Advertisement
ಚಿಕ್ಕಮಗಳೂರಿನಿಂದಲೂ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದು ಇದೇ. ಈ ವರೆಗೆ 10 ಬಾರಿ ಜಯ ಗಳಿಸಿದೆ. ಎರಡು ಉಪಚುನಾವಣೆಗಳಲ್ಲಿ ಗೆದ್ದವರೂ ಕಾಂಗ್ರೆಸ್‌ನವರು; ಒಬ್ಬರು ಇಂದಿರಾ ಗಾಂಧಿ, ಇನ್ನೊಬ್ಬರು ಕೆ. ಜಯಪ್ರಕಾಶ್ ಹೆಗ್ಡೆ. ಆದರೆ ಇದೇ ಮೊದಲ ಬಾರಿ ಕಾಂಗ್ರೆಸ್ ಸ್ಪರ್ಧಿಸದ ಚುನಾವಣೆ ನಡೆಯುತ್ತಿದೆ.
ಉಡುಪಿ ಕ್ಷೇತ್ರದ (1951) ಆರಂಭಿಕ ಹೆಸರು ಸೌತ್ ಕೆನರಾ (ನಾರ್ತ್). ಆಗ ಮದ್ರಾಸ್ ಪ್ರಾಂತದ ವ್ಯಾಪ್ತಿಯಲ್ಲಿತ್ತು. ಆಗಿನ ಪ್ರಥಮ ಸಂಸದರು ಯು. ಶ್ರೀನಿವಾಸ ಮಲ್ಯ. ಕ್ಷೇತ್ರದ ಹೆಸರು ಮೈಸೂರು ರಾಜ್ಯದ ಜತೆ ಸೇರಿ 1957ರಲ್ಲಿ ಉಡುಪಿ ಎಂದು ಬದಲಾಯಿತು. 2009ರ ಬಳಿಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರವಾಯಿತು. 1951ರಿಂದ 1967ರ ವರೆಗೆ ಚಿಕ್ಕಮಗಳೂರು ಕ್ಷೇತ್ರದ ಭಾಗಗಳು ಹಾಸನ ಲೋಕಸಭಾ ಕ್ಷೇತ್ರದೊಂದಿಗೆ ಇದ್ದವು. ಆಗಿನ ಕ್ಷೇತ್ರದ ಹೆಸರು ಹಾಸನ-ಚಿಕ್ಕಮಗಳೂರು. ಇಲ್ಲಿನ ಪ್ರಥಮ ಲೋಕಸಭಾ ಸದಸ್ಯ ಕಾಂಗ್ರೆಸ್‌ನ ಎಚ್. ಸಿದ್ದನಂಜಪ್ಪ. ಅವರು 1957ರಲ್ಲಿ ಅವಿರೋಧವಾಗಿ ಆಯ್ಕೆಯಾದರೆ, 1962ರಲ್ಲಿ ಚುನಾಯಿತರಾದರು. ಇವರು ಒಟ್ಟು 3 ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. 1967ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಪ್ರತ್ಯೇಕವಾದಾಗ ಪ್ರಥಮ ಸದಸ್ಯರಾದವರು ಪಿಎಸ್‌ಪಿಯ ಎಂ. ಹುಚ್ಚೇಗೌಡರು; ಕೊನೆಯ ಸಂಸದರು ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ.
Related Articles
ಪಕ್ಷೇತರರಿಗಿಲ್ಲ ಇಲ್ಲಿ ಮಣೆ
ಈ ಕ್ಷೇತ್ರದಲ್ಲಿ ಪ್ರಥಮ ಬಾರಿ ಚುನಾಯಿತರಾದವರು ಪಿಎಸ್‌ಪಿಯ ಹುಚ್ಚೇಗೌಡರಾದ ಕಾರಣ ಆಗ ಕಾಂಗ್ರೆಸ್‌ಗೆ ಪಿಎಸ್‌ಪಿಯೇ ಪ್ರಬಲ ಅಭ್ಯರ್ಥಿ ಎಂದು ತಿಳಿದುಬರುತ್ತದೆ. ಉಡುಪಿಯಲ್ಲಿಯೂ ಕೆಎಂಪಿಪಿ (ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ), ಎಸ್‌ಪಿ, ಪಿಎಸ್‌ಪಿ ಕಾಂಗ್ರೆಸ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿತ್ತು. ಅನಂತರ ಕಾಂಗ್ರೆಸ್‌ಗೆ ಜನತಾ ಪಾರ್ಟಿ, ಜನತಾದಳ ಎದುರಾಳಿಯಾದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಆ ಸ್ಥಾನವನ್ನು ತುಂಬಿದೆ. ಉಡುಪಿಯಲ್ಲಾಗಲೀ, ಚಿಕ್ಕಮಗಳೂರಿನಲ್ಲಾಗಲೀ ಪಕ್ಷೇತರರು ಒಮ್ಮೆಯೂ ಗೆಲುವು ಸಾಧಿಸಿಲ್ಲ, ಮಾತ್ರವಲ್ಲ ಗಣನೀಯ ಮತಗಳನ್ನೂ ಪಡೆದಿಲ್ಲ.
Advertisement
ಅತಿ ಕಡಿಮೆ, ಅತಿ ಹೆಚ್ಚು ಅಂತರದ ಜಯ1996ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆಸ್ಕರ್ ಫೆರ್ನಾಂಡಿಸ್ ಅತಿ ಕಡಿಮೆ ಮತಗಳಿಂದ ಚುನಾಯಿತರಾಗಿದ್ದರು. ಅವರು 2,35,932 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಐ.ಎಂ. ಜಯರಾಮ ಶೆಟ್ಟಿ 2,33,478 ಮತ ಗಳಿಸಿದ್ದರು. ಆಗಿನ ಗೆಲುವಿನ ಅಂತರ 2,454. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆಗೆ 5,81,168 ಮತ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಗೆ 3,99,525 ಮತ, ಜೆಡಿಎಸ್‌ನ ವಿ. ಧನಂಜಯಕುಮಾರ್‌ಗೆ 14,895 ಮತ, ಸಿಪಿಐಯ ವಿಜಯ ಕುಮಾರ್‌ಗೆ 9,691 ಮತ, ಬಿಎಸ್‌ಪಿಯ ಜಾಕಿರ್ ಹುಸೇನ್‌ಗೆ 7,449 ಮತ, ಆಪ್‌ನ ಗುರುದೇವ್‌ಗೆ 6,049 ಮತಗಳು ದೊರಕಿದ್ದವು. ಆಗಿನ ಅಂತರ 1,81,643. ಇದು ಇತಿಹಾಸದಲ್ಲಿ ಅತಿ ಹೆಚ್ಚು ಅಂತರದ ಗೆಲುವು.