Advertisement

ಈ ಬಾರಿ ಪಕ್ಷದಲ್ಲಿ ಒಗ್ಗಟ್ಟಿದೆ, ಗೆಲ್ಲುವ ವಿಶ್ವಾಸವೂ ಇದೆ

12:31 PM Apr 30, 2018 | Team Udayavani |

ಬೆಂಗಳೂರು: ರಾಜಾಜಿನಗರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎರಡನೇ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಮಾಜಿ ಮೇಯರ್‌ ಜಿ. ಪದ್ಮಾವತಿ, ಈಗಾಗಲೇ ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ. ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಜತೆಗೂಡಿ ಗೆಲುವಿಗೆ ಬೇಕಾದ ತಂತ್ರ ರೂಪಿಸುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ವಿರುದ್ಧ ಸ್ಪರ್ಧೆಗೆ ಇಳಿದಿರುವ ಜಿ.ಪದ್ಮಾವತಿ ಅವರು “ಉದಯವಾಣಿ’ಗೆ ನೀಡಿದ ಕಿರು ಸಂದರ್ಶನ.

Advertisement

* ಯಾವ ವಿಚಾರ ಕ್ಷೇತ್ರದ ಮತದಾರರ ಮುಂದಿಟ್ಟು ಪ್ರಚಾರದಲ್ಲಿ ತೊಡಗಿದ್ದೀರಿ?
ರಾಜಾಜಿನಗರ ಕ್ಷೇತ್ರದಲ್ಲಿ ನಾಲ್ಕು ಅವಧಿಗೆ ಒಂದೇ ಪಕ್ಷದವರು ಶಾಸಕರಾಗಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಯುವಕರಿಗೆ ಬೇಕಾದ ಉದ್ಯೋಗ ಸೃಷ್ಟಿಸಿಲ್ಲ. ಆಟದ ಮೈದಾನಗಳು ಅಭಿವೃದ್ಧಿಯಾಗಿಲ್ಲ. ಹಲವು ವಾರ್ಡ್‌ಗಳಲ್ಲಿ ಹತ್ತಾರು ಸಮಸ್ಯೆಗಳಿವೆ. ಇದನ್ನು ಮತದಾರರ ಮುಂದಿಡುತ್ತಿದ್ದೇನೆ.

* ಗೆಲುವಿಗೆ ನಿಮ್ಮ ಕಾರ್ಯತಂತ್ರವೇನು?
ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿಕೊಂಡಿದ್ದೇವೆ. ರಾಜ್ಯ ಸರ್ಕಾರದ ಸಾಧನೆ, ಬಿಬಿಎಂಪಿ ಮೇಯರ್‌ ಆಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮಲ್ಲಿರುವ ಕಾರ್ಯ ಯೋಜನೆಗಳ ಆಧಾರದಲ್ಲಿ ಮತ ಕೇಳುತ್ತಿದ್ದೇನೆ. 

* ಪ್ರಚಾರ ಕಾರ್ಯ ಹೇಗಿದೆ?
ನಿತ್ಯ ಬೆಳಗ್ಗೆ 7 ಗಂಟೆಯಿಂದಲೇ ಕಾರ್ಯಕರ್ತರ ಜತೆಗೂಡಿ ಮತಯಾಚನೆ ಆರಂಭಿಸುತ್ತೇವೆ. ಕ್ಷೇತ್ರ ವ್ಯಾಪ್ತಿಯ ಪಾರ್ಕ್‌, ಹೋಟೆಲ್‌ಗ‌ಳಿಗೆ ಭೇಟಿ ನೀಡಿ, ಅಲ್ಲಿರುವವರಲ್ಲಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಪ್ರತಿ ವಾರ್ಡ್‌ನ ಎಲ್ಲ ಮನೆಗೂ ಹೋಗುತ್ತಿದ್ದೇವೆ. ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕ್ಷೇತ್ರದ ಶಾಸಕರ ವೈಫ‌ಲ್ಯವನ್ನು ಜನರ ಮುಂದಿಡುತ್ತಿದ್ದೇವೆ. ಪ್ರಚಾರಕ್ಕೆ ನೂರಾರು ಸಂಖ್ಯೆಯಲ್ಲಿ ಯುವಜನತೆ ಬರುತ್ತಿದ್ದಾರೆ.

* ಶಾಸಕರಾದರೆ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?
ಕ್ಷೇತ್ರದಲ್ಲಿ ಸುಸಜ್ಜಿತ ಕಲಾಭವನ, ಈಜುಕೊಳ, ಆಟದ ಮೈದಾನ ಇಲ್ಲ.  ಈ ಬಗ್ಗೆ ಗಮನಹರಿಸಲಾಗುವುದು. ಮೊದಲ ಆದ್ಯತೆಯಾಗಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳುತ್ತೇನೆ.  ಆಟದ ಮೈದಾನ ಅಭಿವೃದ್ಧಿ, ಸ್ಫೋರ್ಟ್‌ ಕ್ಲಬ್‌ ಸ್ಪಾಪಿಸಿ, ಯುವತಿಯರಿಗಾಗಿ ಬಹುಉಪಯೋಗಿ ಜಿಮ್‌ ಸ್ಥಾಪನೆಗೆ ಒತ್ತು ನೀಡಲಿದ್ದೇನೆ. ಮಹಿಳಾ ಸಬಲೀಕರಣಕ್ಕೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ ರಾಜಾಜಿನಗರವನ್ನು ಮಾದರಿ ಕ್ಷೇತ್ರ ಮಾಡುವ ಉದ್ದೇಶ ಇದೆ. ನಿರುದ್ಯೋಗ ನಿವಾರಣೆಗೆ ಎರಡು ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜಿಸಲಿದ್ದೇನೆ. ಕ್ಷೇತ್ರದ ಬ್ರಾಹ್ಮಣ ಸಮುದಾಯದವರಿಗಾಗಿ ವೈದಿಕ ಸಭಾಭವನ ನಿರ್ಮಿಸುವ ಯೋಜನೆಯಿದೆ.

Advertisement

* 2008ರಲ್ಲಿ ಸೋಲಿಗೆ ಕಾರಣ?
2008ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನಮ್ಮವರೇ ಕೆಲವರು ಮೋಸ ಮಾಡಿದ್ದರಿಂದ ಸೋಲಬೇಕಾಯಿತು. ಈ ಬಾರಿ ಅಂತಹ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ನ ಎಲ್ಲಾ ಕಾರ್ಪೊರೇಟರ್‌ಗಳು ಒಟ್ಟಾಗಿದ್ದೇವೆ. ಈ ಬಾರಿ ಖಂಡಿತ ಕಾಂಗ್ರೆಸ್‌ ಜಯಭೇರಿ ಭಾರಿಸಲಿದೆ.

* ರಾಜ ಖಾರ್ವಿ ಕೊಡೇರಿ 

Advertisement

Udayavani is now on Telegram. Click here to join our channel and stay updated with the latest news.

Next