟಿ (98450 83538) ಅಥವಾ ಪುರುಷೋತ್ತಮ ಚೇಂಡ್ಲ (99005 02088 )ಸಂಪರ್ಕಿಸಬಹುದು . ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಮತ್ತು ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ್‌ ಶೆಟ್ಟಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next