Advertisement
ಕಳೆದ ಎರಡೂಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜೂನ್ ತಿಂಗಳ ಮೊದಲ ವಾರದಲ್ಲೇ ಮುಂಗಾರು ಉತ್ತಮ ಆರಂಭ ಪಡೆದುಕೊಂಡಿದೆ. ಈ ಬಾರಿ ವಾಡಿಕೆಗಿಂತಲೂ ಅತ್ಯಧಿಕ ಮಳೆ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ ಜಲಾಶಯದಲ್ಲಿ ಸುಮಾರು 25 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾನಯದ ಪ್ರದೇಶದಲ್ಲಿ ಈಗ ಮತ್ತೆ ಉತ್ತಮ ಮಳೆಯಾಗುತ್ತಿರುವುದರಿಂದ ಆರು ದಿನಗಳಲ್ಲಿ 10 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ.
Related Articles
Advertisement
ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ತಾಲೂಕಿನ ಅತಿಹೆಚ್ಚು ಪ್ರದೇಶದಲ್ಲಿ ಏಕದಳ ಧಾನ್ಯ ಬಿತ್ತನೆ ನಡೆದಿದೆ. ಈ ಬಾರಿ 2,12,240 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಸದ್ಯ 72,482 ಹೆಕ್ಟೇರ್ ಬಿತ್ತನೆಯಾಗಿದೆ. ಸಂಡೂರು ತಾಲೂಕಿನಲ್ಲಿ 3156 ಹೆಕ್ಟೇರ್ ಜೋಳ, 6565 ಹೆಕ್ಟೇರ್ ಮೆಕ್ಕೆಜೋಳ, ಕೂಡ್ಲಿಗಿ 62790 ಹೆಕ್ಟೇರ್ ಜೋಳ, 11960 ಮೆಕ್ಕೆಜೋಳ, ಹಗರಿಬೊಮ್ಮನಳ್ಳಿ 3725 ಹೆಕ್ಟೇರ್ ಜೋಳ, 6771 ಹೆಕ್ಟೇರ್ ಮೆಕ್ಕೆಜೋಳ, ಹಡಗಲಿ 5570 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ.
ಇನ್ನು ದ್ವಿದಳ ಧಾನ್ಯಗಳ ಬಿತ್ತನೆ ಸ್ವಲ್ಪ ಕಡಿಮೆಯಾಗಿದ್ದು, ಇನ್ನುಮೇಲೆ ಚುರುಕು ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ವರೆಗೆ 5,993 ಹೆಕ್ಟೇರ್‌ನಲ್ಲಿ ತೊಗರಿ, 154 ಹೆಕ್ಟೇರ್‌ಲ್ಲಿ ಹುರುಳಿ ಹೆಸರು 477, ಅಲಸಂದಿ 240 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅದೇರೀತಿ ಜಿಲ್ಲೆಯ ತಾಲೂಕುವಾರು ಬೇಡಿಕೆಯಿರುವ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುತ್ತಿರುವ ಕೃಷಿ ಇಲಾಖೆಯು ಈ ವರೆಗೆ 3840.46 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಿಸಿದೆ. ಈ ಪೈಕಿ 2892 ಕ್ವಿಂಟಲ್ ನಲ್ಲಿ 1950 ಕ್ವಿಂಟಲ್ ಭತ್ತ ವಿತರಿಸಲಾಗಿದೆ. ಜೋಳ 650 ಕ್ವಿಂಟಲ್ ನಲ್ಲಿ 372, ರಾಗಿ 65 ಕ್ವಿಂಟಲ್‌ನಲ್ಲಿ 25, ಮೆಕ್ಕೆಜೋಳ 6508 ಕ್ವಿಂಟಲ್ ಲ್ಲಿ 3178, ಸಜ್ಜೆ 578 ಕ್ವಿಂಟಲ್‌ನಲ್ಲಿ 224, ತೊಗರಿ 900 ಕ್ವಿಂಟಲ್‌ನಲ್ಲಿ 663, ಹೆಸರು 40 ಕ್ವಿಂಟಲ್‌ನಲ್ಲಿ 32 ಕ್ವಿಂಟಲ್ ವಿತರಣೆಯಾಗಿದ್ದು, ಇನ್ನಿತರೆ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಅಲ್ಲದೇ, ಈ ಬಾರಿ ನಿರೀಕ್ಷೆಗೂ ಮೀರಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದ್ದು, ನಿಗದಿತ ಅವಧಿಯಲ್ಲೇ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಹರಿಯುವ ವಿಶ್ವಾಸದಲ್ಲಿರುವ ರೈತರು ಈಗಾಗಲೇ ಬಿತ್ತನೆ ಪೂರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ವೆಂಕೋಬಿ ಸಂಗನಕಲ್ಲು